ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಿಜೆಪಿ ಸಂಕಲ್ಪ: ಅಮಿತ್‌ ಶಾ ಹೇಳಿಕೆ

Last Updated 3 ಮಾರ್ಚ್ 2023, 15:33 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಿಜೆಪಿ ಸಂಕಲ್ಪವಾಗಿದೆ. ಉತ್ತರ ಭಾರತದ ತೀರ್ಥ ಕ್ಷೇತ್ರಗಳ ಮಾದರಿಯಲ್ಲಿ ಬಸವಕಲ್ಯಾಣವನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ನಗರದ ರಥ ಮೈದಾನದಲ್ಲಿ ಶುಕ್ರವಾರ ಬಿಜೆಪಿಯಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಗತ್ತಿನ ಮೊದಲ ಸಂಸತ್ತು ರಚಿಸಿದ ಶ್ರೇಯಸ್ಸು ಬಸವೇಶ್ವರರಿಗೆ ಸಲ್ಲುತ್ತದೆ. ಅಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯಲ್ಲೂ ಬಸವೇಶ್ವರರ ಹೆಸರು ಪ್ರಸ್ತಾಪಿಸಿ ಜಗತ್ತಿಗೆ ಸಂದೇಶ ನೀಡಿದರು’ ಎಂದು ತಿಳಿಸಿದರು.

‘ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಅನುಭವ ಮಂಟಪ ನಿರ್ಮಾಣಕ್ಕೆ ₹ 600 ಕೋಟಿ ಬಿಡುಗಡೆ ಮಾಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದರ ಅಭಿವೃದ್ಧಿ ಮಂದುವರಿಸಿದ್ದಾರೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರ ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬಜೆಟ್‌ನಲ್ಲಿ ₹ 5 ಸಾವಿರ ಕೋಟಿ ಘೋಷಣೆ ಮಾಡಲಾಗಿದೆ’ ಎಂದು ತಿಳಿಸಿದರು.

‘ವಿಜಯ ಸಂಕಲ್ಪ ಯಾತ್ರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಸಂಚರಿಸಲಿದೆ. ರೋಡ್‌ ಶೋ ಸಹ ನಡೆಯಲಿದೆ. ಬಿಜೆಪಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸುವಂತೆ ಮಾಡಬೇಕು’ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ‘ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೇ ಗ್ಯಾರಂಟಿ ಇಲ್ಲ. ಜನರಿಗೆ ಗ್ಯಾರಂಟಿ ಕೊಡುತ್ತಿದೆ’ ಎಂದು ಟೀಕಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ ಕಟೀಲ್, ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ‍ ಪಾಟೀಲ ಮುನೇನಕೊಪ್ಪ, ಸಾರಿಗೆ ಸಚಿವ ಶ್ರೀರಾಮುಲು, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ್‌ ಮುಳೆ, ಸಂಸದ ಉಮೇಶ ಜಾಧವ, ಡಿ.ಕೆ.ಅರುಣಾ, ಶಾಸಕ ಶರಣು ಸಲಗರ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್, ಬಿಜೆಪಿ ಮುಖಂಡರಾದ ರವಿಕುಮಾರ, ಈಶ್ವರಸಿಂಗ್‌ ಠಾಕೂರ್, ಗುರುನಾಥ ಕೊಳ್ಳೂರು, ಸೂರ್ಯಕಾಂತ ನಾಗಮಾರಪಳ್ಳಿ. ಸಿದ್ದರಾಜು, ದತ್ತಾತ್ರೇಯ ಪಾಟೀಲ, ಸುಭಾಷ ಗುತ್ತೇದಾರ್, ರಘುನಾಥ ಮಲ್ಕಾಪುರೆ, ಸುನೀಲ ವಲ್ಯಾಪುರೆ, ಶಶಿಲ್‌ ನಮೋಶಿ, ಶಿವಾನಂದ ಮಂಠಾಳಕರ್, ಶಿವರಾಜ ಗಂದಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT