ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ ಶಾಲಾ ಕೊಠಡಿಗಳಿಂದ ಅಸುರಕ್ಷಿತ ಮಕ್ಕಳು

ಬಸವಕಲ್ಯಾಣ: ಸೌಲಭ್ಯ ಇಲ್ಲದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ
Last Updated 12 ಜನವರಿ 2020, 20:01 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಅನೇಕ ಶಿಥಿಲ ಕೊಠಡಿಗಳಿದ್ದು, ಅಪಾಯದ ಗಂಟೆ ಬಾರಿಸುತ್ತಿವೆ. ಇವುಗಳ ಗೋಡೆಗಳ ಕಲ್ಲುಗಳು ಮತ್ತು ಛಾವಣಿಯ ಸಿಮೆಂಟ್ ಕಿತ್ತು ಹೋಗುತ್ತಿದ್ದರೂ ಸಂಬಂಧಿತರು ನಿರ್ಲಕ್ಷ ವಹಿಸಿದ್ದಾರೆ.

ಎಂಪಿಎಸ್ ಎಂದೇ ಪ್ರಸಿದ್ಧವಾದ ಇಲ್ಲಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬರೋಬ್ಬರಿ 10 ಶಿಥಿಲ ಕೊಠಡಿಗಳಿವೆ. ಸಿ ಆಕಾರದಲ್ಲಿನ ಈ ಕಟ್ಟಡ ಇಲ್ಲಿನ ಅತ್ಯಂತ ಹಳೆಯ ಕಟ್ಟಡಗಳಲ್ಲೊಂದಾಗಿದೆ. ಒಂದು ಕಾಲದಲ್ಲಿ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆ ಈಗ ಅವ್ಯವಸ್ಥೆಯ ಕಾರಣ ವಿದ್ಯಾರ್ಥಿಗಳ ಕೊರತೆ ಅನುಭವಿಸುತ್ತಿದೆ. ವಿಶೇಷವೆಂದರೆ, ಕನ್ನಡ, ಹಿಂದಿ, ಮರಾಠಿ, ಉರ್ದು ಈ ನಾಲ್ಕೂ ಮಾಧ್ಯಮಗಳಲ್ಲಿ ಇಲ್ಲಿ ತರಗತಿಗಳು ನಡೆಯುತ್ತಿದ್ದವು. ಆದರೆ, ಈಗ ಕೆಲ ಮಾಧ್ಯಮದ ತರಗತಿಗಳಲ್ಲಿ ಮಕ್ಕಳೇ ಇಲ್ಲದಂತಾಗಿದೆ.

ಮುಖ್ಯವೆಂದರೆ, ಶಿಕ್ಷಕರ ಸಂಘದ ಗುರುಭವನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಕೂಗಳತೆಯ ಅಂತರದಲ್ಲಿಯೇ ಈ ಶಾಲೆಯಿದೆ. ಹಿಂಭಾಗದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳ ಸಂಪನ್ಮೂಲ ಕೇಂದ್ರವಿದೆ ಆದರೂ, ಶಾಲೆಗೆ ಸಕಲ ವ್ಯವಸ್ಥೆ ಒದಗಿಸಬೇಕು ಎಂಬ ಜನರ ಕೂಗು ಮಾತ್ರ ಯಾರಿಗೂ ಕೇಳಿಸದಂತಾಗಿದೆ.

ಹಾಗೆ ನೋಡಿದರೆ, ಇದರ ಹಿಂದೆ ಮುಂದೆ ವಿವಿಧ ಇಲಾಖೆಗಳ ಕಚೇರಿಗಳ ಸಮುಚ್ಛಯವೇ ಇದೆ. ಸುಸಜ್ಜಿತ ಆಸ್ಪತ್ರೆ ಸಮೀಪದಲ್ಲಿಯೇ ಇದೆ. ಪಕ್ಕದಲ್ಲಿಯೇ ನ್ಯಾಯಾಲಯ ಸಂಕೀರ್ಣವಿದೆ. ಆದರೆ, ಶಿಥಿಲ ಕೊಠಡಿಗಳ ಕಾರಣ ಈ ಶಾಲೆ ಮಾತ್ರ ಪರಿಸರದ ಅಂದಗೆಡಿಸಿದೆ ಎನ್ನಬಹುದು.

ಸುಣ್ಣ ಬಣ್ಣ ಇಲ್ಲದ್ದರಿಂದ ಗೋಡೆಗಳು ಅಂದಗೆಟ್ಟಿವೆ. ಅಲ್ಲಲ್ಲಿ ಗೋಡೆಯ ಕಲ್ಲುಗಳು ನೆಲಕ್ಕುರುಳಿವೆ. ಬಾಗಿಲು ಕಿಟಕಿ ಮುರಿದಿವೆ. ಕೆಲ ವರ್ಷಗಳಿಂದ ಉಪಯೋಗಿಸದ ಕಾರಣ ಹಾಸುಗಲ್ಲುಗಳು ಒಡೆದಿದ್ದು ಕೊಠಡಿಗಳ ತುಂಬ ಮಣ್ಣು ಹರಡಿದೆ. ಇಲಿ, ಹೆಗ್ಗಣ, ಹಂದಿ, ನಾಯಿಗಳ ವಾಸಸ್ಥಾನವಾಗಿದೆ.

ಇವುಗಳ ಸುತ್ತಲಿನಲ್ಲಿ ಕಟ್ಟಿಸಿದ ಹೊಸ ಕೊಠಡಿಗಳಲ್ಲಿ ಪ್ರಾಥಮಿಕ ಶಾಲೆಯ ತರಗತಿಗಳು ನಡೆಯುತ್ತವೆ. ಇದಕ್ಕೆ ಹತ್ತಿಕೊಂಡಿರುವ ಕೊಠಡಿಗಳಲ್ಲಿಯೇ ಅಲ್ಪಸಂಖ್ಯಾತರ ವಸತಿ ಶಾಲೆ ಆರಂಭಗೊಂಡಿದೆ. ಇಲ್ಲಿನ ವಿದ್ಯಾರ್ಥಿಗಳು ಈ ಶಿಥಿಲ ಕೊಠಡಿಗಳ ಹತ್ತಿರ ಆಟ ಆಡುವುದಲ್ಲದೆ ಓಡಾಡುವ ಕಾರಣ ಭಯ ಕಾಡುತ್ತಿದೆ. ಕೆಲ ಮಕ್ಕಳು ಆಟವಾಡುತ್ತ ಕೊಠಡಿಗಳ ಒಳಗೆಯೂ ಹೋಗುತ್ತಿವೆ. ಹೀಗಾಗಿ ಯಾವಾಗ ಏನಾಗುತ್ತದೋ ಎಂಬ ಪರಿಸ್ಥಿತಿಯಿದೆ.

ಇವುಗಳನ್ನು ನೆಲಸಮಗೊಳಿಸಲು ಸಂಬಂಧಿತರಿಗೆ ಅನೇಕ ಸಲ ವಿನಂತಿಸಲಾಗಿದೆ ಎಂದು ಇಲ್ಲಿನ ಶಿಕ್ಷಕರು ಹೇಳುತ್ತಾರಾದರೂ ಇದುವರೆಗೆ ಪ್ರಯೋಜನ ಆಗಿಲ್ಲ. ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯೂ ಈ ಬಗ್ಗೆ ಅನೇಕ ಸಲ ಚರ್ಚೆ ಆಗಿದೆ. ಪಟ್ಟಣ ಹಾಗೂ ತಾಲ್ಲೂಕಿನಲ್ಲಿನ ಶಿಥಿಲ ಶಾಲಾ ಕೊಠಡಿಗಳ ಪಟ್ಟಿ ಒದಗಿಸಿದರೆ ಅವುಗಳನ್ನು ಕೆಡವಲಾಗುವುದು ಎಂದು ಸಂಬಂಧಿತರು ಭರವಸೆ ನೀಡಿದ್ದರೂ ಯಾರೂ ಕ್ರಮ ತೆಗದುಕೊಂಡಿಲ್ಲ.

ಅಂಚೆ ಕಚೇರಿ ಬಳಿಯ ಸರ್ಕಾರಿ ಪ್ರೌಢಶಾಲೆಯ ಪರಿಸ್ಥಿತಿಯೂ ಇದೆ ಆಗಿದೆ. ಇಲ್ಲಿಯೂ ನಾಲ್ಕು ಮಾಧ್ಯಮದ ತರಗತಿಗಳು ನಡೆಯುತ್ತವೆ. ಈ ಶಾಲೆಯೂ ಜಿಲ್ಲೆಯಲ್ಲಿನ ಅತ್ಯಂತ ಹಳೆಯ ಶಾಲೆಯಾಗಿದ್ದು ಕಟ್ಟಡವೂ ಶಿಥಿಲಗೊಂಡಿದೆ. ಹೈದರಾಬಾದ್ ನಿಜಾಮ್ ಆಡಳಿತವಿದ್ದಾಗ ಅವರು ನಿರ್ಮಿಸಿದ್ದ ಭವ್ಯ ಪ್ರವಾಸಿ ಬಂಗಲೆಯಲ್ಲಿಯೇ ಮೊದಲು ತರಗತಿಗಳು ನಡೆಯುತ್ತಿದ್ದವು. ಅದರ ಸುತ್ತಲಿನಲ್ಲಿ ಕೆಲ ಕೊಠಡಿಗಳನ್ನು ನಿರ್ಮಿಸಲಾಗಿತ್ತಾದರೂ ಅವೂ ಹಳೆಯದ್ದಾಗಿವೆ.

ಪ್ರವಾಸಿ ಬಂಗಲೆ ಕೆಡವಿ ಅಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ ಕಟ್ಟಲಾಗಿದೆ. ಆದರೆ, ಸುತ್ತಲಿನ ಪ್ರೌಢಶಾಲೆಯ ಹಳೆಯ ಕೊಠಡಿಗಳನ್ನು ಮಾತ್ರ ಇದುವರೆಗೆ ಹಾಗೆಯೇ ಇಡಲಾಗಿದೆ. ಕೆಲವು ತಗಡಿನ ಛಾವಣಿಯ ಕೊಠಡಿಗಳಿದ್ದು ಈಗಲೂ ಅಂಥವುಗಳಲ್ಲಿಯೇ ತರಗತಿಗಳು ನಡೆಯುತ್ತಿವೆ. ಈ ಕೊಠಡಿಗಳ ಒಂದು ಭಾಗದಿಂದ ರಸ್ತೆ ಹಾದು ಹೋಗಿದ್ದು ಈ ಭಾಗದ ಕಿಟಕಿಗಳನ್ನು ಮುಚ್ಚಿದ್ದರಿಂದ ಒಳಗೆ ಕತ್ತಲು ಆವರಿಸಿರುತ್ತದೆ. ಆದರೂ ಬೇರೆ ಜಾಗವಿಲ್ಲದ್ದರಿಂದ ಮಕ್ಕಳನ್ನು ಇಲ್ಲಿಯೇ ಕೂಡಿಸಲಾಗುತ್ತಿದೆ.

ಇವು ಹಾಗೂ ಇನ್ನೂ ಕೆಲ ಹಳೆಯ ಶಿಥಿಲ ಕೊಠಡಿಗಳಿಂದಾಗಿ ಇಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಇಂಥ ಕೊಠಡಿಗಳು ಮಳೆ ನೀರಿನಿಂದ ಸೋರುತ್ತವೆ. ಆಗ ಮಕ್ಕಳಿಗೆ ಕುಳಿತುಕೊಳ್ಳಲು ಜಾಗವೇ ಇರುವುದಿಲ್ಲ. ಹೀಗಾಗಿ ಪಾಠ, ಪ್ರವಚನ ನಡೆಯುವುದೇ ಇಲ್ಲ. ಬೇರೆ ಸಮಯದಲ್ಲಿಯೂ ಛಾವಣಿ ನೋಡುತ್ತ ಯಾವಾಗ ಎಲ್ಲಿಂದ ಸಿಮೆಂಟ್ ಕುಸಿಯುತ್ತದೋ ಎಂಬ ಭಯದಿಂದಲೇ ಪಾಠ ಬೋಧನೆ ಮಾಡಬೇಕಾಗುತ್ತದೆ ಎಂದು ಶಿಕ್ಷಕರು ಹೇಳುತ್ತಾರೆ. ಈಚೆಗೆ ಇಲ್ಲಿನ ಕೆಲ ಕೊಠಡಿಗಳನ್ನು ಬೀಳಿಸಿ ಹೊಸ ಕಟ್ಟಡ ಕಟ್ಟಲಾಗಿದ್ದರೂ ಹಳೆಯವು ಇನ್ನು ಬಹಳಷ್ಟಿವೆ ಎಂದಿದ್ದಾರೆ.

ಹೀಗೆ ಸರ್ಕಾರಿ ಶಾಲೆಗಳಲ್ಲಿ ಶಿಥಿಲ ಕೊಠಡಿಗಳು ಇದ್ದುದರಿಂದ ಹಾಗೂ ಅನಾನುಕೂಲತೆಯ ಕಾರಣ ಹೆಚ್ಚಿನ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಬೋಧಕ ಸಿಬ್ಬಂದಿ ನುರಿತವರು ಹಾಗೂ ಉನ್ನತ ಶಿಕ್ಷಣ ಪಡೆದವರು ಇದ್ದರೂ ಉಪಯೋಗಕ್ಕೆ ಬರುತ್ತಿಲ್ಲ. ಆದ್ದರಿಂದ ಇನ್ನು ಮುಂದಾದರೂ ಶೀಘ್ರದಲ್ಲಿ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್ಲೆಡೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT