ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಬೀದರ್‌ ಲೋಕಸಭಾ ಟಿಕೆಟ್‌ ಆಕಾಂಕ್ಷಿ: ಬಸವರಾಜ ಬುಳ್ಳಾ

Last Updated 16 ಅಕ್ಟೋಬರ್ 2018, 12:54 IST
ಅಕ್ಷರ ಗಾತ್ರ

ಬೀದರ್‌: ‘2019ರಲ್ಲಿ ಲೋಕಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದರೆ ಬೀದರ್‌ ಕ್ಷೇತ್ರದಿಂಂದ ಸ್ಪರ್ಧಿಸುವೆ’ ಎಂದು ಕೆಎಸ್‌ಆರ್‌ಟಿಸಿ ಮಾಜಿ ಉಪಾಧ್ಯಕ್ಷ ಬಸವರಾಜ ಬುಳ್ಳಾ ತಿಳಿಸಿದರು.

‘ಜಿಲ್ಲೆಯಲ್ಲಿ 43 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿರುವ ನಾನು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಪ್ರಸ್ತುತ ಯಾರೊಬ್ಬರೂ ಬೀದರ್‌ನಿಂದ ಲೋಕಸಭೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿಲ್ಲ’ ಎಂದು ಮಂಗಳವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

‘ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್ ಅಥವಾ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ್‌ ಪಾಟೀಲ ಅವರು ಆಸಕ್ತರಾಗಿರುವ ಮಾಹಿತಿ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಚೌಕಟ್ಟಿನಲ್ಲಿ ಯಾರು ಬೇಕಾದರೂ ಇಚ್ಛೆ ವ್ಯಕ್ತಪಡಿಸಬಹುದು. ನಾನು ಶೀಘ್ರ ಕಾಂಗ್ರೆಸ್ ವರಿಷ್ಠರಿಗೆ ಪ್ರಾರ್ಥನಾ ಪತ್ರವನ್ನು ಸಲ್ಲಿಸಲಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭಾಲ್ಕಿ ತಾಲ್ಲೂಕಿನ ಬೋಳೆಗಾಂವದ ಕೃಷಿ ಕುಟುಂಬದಿಂದ ಬಂದಿರುವ ನಾನು 1974ರಲ್ಲೇ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿರುವೆ. ಔರಾದ್‌ ಹಾಗೂ ಭಾಲ್ಕಿಯಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೇನೆ. ನಂತರ ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಧುಮುಕಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ನ ಬೀದರ್‌ ಜಿಲ್ಲಾ ಕಿಸಾನ್‌ ಘಟಕದ ಅಧ್ಯಕ್ಷ, ರಾಜ್ಯ ಕಿಸಾನ್‌ ಘಟಕದ ಕಾರ್ಯದರ್ಶಿ, ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಜಿಲ್ಲೆಯ ಪ್ರಮುಖರನ್ನು ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ, ರಾಜ್ಯ ಹಾಗೂ ಕೇಂದ್ರದ ಯೋಜನೆಗಳನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದೇನೆ. ಈ ಎಲ್ಲ ಅಂಶಗಳನ್ನು ಪ್ರಾರ್ಥನಾ ಪತ್ರದಲ್ಲಿ ವಿವರವಾಗಿ ಉಲ್ಲೇಖಿಸಿದ್ದೇನೆ’ ಎಂದು ತಿಳಿಸಿದರು.

‘2017ರ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿದ ನಂತರ 18 ತಿಂಗಳ ಅವಧಿಯಲ್ಲಿ ಬೀದರ್‌ ಜಿಲ್ಲೆಗೆ ಒಟ್ಟು 300 ಬಸ್‌ಗಳನ್ನು ಒದಗಿಸಿದ್ದೇನೆ. ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನು ಕಿತ್ತೆಸೆಯುವುದು ನನ್ನ ಉದ್ದೇಶವಾಗಿದೆ. ಈ ದಿಸೆಯಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸ ಬಯಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT