ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಶಿಕ್ಷಣಕ್ಕೆ ವಿಪುಲ ಅವಕಾಶ: ಬೀದರ್‌ನ ಐಟಿಐಗಳಲ್ಲಿ 3,840 ಸೀಟು ಲಭ್ಯ

ಜಿಲ್ಲೆಯ ಐಟಿಐಗಳಲ್ಲಿ 3,840 ಸೀಟುಗಳು ಲಭ್ಯ
Last Updated 2 ಜೂನ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ವಿಪುಲ ಅವಕಾಶ ಇದೆ. ಎಸ್ಸೆಸ್ಸೆಲ್ಸಿ ಪಾಸಾಗಿರುವ ವಿದ್ಯಾರ್ಥಿಗಳು ಜಿಲ್ಲೆಯಲ್ಲಿರುವ ವಿವಿಧ ಕೈಗಾರಿಕೆ ತರಬೇತಿ ಸಂಸ್ಥೆ ಹಾಗೂ ಪಾಲಿಟೆಕ್ನಿಕ್‌ ಗಳಲ್ಲಿ ಪ್ರವೇಶ ಪಡೆಯಬಹುದು. ಅಲ್ಪಾವಧಿಯ ಕೋರ್ಸ್‌ಗಳನ್ನು ಪೂರೈಸಿ ತಕ್ಷಣಯನ್ನೂ ನೌಕರಿಯನ್ನೂ ಗಿಟ್ಬಿಸಬಹುದು.

ಜಿಲ್ಲೆಯಲ್ಲಿ 6 ಸರ್ಕಾರಿ, 6 ಅನುದಾನಿತ ಹಾಗೂ 50 ಅನುದಾನರಹಿತ ಸಂಸ್ಥೆಗಳು ಸೇರಿ 62 ಕೈಗಾರಿಕೆ ತರಬೇತಿ ಸಂಸ್ಥೆಗಳಿವೆ. ಪ್ರತಿ ವರ್ಷ ಕನಿಷ್ಠ 3,840 ವಿದ್ಯಾರ್ಥಿಗಳು ಐಟಿಐಗೆ ಪ್ರವೇಶ ಪಡೆಯುತ್ತಿದ್ದಾರೆ.

ಎರಡು ವರ್ಷಗಳ ಅವಧಿಯ ಎಲೆಕ್ಟ್ರಿಷಿಯನ್, ಫಿಟ್ಟರ್, ಎಲೆಕ್ಟ್ರಾನಿಕಲ್ ಮೆಕ್ಯಾನಿಕ್, ಎಂಆರ್‍ಎಎಸಿ, ಎಂವಿಎಂ, ಡ್ರಾಫ್ಟ್ಸ್ಮನ್ ಸಿವಿಲ್, ಡ್ರಾಫ್ಟ್ಸ್ಮನ್ ಮೆಕ್ಯಾನಿಕ್ ಕೋರ್ಸ್ಗಳಿವೆ. ಒಂದು ವರ್ಷದ ಡಿಸೇಲ್ ಮೆಕ್ಯಾನಿಕ್, ಕೋಪಾ, ವೆಲ್ಡರ್, ಉಡುಪು ತಯಾರಿಕೆ, ಹೊಲಿಗೆ ತಂತ್ರಜ್ಞಾನ ವೃತ್ತಿಪರ ಕೋರ್ಸ್‌ಗಳೂ ಇವೆ. ಸರ್ಕಾರಿ, ಅನುದಾನಿತ ಸಂಸ್ಥೆಗಳಲ್ಲಿ ಮೆರಿಟ್‌ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತಿದೆ.

ಜಿಲ್ಲೆಯ ಐದು ಸರ್ಕಾರಿ ಐಟಿಐಗಳಲ್ಲಿ ಉದ್ಯೋಗ ಯೋಜನೆ ಅಡಿಯಲ್ಲಿ ಹೊಸದಾಗಿ ಕೈಗಾರಿಕಾ ರೊಬೊಟಿಕ್ ಮತ್ತು ಡಿಜಿಟಲ್ ಮ್ಯಾನುಫೆಕ್ಚರಿಂಗ್ ಟೆಕ್ನಿಷಿಯನ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ಕೋರ್ಸ್‌ ಆರಂಭಿಸಲಾಗಿದೆ. ಪ್ರಾಯೋಗಿಕ ಕೌಶಲಕ್ಕೆ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳನ್ನು ಕುಶಲಕರ್ಮಿಗಳನ್ನಾಗಿಸುವುದು ಐಟಿೈ ಉದ್ದೇಶವಾಗಿದೆ.

ಬೀದರ್‌ನ ಸರ್ಕಾರಿ ಐಟಿಐನಲ್ಲಿ ಒಟ್ಟು 260, ಔರಾದ್‌ನಲ್ಲಿ 112, ಕಮಲನಗರದಲ್ಲಿ 40, ಭಾಲ್ಕಿಯಲ್ಲಿ 84, ಹುಮನಾಬಾದ್‌ನಲ್ಲಿ 88 ಹಾಗೂ ಬಸವಕಲ್ಯಾಣ ಸರ್ಕಾರಿ ಐಟಿಐನಲ್ಲಿ 176 ಸೀಟುಗಳಿವೆ. ಜಿಲ್ಲೆಯ ಸರ್ಕಾರಿ ಐಟಿಐಗಳಲ್ಲಿ 760, ಅನುದಾನಿತ ಐಟಿಐಗಳಲ್ಲಿ 580 ಹಾಗೂ ಅನುದಾನ ರಹಿತ ಐಟಿಐಗಳಲ್ಲಿ 2,500 ಸೇರಿ ಒಟ್ಟು 3,840 ಸೀಟುಗಳಿವೆ.

ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಜೂನ್‌ 6 ಪ್ರವೇಶ ಪಡೆಯಲು ಕೊನೆಯ ದಿನವಾಗಿದೆ. ₹ 1,200 ವಾರ್ಷಿಕ ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದಾಗಿದೆ.

‘ಐಟಿಐ ಪಾಸಾದವರಿಗೆ ಬೀದರ್‌ನ ಐಟಿಐನಲ್ಲೇ ಕ್ಯಾಂಪಸ್‌ ಸಂದರ್ಶನ ನಡೆಸಿ ಉದ್ಯೋಗಾವಕಾಶ ಒದಗಿಸಿಕೊಡಲಾಗುತ್ತಿದೆ.. ಈವರೆಗೆ 10 ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ’ ಎಂದು ಐಟಿಐ ಪ್ರಾಚಾರ್ಯ ಶಿವಶಂಕರ ಟೋಕರೆ ಹೇಳುತ್ತಾರೆ.

* * *

ಆರು ವಿಷಯಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳು

ಬೀದರ್‌ ಜಿಲ್ಲೆಯ ಪಾಲಿಟೆಕ್ನಿಕ್‌ಗಳಲ್ಲಿ ಆರು ವಿಷಯಗಳಲ್ಲಿ ಮೂರು ವರ್ಷಗಳ ಅವಧಿಯ ಡಿಪ್ಲೊಮಾ ಶಿಕ್ಷಣ ಪಡೆಯಬಹುದಾಗಿದೆ.

ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್, ಕಂಪ್ಯೂಟರ್‌ ಸೈನ್ಸ್ ಎಂಜಿನಿಯರಿಂಗ್, ಆಟೊಮೊಬೈಲ್‌ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯುನಿಕೇಷನ್‌ ಹಾಗೂ ಕಮರ್ಷಿಯಲ್‌ ಪ್ರಾಕ್ಟಿಸ್‌ನಲ್ಲಿ ತಲಾ 60 ಸೀಟುಗಳು ಇವೆ.

ಕಮರ್ಷಿಯಲ್‌ ಪ್ರಾಕ್ಟಿಸ್‌ ಕನ್ನಡದಲ್ಲೇ ಓದಬಹುದು. ಕಂಪ್ಯೂಟರ್‌ ಸೈನ್ಸ್ ಎಂಜಿನಿಯರಿಂಗ್ ಇದೇ ವರ್ಷ ಆರಂಭವಾಗಿದೆ. ಮೊದಲ ಬಂದವರಿಗೆ ಮೊದಲು ಪ್ರವೇಶ ಕೊಟ್ಟಿರುವ ಕಾರಣ ಪ್ರಮುಖ ವಿಭಾಗಗಳಲ್ಲಿ ಸೀಟು ಭರ್ತಿಯಾಗಿವೆ.

ಸಾಮಾನ್ಯ ಅಭ್ಯರ್ಥಿಗೆ ₹ 4,270, ಪರಿಶಿಷ್ಟ ವಿದ್ಯಾರ್ಥಿಗಳಿಗೆ 2,535 ಹಾಗೂ ಹಿಂದುಳಿದ ವರ್ಗದವರಿಗೆ ₹ 960 ಶುಲ್ಕ ಇದೆ ಎಂದು ಉಪನ್ಯಾಸಕ ಶಿವಕುಮಾರ ಕಟ್ಟೆ ಹೇಳುತ್ತಾರೆ.

* * *

ಜಿಟಿಟಿಸಿ ಡಿಪ್ಲೊಮಾ

ಕಲಬುರಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ.) ದಲ್ಲಿ ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೆಕಿಂಗ್ ಹಾಗೂ ಡಿಪ್ಲೊಮಾ ಇನ್ ಪ್ರಿಶಿಷನ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು.

ಈ ಕೋರ್ಸ್ ಮೂರು ವರ್ಷ ಅವಧಿಯದ್ದಾಗಿದೆ. ಐ.ಟಿ.ಐ. ಪಾಸಾದ ವಿದ್ಯಾರ್ಥಿಗಳು ನೇರವಾಗಿ 2ನೇ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ವಿವರಗಳಿಗೆ ಕಲಬುರಗಿಯ ಸಂತ್ರಾಸ್‌ವಾಡಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿ.ಟಿ.ಟಿ.ಸಿ) ಕಚೇರಿ ದೂರವಾಣಿ 08472-295163ಗೆ ಸಂಪರ್ಕಿಸಬಹುದಾಗಿದೆ.

* * *

ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ

10ನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿ ಉತ್ತೀರ್ಣರಾದವರು ಮೂರು ವರ್ಷಗಳ ಅವಧಿಯ ‘ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ’ (ಡಿಪಿಎಂಟಿ) ಅಥವಾ ‘ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ’ (ಡಿಪಿಟಿ)ಯಲ್ಲಿ ಪ್ರವೇಶ ಪಡೆಯಬಹುದು.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನವಾಗಿದೆ. ಕೋರ್ಸ್‍ಗಳ ಮಾಹಿತಿ ಮತ್ತು ಪ್ರವೇಶಕ್ಕಾಗಿ ಮೈಸೂರಿನಲ್ಲಿರುವ ಸಿಪೆಟ್ ದೂರವಾಣಿ ಸಂಖ್ಯೆ 0821-2510618, ಮೊಬೈಲ್ ಸಂಖ್ಯೆ 9483431968ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT