ಶನಿವಾರ, ಜುಲೈ 31, 2021
27 °C
ಕ್ಷಯರೋಗ, ಎಚ್‌ಐವಿ, ಆಸ್ತಮಾ ರೋಗಿಗಳ ಪರದಾಟ

ಬೀದರ್: ಆರೋಗ್ಯ ಕಾರ್ಯಕ್ರಮಗಳಿಗೆ ಹಿನ್ನಡೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂರು ತಿಂಗಳಿಂದ ಕೋವಿಡ್‌ 19 ಸೋಂಕು ನಿಯಂತ್ರಣ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿರುವ ಕಾರಣ ಜಿಲ್ಲೆಯಲ್ಲಿ ತಾಯಿ, ಮಕ್ಕಳ ಆರೋಗ್ಯ, ಕ್ಷಯರೋಗ, ಎಚ್‌ಐವಿ, ಡಯಾಲಿಸಿಸ್‌ ಹಾಗೂ ಆಸ್ತಮಾ ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

ಕಂಟೇನ್ಮೆಂಟ್‌ ವಲಯಗಳಲ್ಲಿ ಮಾತ್ರ ವೈದ್ಯಕೀಯ ಸಿಬ್ಬಂದಿ ಸಮರ್ಪಕ ಕಾರ್ಯ ನಿರ್ವಹಿಸಿದ್ದಾರೆ. ಅವರು ಸಹ ಜ್ವರ ಇರುವವರನ್ನು ಪತ್ತೆ ಮಾಡಲು ಮನೆ ಮನೆ ಸಮೀಕ್ಷೆ ನಡೆಸಿದರೆ ಹೊರತು ಅನ್ಯ ರೋಗಿಗಳ ಮಾಹಿತಿ ಪಡೆಯಲಿಲ್ಲ. ಕೆಲ ರೋಗಿಗಳು ತಮ್ಮ ಅಳಲು ತೋಡಿಕೊಂಡರೂ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಓಲ್ಡ್‌ಸಿಟಿಯ ನಿವಾಸಿಗಳು ದೂರಿದ್ದಾರೆ.

ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕ್ಷಿಪ್ರಗತಿಯಲ್ಲಿ ಆರೋಗ್ಯ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ನೂತನ ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಜಿಲ್ಲೆಗೆ ಬಂದ ಮೊದಲ ದಿನದಿಂದಲೇ ಆರೋಗ್ಯ ಇಲಾಖೆಯ ಸುಧಾರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿಮಾನ ನಿಲ್ದಾಣದಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಬೆಂಬಿಡದಂತೆ ಕೆಲಸ ಮಾಡುತ್ತಿದ್ದಾರೆ. ನಿತ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನೂ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ ತೋರಿರುವುದು ಹಾಗೂ ಸರಿಯಾದ ದಾಖಲೆಗಳನ್ನು ಇಡದಿರುವುದು ಜಿಲ್ಲಾಧಿಕಾರಿ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಪರಿಗಣಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಬೆವರಿಳಿಸುತ್ತಿದ್ದಾರೆ.

‘ಸೋಂಕಿತರ ಸಂಪರ್ಕಕ್ಕೆ ಬಂದ ಕಾರಣ ನನ್ನನ್ನು ಚಿಟಗುಪ್ಪದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಅಧಿಕಾರಿಗಳು ನನಗೆ ಸೋಂಕಿನ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ. ಸಮತೋಲಿತ ಆಹಾರ ಕೊಡಲಿಲ್ಲ. ತಟ್ಟೆ ತುಂಬ ಬ್ರೆಡ್‌, ಅನ್ನ ತಂದಿಟ್ಟು ಹೋಗುತ್ತಿದ್ದರು. ಅಗತ್ಯವಿರುವಷ್ಟು ಕೊಟ್ಟಿದ್ದರೆ ಆಹಾರ ಉಳಿತಾಯವಾಗುತ್ತಿತ್ತು’ ಎಂದು ಕೋವಿಡ್ 19 ಸೋಂಕಿನಿಂದ ಗುಣಮುಖರಾದ ಚಿಟಗುಪ್ಪದ ರಾಮಪುರೆ ಹೇಳುತ್ತಾರೆ.

‘ಸೋಂಕಿತರ ಸಂಪರ್ಕಕ್ಕೆ ಬಂದಾಗ ಸರಿಯಾದ ತಿಳಿವಳಿಕೆ ನೀಡುವ ಬದಲು ಒತ್ತಡ ಹಾಕಿ 10 ಜನರ ಹೆಸರು ಬರೆಸಿಕೊಂಡರು. ಆಸ್ಪತ್ರೆಗೆ ಬರದಿದ್ದರೆ ಪೊಲೀಸ್‌ ವಾಹನದಲ್ಲಿ ನಿಮ್ಮನ್ನು ಕರೆದೊಯ್ಯಬೇಕಾದೀತು ಎಂದು ಬೆದರಿಸಿದರು. ಅಧಿಕಾರಿಗಳ ವರ್ತನೆ ಬೇಸರ ತಂದಿದೆ. ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದರೆ ಮಾತ್ರ ಸೋಂಕು ಹರಡುವಿಕೆ ನಿಯಂತ್ರಿಸಲು ಸಾಧ್ಯ’ ಎಂದು ಓಲ್ಡ್‌ಸಿಟಿಯ ಮಹಿಳೆ ತಿಳಿಸಿದರು.

‘ಕೋವಿಡ್‌ 19 ಸೋಂಕಿನ ಪ್ರಯುಕ್ತ ಓಲ್ಡ್‌ಸಿಟಿಯನ್ನು ಎರಡೂವರೆ ತಿಂಗಳು ಸೀಲ್‌ಡೌನ್‌ ಮಾಡಲಾಗಿತ್ತು. ವೈದ್ಯಕೀಯ ಸಿಬ್ಬಂದಿ ಮನೆ ಮನೆಗೆ ಭೇಟಿ ಕೊಟ್ಟರು. ಬೇರೆ ರೋಗಿಗಳಿಗೆ ಚಿಕಿತ್ಸೆ ದೊರೆಯಲಿಲ್ಲ. ಗಂಭೀರ ಕಾಯಿಲೆಗಳಿಂದ ಬಳಲುವವರ ಆರೋಗ್ಯದಲ್ಲಿ ಇಂದಿಗೂ ಸುಧಾರಣೆಯಾಗಿಲ್ಲ. ಜಿಲ್ಲಾಡಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ಸಂಖ್ಯೆ ಕೊಟ್ಟಿದ್ದರೂ ಅವರು ಸ್ಪಂದಿಸಲಿಲ್ಲ. ಡಿಎಚ್‌ಒ ಅವರು ಜನರ ಕರೆಗಳನ್ನೇ ಸ್ವೀಕರಿಸುವುದಿಲ್ಲ. ಯಾರಿಗೆ ದೂರಬೇಕು ಅರ್ಥವಾಗುತ್ತಿಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ನಬಿ ಖುರೇಶಿ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು