ಭಾನುವಾರ, ಫೆಬ್ರವರಿ 23, 2020
19 °C
ಇಂಧನ ಉಳಿತಾಯ ಜಾಗೃತಿ ಕಾರ್ಯಕ್ರಮ

ನವೀಕರಿಸಬಹುದಾದ ಪರ್ಯಾಯ ಇಂಧನ ಬಳಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಇಂಧನ ಉಳಿತಾಯ ಹಾಗೂ ಪರಿಸರ ಮಾಲಿನ್ಯ ತಡೆಯಲು ನವೀಕರಿಸಬಹುದಾದ ಇಂಧನ ಬಳಸಬೇಕು’ ಎಂದು ಸಂಪನ್ಮೂಲ ವ್ಯಕ್ತಿ ಅಶೋಕ ಕುಮಾರ ಪಾಟೀಲ ಹೇಳಿದರು.

ನಗರದ ಕರ್ನಾಟಕ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನೇತೃತ್ವದಲ್ಲಿ ಪೆಟ್ರೋಲಿಯಂ ಕನ್ಸರ್ವೇಷನ್‌ ರಿಸರ್ಚ್‌ ಅಸೋಸಿಯೇಷನ್‌ (ಪಿಸಿಆರ್‌ಎ) ಹಾಗೂ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್ ವತಿಯಿಂದ ಸಂರಕ್ಷಣ ಕ್ಷಮತಾ ಮಹೋತ್ಸವ ಅಂಗವಾಗಿ ಇಂಧನ ಉಳಿತಾಯ ಹಾಗೂ ಪರ್ಯಾಯ ಇಂಧನ ಬಳಕೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಾಹನಗಳು ಹೊರಸೂಸುವ ಹೊಗೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಕಾರ್ಬನ್‌ ಡೈ ಆಕ್ಸೈಡ್‌ನಿಂದ ಓಝೋನ್‌ ಪದರಿಗೆ ಹಾನಿಯಾಗುತ್ತಿದೆ. ಹೀಗಾಗಿ ಸಾಧ್ಯವಿದ್ದಷ್ಟು ಪೆಟ್ರೋಲ್‌ ಬಳಕೆಯನ್ನು ಕಡಿಮೆ ಮಾಡಬೇಕಿದೆ’ ಎಂದು ತಿಳಿಸಿದರು.

‘ಸೌರಶಕ್ತಿ ಹಾಗೂ ಪವನಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಮುಂದಿನ ಪೀಳಿಗೆಗೂ ಇಂಧನ ಉಳಿತಾಯ ಮಾಡುವ ದಿಸೆಯಲ್ಲಿ ಕೆಲವೊಂದು ಹೆಜ್ಜೆಗಳನ್ನು ಇಡಬೇಕಿದೆ’ ಎಂದು ಹೇಳಿದರು.

‘ಪ್ರತಿ ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ವಾಹನಗಳನ್ನು ಓಡಿಸುವ ಮೂಲಕ ಇಂಧನ ಉಳಿತಾಯ ಮಾಡಬಹುದು. ವಾಹನಗಳಲ್ಲಿ ಹೆಚ್ಚು ಭಾರದ ಸರಕು ಇರದಂತೆ ಎಚ್ಚರ ವಹಿಸಬೇಕು. ದೂರದ ಪ್ರಯಾಣದ ಸಂದರ್ಭದಲ್ಲಿ ಕಡಿಮೆ ಸಾಮಗ್ರಿಗಳನ್ನು ಒಯ್ಯಬೇಕು. ಪ್ರವಾಸಕ್ಕೆ ಹೋಗುವ ಮೊದಲೇ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ವಾಹನಗಳ ಟೈರ್‌ಗಳಲ್ಲಿ ಸಮ ಪ್ರಮಾಣದಲ್ಲಿ ಗಾಳಿ ಇರುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಟರ್ಬೊ ಇಂಧನ ಬಳಸುವುದಕ್ಕಿಂತ ಉತ್ತಮವಾದ ಇಂಧನ ಬಳಸಬೇಕು. ವಾಹನಗಳನ್ನು ನೆರಳಿನಲ್ಲೇ ನಿಲುಗಡೆ ಮಾಡಬೇಕು. ಟ್ರಾಫಿಕ್‌ನಲ್ಲಿ ವಾಹನಗಳನ್ನು ಬಂದ್‌ ಮಾಡಬೇಕು. ಸಾರಿಗೆ ಬಸ್‌ಗಳಲ್ಲಿ ಅಥವಾ ಸಾಮೂಹಿಕವಾಗಿ ಒಂದೇ ವಾಹನದಲ್ಲಿ ಪ್ರಯಾಣಿಸಬೇಕು. ಕಡಿಮೆ ಅಂತರದ ಸ್ಥಳಗಳಿಗೆ ಹೋಗಲು ಸೈಕಲ್‌ಗಳನ್ನು ಬಳಸಬೇಕು. ಅಂದಾಗ ಮಾತ್ರ ಪೆಟ್ರೋಲ್‌ ಉಳಿತಾಯ ಮಾಡಲು ಸಾಧ್ಯ’ ಎಂದು ತಿಳಿಸಿದರು.

 ಇಂಧನ ಉಳಿತಾಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಥಳದಲ್ಲೇ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಪ್ರತಿಯೊಂದು ಸ್ಪರ್ಧೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡರು.

ಪ್ರಾಚಾರ್ಯೆ ಕಲ್ಪನಾ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ವೈಜನಾಥ ಚಿಕ್ಕಬಸೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಮಹಾರುದ್ರಲಿಂಗ ಪಟ್ಟಣಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರು

ರಸಪ್ರಶ್ನೆ ಸ್ಪರ್ಧೆ:
ಪವನಕುಮಾರ ಸ್ವಾಮಿ, ಪ್ರೇಮಾ ವೈಜನಾಥ, ಸುಜಲ್, ಪ್ರಸಾದ್, ದೇವಿಕಾ ಶಾಂತಕುಮಾರ, ರಾಹುಲ್‌ ಸಾಗಾವೆ, ಅಶ್ವಿನಿ ದೇಶಮುಖ, ಪೃಥ್ವಿ ರಡ್ಡಿ ಹಾಗೂ ಸುಹಾಸಿನಿ.

ಕಿರುನಾಟಕ ವಿಭಾಗದಲ್ಲಿ ‘ಏಕ ಭಾರತ, ಸ್ವಚ್ಛ ಭಾರತ’ ಕಿರುನಾಟಕ ಪ್ರದರ್ಶಿಸಿದ ಗೌರಿಪ್ರಿಯಾ, ಭವ್ಯಾ, ಪವನ್, ರಾಹುಲ್‌ ಹಾಗೂ ಸಂದೀಪ ನೇತೃತ್ವದ ಸಿಬಿಝಡ್‌ ತಂಡ ಹಾಗೂ ‘ಸ್ವಚ್ಛ ಭಾರತ ಅಭಿಯಾನ’ ಕಿರುನಾಟಕ ಪ್ರದರ್ಶಿಸಿದ ಪ್ರಿಯಾಗ್ರುಪ್‌ ತಂಡ ಬಹುಮಾನ ಪಡೆದುಕೊಂಡಿತು.

ಪ್ರಿಯಾಂಕಾ, ನೇಹಾ ಹಾಗೂ ಸಂದೀಪ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು