ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | 69 ಬೈಕ್‌ ಜಪ್ತಿ, 25 ಜನರ ಬಂಧನ

ಅಂತರರಾಜ್ಯ ಕಳ್ಳರು ವಶಕ್ಕೆ; ಶ್ರೀಗಂಧ, ಚಿನ್ನಾಭರಣ ಜಪ್ತಿ
Published : 30 ಸೆಪ್ಟೆಂಬರ್ 2024, 16:12 IST
Last Updated : 30 ಸೆಪ್ಟೆಂಬರ್ 2024, 16:12 IST
ಫಾಲೋ ಮಾಡಿ
Comments

ಬೀದರ್‌: ಜಿಲ್ಲೆಯ ಎಂಟು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ನಡೆದ ಕಳವು ಪ್ರಕರಣಗಳನ್ನು ಭೇದಿಸಿರುವ ಬೀದರ್‌ ಜಿಲ್ಲಾ ಪೊಲೀಸರು ₹43.87 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿ, 25 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಔರಾದ್‌ ಠಾಣೆ ವ್ಯಾಪ್ತಿಯ 19 ಬೈಕ್‌ಗಳು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳವು ಮಾಡಲಾಗಿದ್ದ ₹35.57 ಲಕ್ಷ ಮೌಲ್ಯದ ಒಟ್ಟು 69 ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರಲ್ಲಿ ಹೆಚ್ಚಿನ ಬೈಕ್‌ಗಳು ಹೀರೊ ಸ್ಪ್ಲೆಂಡರ್‌ ಕಂಪನಿಗೆ ಸೇರಿವೆ. ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೈಕ್‌ಗಳನ್ನು ಜಪ್ತಿ ಮಾಡಿಕೊಂಡ ಪ್ರಕರಣ ಇದಾಗಿದೆ.

‘ನಕಲಿ ಕೀ ಹಾಗೂ ಸೈಡ್‌ ಲಾಕ್‌ ಮುರಿದು ಬೈಕ್‌ ಕಳ್ಳತನ ಮಾಡಲಾಗಿತ್ತು. ಇದರಲ್ಲಿ ಭಾಲ್ಕಿ ತಾಲ್ಲೂಕಿನ ಎಂಟು ಜನರು ಸೇರಿದ್ದಾರೆ. ಇವರು ಮೊದಲಿನಿಂದಲೂ ಬೈಕ್‌ ಕಳವು ಮಾಡುತ್ತಿದ್ದರು. ತೆಲಂಗಾಣದ ಜಹೀರಾಬಾದ್‌ನ ಮೂವರು, ಕಾಮರೆಡ್ಡಿಯ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ತಿಳಿಸಿದರು.

‘ಬೈಕ್‌ ಕಳವು ಮಾಡಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಇದರಲ್ಲಿ ಆರ್‌ಟಿಒನವರ ಪಾತ್ರ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಎಸ್ಪಿ ಸ್ಪಷ್ಟಪಡಿಸಿದರು.

ಭಾಲ್ಕಿ ಪಟ್ಟಣದಿಂದ ಸ್ವಲ್ಪ ದೂರದ ಹೊಲವೊಂದರಿಂದ ಶ್ರೀಗಂಧದ ಮರ ಕಡಿದು ಅದರ ತುಂಡುಗಳನ್ನು ಮಾಡಿ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ. 7 ಕೆ.ಜಿ. ಶ್ರೀಗಂಧದ ತುಂಡುಗಳ ಬೆಲೆ ₹12,600. ಕಮಲನಗರ ಠಾಣೆ ವ್ಯಾಪ್ತಿಯಲ್ಲಿ 28 ಕುರಿಗಳನ್ನು ಕದ್ದು, ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ. 75 ಗ್ರಾಂ ಚಿನ್ನಾಭರಣ, 25 ತೊಲ ಬೆಳ್ಳಿ, 2 ನೀರಿನ ಪಂಪ್‌ಸೆಟ್‌ಗಳು ಸೇರಿದಂತೆ ಒಟ್ಟು 83 ಪ್ರಕರಣಗಳಲ್ಲಿ ₹43.87 ಲಕ್ಷದ ಸ್ವತ್ತು ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಮಹೇಶ ಮೇಘಣ್ಣನವರ, ಡಿವೈಎಸ್ಪಿ ಶಿವನಗೌಡ ಪಾಟೀಲ, ಗಾಂಧಿಗಂಜ್‌ ಠಾಣೆ ಸಿಪಿಐ ಹನುಮರೆಡ್ಡೆಪ್ಪ ಮತ್ತಿತರರು ಹಾಜರಿದ್ದರು.

ಜಪ್ತಿ ಮಾಡಿದ ಸ್ವತ್ತಿನ ವಿವರ

* ₹35.57 ಲಕ್ಷದ 69 ಬೈಕ್‌ ಜಪ್ತಿ

* ₹5.95 ಲಕ್ಷದ 75 ಗ್ರಾಂ ಚಿನ್ನಾಭರಣ

* ₹1.50 ಲಕ್ಷದ 28 ಕುರಿ

* ₹21 ಸಾವಿರ ಮೌಲ್ಯದ ಬೆಳ್ಳಿ

* ₹11 ಸಾವಿರ ನಗದು

* ₹40 ಸಾವಿರದ 2 ನೀರಿನ ಪಂಪ್‌ಸೆಟ್‌ಗಳು

* ₹12 ಸಾವಿರದ 7 ಕೆ.ಜಿ ಶ್ರೀಗಂಧದ ತುಂಡುಗಳು

* ₹43.87 ಲಕ್ಷ ಒಟ್ಟು

‘ವೈಷಮ್ಯ ಇರಲಿಲ್ಲ’

‘ಬೀದರ್‌ನಲ್ಲಿ ಮಹಿಳಾ ಪಿಎಸ್‌ಐ ಮಲ್ಲಮ್ಮ ಮೇಲೆ ಹಲ್ಲೆ ನಡೆಸಿದ ನ್ಯೂ ಟೌನ್‌ ಠಾಣೆ ಕಾನ್‌ಸ್ಟೆಬಲ್‌ ಧನರಾಜ್‌ನನ್ನು ಈಗಾಗಲೇ ಅಮಾನತುಪಡಿಸಲಾಗಿದೆ. ಇಬ್ಬರು ಬೇರೆ ಬೇರೆ ಠಾಣೆಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಇಬ್ಬರ ನಡುವೆ ಯಾವುದೇ ವೈಷಮ್ಯ ಇರಲಿಲ್ಲ. ಪರೀಕ್ಷಾ ಕೇಂದ್ರದ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಸಂದರ್ಭದಲ್ಲಿ ಏಕಾಏಕಿ ನಡೆದ ಘಟನೆ ಇದೆ. ಇದು ಪೂರ್ವಯೋಜಿತ ಕೃತ್ಯವಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT