ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರರಂಗದ ಬೀದರ್ ತಾರೆ: ಪ್ರಧಾನ ಪಾತ್ರದ ನಿರೀಕ್ಷೆಯಲ್ಲಿ ‘ಹಣ್ಮು ಪಾಜಿ’

Last Updated 20 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಜನವಾಡ: ಈಚಿನ ದಿನಗಳಲ್ಲಿ ಗಡಿ ಜಿಲ್ಲೆ ಬೀದರ್ ಕಲಾವಿದರೂ ಕನ್ನಡ ಚಲನಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪಾತ್ರಗಳಿಗೆ ಜೀವ ತುಂಬಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅಂಥವರ ಸಾಲಿಗೆ ಸೇರಿದವರೇ ‘ಹಣ್ಮು ಪಾಜಿ'.

ಬೀದರ್ ತಾಲ್ಲೂಕಿನ ಶಹಾಪುರ ಗ್ರಾಮದ 26 ವರ್ಷದ ಹಣ್ಮು ಪಾಜಿ, ಸುದೀಪ್ ಪ್ರಧಾನ ಪಾತ್ರದಲ್ಲಿರುವ ‘ದಿ ವಿಲನ್’, ಉಪೇಂದ್ರ ಅಭಿನಯದ ‘ಮುಕುಂದ ಮುರಾರಿ’, ‘ಲೈಫ್ 360’, ‘ಗಾಂಚಲಿ’ ಚಿತ್ರಗಳಲ್ಲಿ ನಟಿಸಿ ಪ್ರತಿಭೆ ಪ್ರದರ್ಶಿಸಿದ್ದಾರೆ.

ಸದ್ಯ ‘ಸಖಿ’ ವಿಡಿಯೊ ಆಲ್ಬಂ ಸಾಂಗ್‍ನಲ್ಲಿ ಬಿಜಿಯಾಗಿದ್ದಾರೆ. ಅದನ್ನು ತಮ್ಮ ಜನ್ಮದಿನವಾದ ಏಪ್ರಿಲ್ 23ಕ್ಕೆ ಬಿಡುಗಡೆಗೊಳಿಸುವ ತಯಾರಿಯಲ್ಲಿದ್ದಾರೆ.

ಸುದೀಪ್ ಕಟ್ಟಾ ಅಭಿಮಾನಿ ಆಗಿರುವ ಅವರು, ಅವರಂತೆಯೇ ಕೇಶ ವಿನ್ಯಾಸ ಮಾಡಿಸಿದ್ದಾರೆ. ಗಡ್ಡ, ಮೀಸೆ ಬಿಟ್ಟಿದ್ದಾರೆ. ತಮ್ಮ ಮೋಹಕ ನಗುವಿನಿಂದಲೇ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಾರೆ.

ನಟರಾದ ಸುದೀಪ್, ಅರ್ಜುನ ಕಿಶೋರ, ಆದರ್ಶ ಗೌಡ ಸೇರಿದಂತೆ ಹಲವು ಕಲಾವಿದರೊಂದಿಗೆ ನಂಟು ಹೊಂದಿದ್ದಾರೆ. ಚಿತ್ರರಂಗದಲ್ಲಿ ಒಂದಿಲ್ಲೊಂದು ದಿನ ಅದೃಷ್ಟ ಒಲಿಯಬಹುದು ಎನ್ನುವ ನಿರೀಕ್ಷೆಯಲ್ಲಿಯೇ, ತಮ್ಮ ಪಯಣ ಮುಂದುವರಿಸಿದ್ದಾರೆ.

ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯಲು ಗಾಡ್ ಫಾದರ್ ಬೇಕು. ನನಗೆ ಯಾರೂ ಗಾಡ್ ಫಾದರ್ ಇಲ್ಲ. ಸಹ ಕಲಾವಿದನಾಗಿ ಅನೇಕ ಚಿತ್ರಗಳಲ್ಲಿ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿದ್ದೇನೆ. ನಾಯಕ, ಖಳನಾಯಕ ಇಲ್ಲವೇ ಯಾವುದೇ ಪ್ರಧಾನ ಪಾತ್ರ ದೊರೆತರೆ ಹವಾ ಸೃಷ್ಟಿಸುವಂತಹ ಅಭಿನಯ ತೋರುವ ಹೆಬ್ಬಯಕೆ ಹೊಂದಿದ್ದೇನೆ ಎಂದು ತಮ್ಮ ಮನದಾಳವನ್ನು ಬಿಚ್ಚಿಡುತ್ತಾರೆ ಹಣ್ಮು ಪಾಜಿ.

ನನಗೆ ವಿದ್ಯಾರ್ಥಿ ದೆಸೆಯಿಂದಲೇ ಚಿತ್ರರಂಗದ ಆಕರ್ಷಣೆ ಇತ್ತು. ‘ಹುಚ್ಚ’ ಚಿತ್ರದ ನಂತರ ಸುದೀಪ್ ಅವರ ಕಟ್ಟಾ ಅಭಿಮಾನಿಯಾದೆ. ಅಣ್ಣ ಬಸವರಾಜ ಅವರ ಮೂಲಕ ಚಿತ್ರರಂಗದ ಸಂಪರ್ಕ ಬೆಳೆಸಿದೆ. ಕಲಾವಿದರ ಪರಿಚಯ ಮಾಡಿಕೊಂಡೆ. ಚಿತ್ರರಂಗದ ಒಳ-ಹೊರಗನ್ನು ಅರಿತುಕೊಂಡೆ ಎಂದು ಹೇಳುತ್ತಾರೆ.

ಪಿಯುಸಿಯಲ್ಲಿದ್ದಾಗ ಆಗಾಗ ಚಿತ್ರಗಳ ಶೂಟಿಂಗ್ ನೋಡಲು ಬೆಂಗಳೂರಿಗೆ ಹೋಗುತ್ತಿದ್ದೆ. ನನಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇರುವುದು ಗೊತ್ತಿದ್ದ ಕಾರಣ ಉಪನ್ಯಾಸಕರೂ ಅವಕಾಶ ಕಲ್ಪಿಸುತ್ತಿದ್ದರು. ಸ್ವಂತ ನಿರ್ದೇಶನದಲ್ಲಿ ‘ಹೈಜಾಕ್’ ಚಿತ್ರ ತಯಾರಿಸಲು ಮುಂದಾದೆ. ಬೀದರ್‍ನ ಬಿ.ವಿ.ಬಿ ಕಾಲೇಜು ಸೇರಿ ವಿವಿಧೆಡೆ 2013 ರಿಂದ 2016 ರ ವರೆಗೆ ಚಿತ್ರೀಕರಣ ಮಾಡಿದೆ. ಕಾರಣಾಂತರದಿಂದ ಚಿತ್ರ ಬಿಡುಗಡೆಯಾಗಲಿಲ್ಲ. ನಂತರ ‘ರೋಹಿಣಿ’ ಚಿತ್ರ ಕೈಗೆತ್ತಿಕೊಂಡರೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೂ, ನಿರಾಶನಾಗಿಲ್ಲ. ಒಳ್ಳೆಯ ದಿನಗಳು ಬಂದೇ ಬರಲಿವೆ. ಮುಂದೊಂದು ದಿನ ಆ ಎರಡೂ ಚಿತ್ರಗಳು ಪೂರ್ಣಗೊಂಡು, ಪ್ರೇಕ್ಷಕರ ಮನ ಗೆಲ್ಲಲಿವೆ ಎನ್ನುವ ವಿಶ್ವಾಸ ಇದೆ ಎಂದು ನುಡಿಯುತ್ತಾರೆ ಅವರು.

ಸ್ನೇಹ ಜೀವಿಯಾಗಿರುವ ಹಣ್ಮು ಪಾಜಿ ದೊಡ್ಡ ಗೆಳೆಯರ ಬಳಗವನ್ನು ಹೊಂದಿದ್ದಾರೆ. ಕಲಾ ಸೇವೆ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಒಳ್ಳೆಯ ಪಾತ್ರಗಳು, ಪ್ರೋತ್ಸಾಹ ದೊರೆತರೆ ಚಿತ್ರರಂಗದಲ್ಲಿ ಹೆಸರು ಮಾಡಬೇಕು, ಜಿಲ್ಲೆಗೆ ಕೀರ್ತಿ ತರಬೇಕು ಎನ್ನುವ ಅವರ ಕನಸು ನನಸಾಗಲಿದೆ.

ಹಣ್ಮು ಪಾಜಿ ಅವರ ಮೊಬೈಲ್ ಸಂಖ್ಯೆ 9449031557.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT