ಭಯೋತ್ಪಾದನೆ ಆರೋಪಿ ಸಾಧ್ವಿಗೆ ಟಿಕೆಟ್,ಬಿಜೆಪಿಯಿಂದ ದೇಶ ದ್ರೋಹ–ದಿನೇಶ ಗುಂಡೂರಾವ್

ಸೋಮವಾರ, ಮೇ 27, 2019
29 °C
'ಭಯೋತ್ಪಾದನೆ ಆರೋಪಿ ಸಾಧ್ವಿಗೆ ಟಿಕೆಟ್‌'

ಭಯೋತ್ಪಾದನೆ ಆರೋಪಿ ಸಾಧ್ವಿಗೆ ಟಿಕೆಟ್,ಬಿಜೆಪಿಯಿಂದ ದೇಶ ದ್ರೋಹ–ದಿನೇಶ ಗುಂಡೂರಾವ್

Published:
Updated:
Prajavani

ಬೀದರ್‌: ‘ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ, ಭಯೋತ್ಪಾದನೆಯ ಆರೋಪಿಗೆ ಪಕ್ಷದ ಟಿಕೆಟ್‌ ಕೊಟ್ಟು ಬಿಜೆಪಿ ರಾಷ್ಟ್ರ ಭಕ್ತಿಯ ಬಗ್ಗೆ ಮಾತನಾಡುತ್ತಿದೆ. ವಾಸ್ತವದಲ್ಲಿ ರಾಷ್ಟ್ರಪ್ರೇಮದ ಹೆಸರಲ್ಲಿ ದೇಶ ದ್ರೋಹದ ಕೆಲಸ ಮಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದರು.

‘ರಾಷ್ಟ್ರೀಯತೆ ಹಾಗೂ ರಾಷ್ಟ್ರಪ್ರೇಮವನ್ನು ಲೋಕಸಭಾ ಚುನಾವಣಾ ವಿಷಯವನ್ನಾಗಿ ಮಾಡಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಯನ್ನು ಬದಿಗೊತ್ತಿದೆ’ ಎಂದು ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ರಾಷ್ಟ್ರ ವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. ಆದರೆ ಬಿಜೆಪಿ ಮುಖಂಡರು ಪಾಕಿಸ್ತಾನ ಬಿಟ್ಟರೆ ಏನನ್ನೂ ಮಾತನಾಡುತ್ತಿಲ್ಲ. ಪಾಕಿಸ್ತಾನದಲ್ಲಿ ನವಾಜ್ ಷರೀಫ್‌ ಅವರನ್ನು ಭೇಟಿಯಾದಾಗ ನರೇಂದ್ರ ಮೋದಿ ಅವರ ರಾಷ್ಟ್ರ ಪ್ರೇಮ ಎಲ್ಲಿಗೆ ಹೋಗಿತ್ತು’ ಎಂದು ಪ್ರಶ್ನಿಸಿದರು.

‘ಮಹಾರಾಷ್ಟ್ರ ಎಟಿಎಸ್‌ ಮುಖ್ಯಸ್ಥ ಹೇಮಂತ ಕರ್ಕರೆ ಬಾಂಬ್‌ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದು ತಮ್ಮ ಶಾಪದ ಕಾರಣದಿಂದಲೇ ಎಂದು ಮಾಳೆಗಾಂವ ಬಾಂಬ್‌ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿದ್ದ ಬಿಜೆಪಿ ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ’ ಎಂದು ಆರೋಪಿಸಿದರು.

‘ಬಿಜೆಪಿ, ಬೇರೆಯವರ ರಾಷ್ಟ್ರಪೇಮವನ್ನು ಪ್ರಶ್ನಿಸುವ ಮೂಲಕ ದೇಶದಲ್ಲಿ ಅಪನಂಬಿಕೆಯನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಮೊದಲ ಯುದ್ಧ ನಡೆದಾಗ ನರೇಂದ್ರ ಮೋದಿ ಜನಿಸಿರಲಿಲ್ಲ. ಜಿಎಸ್‌ಟಿ ಗೊಂದಲ, ಪುಲ್ವಾಮಾ ಘಟನೆ, ಉದ್ಯೋಗ ಸೃಷ್ಟಿಯ ಭರವಸೆಯ ಪ್ರಶ್ನೆಗಳಿಗೆ ಇಂದಿಗೂ ಉತ್ತರಿಸಿಲ್ಲ’ ಎಂದು ಟೀಕಿಸಿದರು.

ಬಿಜೆಪಿ, ರಾಜಕೀಯ ಮುಖಂಡರಿಗೆ ಬ್ಲಾಕ್‌ ಮಾಡುತ್ತಿದೆ. ಕೇಂದ್ರದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅವುಗಳ ಮೇಲಿನ ವಿಶ್ವಾಸಾರ್ಹತೆ ಹೋಗುವಂತೆ ಮಾಡಿ ಸಂವಿಧಾನ ಉಳಿಸಲು ಬಿಜೆಪಿಯನ್ನು ಸೋಲಿಸಬೇಕಾಗಿದೆ’ ಎಂದು ಹೇಳಿದರು.

ಕಾಶ್ಮೀರದಲ್ಲಿ ಪ್ರತ್ಯೇಕತವಾದಿಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತು. ಈಗ 371 ಪರಿಚ್ಛೇದವನ್ನು ರದ್ದು ಮಾಡುವ ಕುರಿತು ಮಾತನಾಡುತ್ತಿದೆ. ನರೇಂದ್ರ ಮೋದಿ ಮಹಾ ಸುಳ್ಳುಗಾರ. ಈ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಸೋಲಿಸಲಿದ್ದು, ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಕೇಂದ್ರದಲ್ಲಿ ಯುಪಿಎ–3 ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಇದ್ದರೂ ಒಂದು ಅಲ್ಪಸಂಖ್ಯಾತ, ಎಂಟು ಜನ ಹಿಂದುಳಿದ ವರ್ಗದವರಿಗೆ ಟಿಕೆಟ್‌ ನೀಡಿದೆ. ಆದರೆ ಬಿಜೆಪಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಒಬ್ಬರಿಗೂ ಟಿಕೆಟ್‌ ಕೊಟ್ಟಿಲ್ಲ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲ’ ಎಂದು ಟೀಕಿಸಿದರು.

ಬೀದರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಚಲನಚಿತ್ರ ನಟಿ ಅಭಿನಯಾ, ಬಸವರಾಜ ಬುಳ್ಳಾ, ಚಂದ್ರಾಸಿಂಗ್, ಆನಂದ ದೇವಪ್ಪ, ದತ್ತಾತ್ರಿ ಮೂಲಗೆ, ಡಿ.ಕೆ.ಸಂಜುಕುಮಾರ, ಚಂದ್ರಕಾಂತ ಹಿಪ್ಪಳಗಾಂವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !