ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ | ಟಿಕೆಟ್‌ ಘೋಷಣೆ ವಿಳಂಬ: ಪ್ರಚಾರಕ್ಕೆ ಹಿಂದೇಟು

Last Updated 10 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಬೀದರ್: ಎಲ್ಲ ರಾಷ್ಟ್ರೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಕೇಂದ್ರ ಬಿಂದುವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯದ್ದೇ ಪ್ರಾಬಲ್ಯ ಇದೆ. ಡಬಲ್ ಎಂಜಿನ್‌ ಸರ್ಕಾರ ಅಸ್ತಿತ್ವದಲ್ಲಿರುವ ಕಾರಣ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಧ್ವಜ ನೆಟ್ಟಿದೆ. ಆದರೆ, ಬಿಜೆಪಿ ತೆಕ್ಕೆಯಿಂದ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮಬಲದ ಸ್ಪರ್ಧೆವೊಡ್ಡಲು ಹರ ಸಾಹಸ ನಡೆಸಿವೆ.

ಕಾಂಗ್ರೆಸ್‌ ಶಾಸಕರಾಗಿದ್ದ ಬಿ.ನಾರಾಯಣರಾವ್‌ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ ಅತ್ಯಧಿಕ ಮತಗಳನ್ನು ಪಡೆದು ಗೆದ್ದಿದ್ದಾರೆ. ರಸ್ತೆ, ಕಟ್ಟಡ ಕಾಮಗಾರಿಗಳ ಗುತ್ತಿಗೆ ಆಪ್ತರಿಗೆ ವಹಿಸಿಕೊಡುವ ವಿಷಯದಲ್ಲಿ ಶಾಸಕ ಶರಣು ಸಲಗರ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಮಧ್ಯೆ ಮನಸ್ತಾಪವಾಗಿ ಇಬ್ಬರ ಸಂಬಂಧಗಳು ಹಳಸಿವೆ. ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಾಗಿಲ್ಲ. ಪಕ್ಷದಲ್ಲಿ ಈಗ ಮೂರು ಗುಂಪುಗಳಾಗಿವೆ. ಹೀಗಾಗಿ ಹೊಸ ಆಕಾಂಕ್ಷಿಗಳಿಗೂ ರೆಕ್ಕೆಪುಕ್ಕ ಬಂದಿವೆ.

ಶಾಸಕ ಹಾಗೂ ಕೇಂದ್ರ ಸಚಿವರ ನಡುವಿನ ವೈಮನಸ್ಸಿನಿಂದಾಗಿ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಚುನಾವಣೆಯ ಪೂರ್ವದಲ್ಲಿ ಭಿನ್ನಮತ ಶಮನಗೊಳ್ಳದಿದ್ದರೆ, ಚುನಾವಣೆ ವೇಳೆ ಅಸಮಾಧಾನ ಭುಗಿಲೆದ್ದು ಪಕ್ಷಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಕಾರ್ಯಕರ್ತರು ಆಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ ಇನ್ನೂ ಟಿಕೆಟ್ ಅಂತಿಮಗೊಳಿಸಿಲ್ಲ. ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ದೊಡ್ಡ ಪಟ್ಪಿಯೇ ಇದೆ. ಧರ್ಮಸಿಂಗ್‌ ಪುತ್ರ ವಿಜಯಸಿಂಗ್, ಮಾಜಿ ಶಾಸಕ ನಾರಾಯಣರಾವ್‌ ಪತ್ನಿ ಮಾಲಾ, ಧನರಾಜ್‌ ತಾಳಂಪಳ್ಳಿ ಹಾಗೂ ಆನಂದ ದೇವಪ್ಪ ಅವರು ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಜಾತಿ ಜನಸಂಖ್ಯೆ ಲೆಕ್ಕ ಇಟ್ಟುಕೊಂಡೇ ಕೆಲವರು ಟಿಕೆಟ್‌ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡ ಪ್ರಜಾಧ್ವನಿ ಯಾತ್ರೆ ಮೂಲಕ ಈಚೆಗೆ ಬಸವಕಲ್ಯಾಣಕ್ಕೆ ಬರುವ ಮುನ್ನಾ ದಿನ ಎರಡು ಗುಂಪುಗಳು ಮುಖಂಡರ ಸಮ್ಮುಖದಲ್ಲೇ ಹೊಡೆದಾಡಿವೆ. ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇರುವುದು ಬಹಿರಂಗವಾಗಿದೆ. ಇದು ಟಿಕೆಟ್‌ ಹಂಚಿಕೆಗೂ ಮುಖಂಡರಿಗೆ ತಲೆ ನೋವಾಗಿದೆ.

ಬಿ.ನಾರಾಯಣರಾವ್‌ ಅವರಂತೆ ಅಭಿವೃದ್ಧಿಯ ಮನಸ್ಸುಳ್ಳ ಹಾಗೂ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅಭ್ಯರ್ಥಿಅಗತ್ಯವಿದೆ. ಕಾಂಗ್ರೆಸ್‌ ಮುಖಂಡರು ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಎಡವಿದರೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ವಿಶ್ಲೇಷಿಸುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಖರ್ಚು ಮಾಡುವ ಪ್ರಭಾವಿ ವ್ಯಕ್ತಿಯನ್ನೇ ಕಣಕ್ಕಿಳಿಸಲು ಕಾಂಗ್ರೆಸ್‌ ಪ್ರಯತ್ನ ನಡೆಸಿದೆ.

ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯಸ್ರಬ್ಅಲಿ ಖಾದ್ರಿ ಅವರಿಗೇ ಜೆಡಿಎಸ್‌ ಮತ್ತೆ ಟಿಕೆಟ್‌ ಘೋಷಿಸಿದೆ. ಜೆಡಿಎಸ್‌ ಸಂಪೂರ್ಣ ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿಕೊಂಡಿದೆ. ಎಚ್‌.ಡಿ.ಕುಮಾರ ಸ್ವಾಮಿ ಅವರು ಜಿಲ್ಲೆಯಲ್ಲಿ ಪಂಚರಥ ಯಾತ್ರೆ ಕೈಗೊಂಡರೂ ಪ್ರಚಾರ ಬಿರುಸುಗೊಂಡಿಲ್ಲ. ಬಸವಕಲ್ಯಾಣದಲ್ಲಿ ಪ್ರಚಾರ ಆರಂಭವಾಗಿಲ್ಲ.

‘ಪ್ರಸ್ತುತ ಯಸ್ರಬ್ಅಲಿ ಖಾದ್ರಿ ಅವರಿಗೆ ಪಕ್ಷ ಟಿಕೆಟ್‌ ಪ್ರಕಟಿಸಿದೆ. ಚುನಾವಣೆಗೆ ಇನ್ನೂ ಸಮಯ ಇದೆ. ಬಿಜೆಪಿಯಿಂದ ಕೆಲವರು ಜೆಡಿಎಸ್‌ಗೆ ಬರಲು ಆಸಕ್ತಿ ತೋರಿಸಿದ್ದಾರೆ. ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿ ಬದಲಾದರೂ ಅಚ್ಚರಿ ಇಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳುತ್ತಾರೆ.

ಬಿರುಸುಗೊಳ್ಳದ ಜೆಡಿಎಸ್ ಪ್ರಚಾರ
ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯಸ್ರಬ್ಅಲಿ ಖಾದ್ರಿ ಅವರಿಗೇ ಜೆಡಿಎಸ್‌ ಮತ್ತೆ ಟಿಕೆಟ್‌ ಘೋಷಿಸಿದೆ. ಜೆಡಿಎಸ್‌ ಸಂಪೂರ್ಣ ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿಕೊಂಡಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಪಂಚ ರತ್ನ ಯಾತ್ರೆ ಕೈಗೊಂಡರೂ ಪ್ರಚಾರ ಬಿರುಸುಗೊಂಡಿಲ್ಲ. ಬಸವಕಲ್ಯಾಣದಲ್ಲಿ ಪ್ರಚಾರ ಆರಂಭವಾಗಿಲ್ಲ.

‘ಪ್ರಸ್ತುತ ಯಸ್ರಬ್ ಅಲಿ ಖಾದ್ರಿ ಅವರಿಗೆ ಪಕ್ಷ ಟಿಕೆಟ್‌ ಪ್ರಕಟಿಸಿದೆ. ಚುನಾವಣೆಗೆ ಇನ್ನೂ ಸಮಯ ಇದೆ. ಬಿಜೆಪಿಯಿಂದ ಕೆಲವರು ಜೆಡಿಎಸ್‌ಗೆ ಬರಲು ಆಸಕ್ತಿ ತೋರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಅಭ್ಯರ್ಥಿ ಬದಲಾದರೂ ಅಚ್ಚರಿ ಇಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT