ಶನಿವಾರ, ಅಕ್ಟೋಬರ್ 1, 2022
20 °C
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮ

ಬೈಕ್‌ ರ್‍ಯಾಲಿ, ನಡಿಗೆ, ಧ್ವಜ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಆಯೋಜಿಸಿರುವ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಬುಧವಾರ ಅಧಿಕೃತ ಚಾಲನೆ ದೊರೆಯಿತು. ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದಲ್ಲಿ ಬೈಕ್‌ ರ್‍ಯಾಲಿ ಅದ್ದೂರಿಯಾಗಿ ನಡೆಯಿತು.

ನಗರದ ಸಿದ್ಧಾರೂಢ ಮಠದ ಆವರಣದಿಂದ ಆರಂಭವಾದ ಬೈಕ್‌ ರ್‍ಯಾಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನೆಹರೂ ಕ್ರೀಡಾಂಗಣಕ್ಕೆ ಬಂದು ಸಮಾರೋಪಗೊಂಡಿತು. ರ್‍ಯಾಲಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಕಿಶೋರ ಬಾಬು ಬೈಕ್‌ ಚಲಾಯಿಸಿದರೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಿಂದೆ ಕುಳಿತಿದ್ದರು.

ಇದ್ದಕ್ಕೂ ಮುನ್ನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಬೈಕ್‌ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿ, ಅಗಸ್ಟ್ 13 ರಿಂದ 15 ರವರೆಗೆ ಪ್ರತಿ ಮನೆಗಳ ಮೇಲೆ ರಾಷ್ಟ ಧ್ವಜ ಹಾರಿಸುವಂತೆ ಜಾಗೃತಿ ಮೂಡಿಸಲು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

 
ಹಲವು ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಬೈಕ್ ರ‍್ಯಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತಸ ಉಂಟು ಮಾಡಿದೆ ಎಂದರು.
ಗುರುವಾರ ಬೆಳಿಗ್ಗೆ 7 ಗಂಟೆಗೆ ಒಂದು ಕಿ.ಮೀ ಉದ್ದದ ರಾಷ್ಟ್ರ ಧ್ವಜ ಯಾತ್ರೆ ಸಿದ್ಧಾರೂಢ ಮಠದಿಂದ ಆರಂಭವಾಗಲಿದೆ. ಅಂದು ಬೆಳಿಗ್ಗೆ 9.15 ಕ್ಕೆ ಭಾರತೀಯ ವಾಯು ಪಡೆ ವಿಮಾನಗಳು ತ್ರಿವರ್ಣದಲ್ಲಿ ಹೊಗೆ ಸೂಸುತ್ತ ಪ್ರದರ್ಶನ ನೀಡಲಿವೆ. ಸಾರ್ವಜನಿಕರು ವಿಮಾನ ಹಾರಾಟ ಪ್ರದರ್ಶನ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

 ಆಗಸ್ಟ್ 15 ರಂದು ಮಧ್ಯಾಹ್ನ 12 ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ನೂರು ಮೀಟರ್ ಎತ್ತರದ ಕಂಬದ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡಲಾಗುವುದು ಎಂದು ಹೇಳಿದರು.

ರಾಷ್ಟ್ರ ಧ್ವಜವನ್ನು ನಿರಂತರವಾಗಿ ಬೈಕ್‌ಗಳಿಗೆ ಕಟ್ಟಿಕೊಳ್ಳುವ ಹಾಗಿಲ್ಲ. ಬೈಕ್ ರ‍್ಯಾಲಿ ಮುಗಿದ ನಂತರ ಎಲ್ಲರೂ ತಮ್ಮ ತಮ್ಮ ಧ್ವಜಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳ ಮೇಲೆ ಹಾರಿಸಬೇಕು. ನಂತರ ಅವುಗಳನ್ನು ಸುರಕ್ಷಿತ ಜಾಗದಲ್ಲಿ ಇಡಬೇಕು ಎಂದು ತಿಳಿಸಿದರು.

ರ‍್ಯಾಲಿಯಲ್ಲಿ ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಕನ್ನಡಾಂಬೆ ಗೆಳೆಯರ ಬಳಗದ ವಿರೂಪಾಕ್ಷ ಗಾದಗಿ, ವಿವಿಧ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು. ಶಿಕ್ಷಕರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

 
* * *

ಜಿಲ್ಲಾ ವಕೀಲರ ಸಂಘದಲ್ಲಿ ಧ್ವಜ ವಿತರಣೆ

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದಲ್ಲಿ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಕೀಲರಿಗೆ ಧ್ವಜ ವಿತರಿಸಲಾಯಿತು.

ಬುಡಾ ಅಧ್ಯಕ್ಷ ಬಾಬು ವಾಲಿ ಅವರು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಚೇಗರೆಡ್ಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕಕುಮಾರ ಮಾನೂರೆ ಅವರಿಗೆ ಧ್ವಜ ನೀಡಿದರು.

ಬುಡಾ ಆಯುಕ್ತ ಅಭಯಕುಮಾರ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರವಿಕುಮಾರ ವಡ್ಡೆ, ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಪಾಟೀಲ, ಜಂಟಿ ಕಾರ್ಯದರ್ಶಿ ಕೃಷ್ಣ ಬಿರಾದಾರ, ಖಜಾಂಚಿ ಅಬ್ದುಲ್ ಹಫೀಜ್, ಬಸವರಾಜ ಬುಳ್ಳಾ, ಧೂಳಪ್ಪ ವಕೀಲ, ಕೆ.ವಿ. ನೇಳಗೆ, ಅನಿಲ ಕರಂಜಿ ಇದ್ದರು.

* * *

ಮನೆ ಮನೆಗೆ ತ್ರಿವರ್ಣ ಧ್ವಜ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಮನೆ ಮನೆಗೆ ತ್ರಿವರ್ಣ ಧ್ವಜ ಅಭಿಯಾನ ನಡೆಯಿತು.

ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಅಭಿಯಾನಕ್ಕೆ ಚಾಲನೆ ನೀಡಿದರು. ಡಾ.ದಿಲೀಪಕುಮಾರ, ಡಾ.ಶ್ರೀಕಾಂತ ಕುಲಕರ್ಣಿ, ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ.ಎನ್‌.ಎ.ಪಾಟೀಲ, ಡಾ.ಬಸವರಾಜ ಅವಟಿ, ಡಾ.ಯು.ಎಸ್.‌ಜಾಧವ, ಡಾ.ಎಂ.ಡಿ.ಸೂರಣಗಿ ಇದ್ದರು.

ಬೀದರ್‌ನ ನಂದಿ ಕಾಲೊನಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಚಿಣ್ಣರು ಮನೆ ಮನೆಗೆ ರಾಷ್ಟ್ರ ಧ್ವಜ ವಿತರಿಸಿದರು. ಯುವ ಮುಖಂಡ ವಿಕ್ರಮ ಮುದಾಳೆ, ನಿತಿನ್ ಕರ್ಪೂರ, ಸಿದ್ಧರಾಮೇಶ್ವರ ರೆಡ್ಡಿ, ಡಾ. ಸಂಗಮೇಶ, ಮ್ರಿನಲ್ ಮುದಾಳೆ, ಮೈರಾ ಮುದಾಳೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.