ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಆತ್ಮಹತ್ಯೆ: ಕಾರಣ ಇನ್ನೂ ನಿಗೂಢ

ಏಳು ತಿಂಗಳ ಹಿಂದೆಯಷ್ಟೇ ಅಬಕಾರಿ ಇಲಾಖೆಗೆ ಸೇರಿದ್ದ ರೇಖಾ
Last Updated 25 ಫೆಬ್ರುವರಿ 2020, 9:58 IST
ಅಕ್ಷರ ಗಾತ್ರ

ಬೀದರ್: ಬಸವಕಲ್ಯಾಣದ ಅಬಕಾರಿ ಪಿಎಸ್‌ಐ ಆತ್ಮಹತ್ಯೆ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ‘ರೇಖಾ, ಕಚೇರಿಯಲ್ಲಿ ಎಂದೂ ಕಿರಿಕಿರಿ ಮಾಡಿಕೊಂಡಿಲ್ಲ’ ಎಂದು ಅಬಕಾರಿ ಇಲಾಖೆಯ ಸಿಬ್ಬಂದಿ ಆಡಿಕೊಂಡರೆ, ‘ಮಗಳ ಸಾವಿಗೆ ಯಾರೂ ಕಾರಣರಲ್ಲ’ ಎಂದು ತಂದೆ ಹಣಮಂತರಾಯ ಹೇಳಿದ್ದಾರೆ.

ಕಲಬುರ್ಗಿ ಜಿಲ್ಲೆಯ ಕಡಗಂಚಿಯ ರೇಖಾ ಮತಗೊಂಡ ಅವರು ಅದೇ ಗ್ರಾಮದ ಕರಣಕುಮಾರ ಭೀಮರಾವ್ ಕೋರಿ ಅವರನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೊದಲು ಕಲಬುರ್ಗಿಯ ರಾಘವೇಂದ್ರ ಪೊಲೀಸ್‌ ಠಾಣೆಯಲ್ಲಿ ಮೂರು ವರ್ಷ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿ ಕೆಲಸ ಮಾಡಿದ್ದರು. ನಂತರ ಕೆಪಿಎಸ್‌ಸಿ ಪರೀಕ್ಷೆ ಬರೆದು ಅಬಕಾರಿ ಇಲಾಖೆ ಸಬ್ ಇನ್‌ಸ್ಪೆಕ್ಟರ್‌ ಆಗಿ ಏಳು ತಿಂಗಳ ಹಿಂದೆ ಬಸವಕಲ್ಯಾಣದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

ಬಸವಕಲ್ಯಾಣದ ಮಹಾದೇವನಗರದ ನಾಗರಾಳೆ ಅವರಿಗೆ ಸೇರಿದ ಮನೆಯನ್ನು ಬಾಡಿಗೆ ಪಡೆದು ಪತಿ ಹಾಗೂ ಅತ್ತೆಯೊಂದಿಗೆ ವಾಸವಾಗಿದ್ದರು. ಪತಿ ಕಲಬುರ್ಗಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳಿಂದ ಆ ಕೆಲಸವನ್ನು ಬಿಟ್ಟಿದ್ದರು. ಅವರಿಗೆ ಏಳು ವರ್ಷ ಹಾಗೂ ಒಂದೂವರೆ ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ.

ತಡರಾತ್ರಿ ವರೆಗೆ ಕಚೇರಿಯಲ್ಲಿ ಕೆಲಸ ಮಾಡಿ ಮನೆಗೆ ಬಂದಿದ್ದರು. ಬೆಳಿಗ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ.

‘ರೇಖಾ ಅವರು ಕಚೇರಿಯಲ್ಲಿ ಎಂದೂ ಕಿರಿಕಿರಿ ಮಾಡಿಕೊಂಡಿಲ್ಲ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಇಲಾಖೆಯಿಂದ ತೊಂದರೆ ಆಗಿತ್ತು ಎನ್ನುವುದರ ಬಗೆಗೆ ರೇಖಾ ಅವರ ತಂದೆ ಅಥವಾ ಪತಿ ಯಾವುದೇ ದೂರು ನೀಡಿಲ್ಲ’ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ವೀರಣ್ಣ ತಿಳಿಸಿದ್ದಾರೆ.

‘ಈವರೆಗೂ ಯಾರೂ ದೂರು ನೀಡಿಲ್ಲ. ರೇಖಾ ಅವರ ತಂದೆ ಹಣಮಂತರಾಯ ಕೂಡ ಮಗಳ ಸಾವಿಗೆ ಯಾರೂ ಕಾರಣರಲ್ಲವೆಂದು ಹೇಳಿಕೆ ನೀಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ತಿಳಿಸಿದ್ದಾರೆ.

‘ಸೊಸೆ 8 ಗಂಟೆಯ ವರೆಗೆ ಮಲಗಿಕೊಳ್ಳುತ್ತಾಳೆ. ಮನೆಯಲ್ಲಿ ನಾನೊಬ್ಬಳೇ ಕೆಲಸ ಮಾಡಬೇಕು’ ಎಂದು ಅತ್ತೆ  ಗೊಣಗಾಡಿದ್ದರು ಅಷ್ಟೇ ಎನ್ನುವುದು ನೆರೆ ಹೊರೆಯವರಿಂದ ತಿಳಿದು ಬಂದಿದೆ. ಆದರೆ, ರೇಖಾ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರಿದಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT