ಬೀದರ್: ಸರ್ಕಾರದ ನಿಯಮ ಮೀರಿ ಅಕ್ರಮವಾಗಿ ಅಂತ್ಯೋದಯ ಮತ್ತು ಬಿಪಿಎಲ್ (ಆದ್ಯತಾ ಪಡಿತರ ಚೀಟಿ) ಕಾರ್ಡ್ ಹೊಂದಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಹಾರ ಇಲಾಖೆ ಮುಂದಾಗಿದೆ.
2024ರ ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು ಕಾರ್ಡುದಾರರ ಪರಿಶೀಲನಾ ಕಾರ್ಯ ನಡೆದಿದ್ದು, ಜಿಲ್ಲೆಯಲ್ಲಿ 146 ಸರ್ಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಪತ್ತೆಯಾಗಿದೆ.
ಜಿಲ್ಲೆಯಲ್ಲಿ 1,384 ಕುಟುಂಬಗಳು ಆದಾಯ ತೆರಿಗೆ ಪಾವತಿಸುತ್ತಿವೆ. ₹1.20 ಲಕ್ಷಕ್ಕೂ ಅಧಿಕ ಆದಾಯವಿರುವ 64,142 ಕುಟುಂಬಗಳಿವೆ. ಇವರ ಪಡಿತರ ಚೀಟಿಗಳನ್ನು ತಂತ್ರಾಂಶದ ಸಹಾಯದಿಂದಲೇ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈ ಪೈಕಿ 37 ಸಾವಿರಕ್ಕೂ ಅಧಿಕ ಪಡಿತರದಾರರ ಇ–ಕೆವೈಸಿ ಬಾಕಿ ಇದೆ. ಈಗಾಗಲೇ ಅದಕ್ಕೆ ಕೊಟ್ಟ ಗಡುವು ಮುಗಿದಿದ್ದು, ಇನ್ನೂ ಹಲವರು ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅಂತಹವರ ಕಾರ್ಡುಗಳನ್ನು ರದ್ದುಪಡಿಸಬೇಕಾ ಅಥವಾ ತಾತ್ಕಾಲಿಕವಾಗಿ ಅಮಾನತಿನಲ್ಲಿಡಬೇಕಾ ಎಂಬ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಸರ್ಕಾರದ ಮುಂದಿನ ನಿರ್ದೇಶನದ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ಇಲಾಖೆಯ ಅಧಿಕಾರಿಗಳೇ ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ನಂತರ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು ಐದು ಕೆ.ಜಿ ‘ಅನ್ನಭಾಗ್ಯ’ ಅಕ್ಕಿ, ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಪಾವತಿಸಲಾಗುತ್ತಿದೆ. ಇದರೊಂದಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ ₹2 ಸಾವಿರ ನೀಡಲಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ 3.29 ಲಕ್ಷಕ್ಕೂ ಹೆಚ್ಚಿನ ಅರ್ಹ ಫಲಾನುಭವಿಗಳಿದ್ದಾರೆ.
ಗ್ಯಾರಂಟಿ ಯೋಜನೆಗಳು ಘೋಷಣೆಯಾಗುತ್ತಿದ್ದಂತೆ ಯೋಜನೆಗಳ ಲಾಭ ಪಡೆಯಲು ಅನೇಕರು ಮದ್ಯವರ್ತಿಗಳ ಮೂಲಕ ಬಿಪಿಎಲ್ ಕಾರ್ಡುಗಳನ್ನು ಮಾಡಿಸಿಕೊಂಡಿದ್ದಾರೆ. ಇದಕ್ಕೆ ಆಹಾರ ಇಲಾಖೆಯ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ ಎಂಬ ಗಂಭೀರ ಸ್ವರೂಪದ ಆರೋಪಗಳಿವೆ. ಇದಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಈಗ ಪ್ರತಿಯೊಬ್ಬರ ಕಾರ್ಡುದಾರರ ಮಾಹಿತಿಯನ್ನು ಜಾಲಾಡಲಾಗುತ್ತಿದೆ. ಸುಳ್ಳು ವಿವರ ಕೊಟ್ಟವರ ಕಾರ್ಡುಗಳನ್ನು ರದ್ದುಪಡಿಸುವ ಜೊತೆಗೆ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಿದೆ.
ವಾಮ ಮಾರ್ಗದಿಂದ ಅಕ್ರಮವಾಗಿ ಪಡಿತರ ಮಾಡಿಸಿಕೊಂಡಿರುವುದರಿಂದ ಸರ್ಕಾರದ ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿರುವುದರಿಂದ ಸರ್ಕಾರದ ನಿರ್ದೇಶನದ ಮೇರೆಗೆ ಈ ಕೆಲಸ ನಡೆಯುತ್ತಿದೆ.
‘ಸರ್ಕಾರಿ ನೌಕರರಿಗೆ ನೋಟಿಸ್’
‘ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ಜಿಲ್ಲೆಯಲ್ಲಿ 146 ಜನ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವುದು ಗೊತ್ತಾಗಿದೆ. ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ದಂಡ ಕೂಡ ವಸೂಲಿ ಮಾಡಲಾಗುವುದು’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪ್ರವೀಣ್ ಬರಗಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2 ಸಾವಿರ ನೀಡುತ್ತಿರುವುದರಿಂದ ಒಂದೇ ಕುಟುಂಬದ ಕೆಲವರು ಹೊಸ ಕಾರ್ಡ್‌ಗಳಿಗೆ ಅರ್ಜಿ ಹಾಕುತ್ತಿದ್ದಾರೆ. ಆದರೆ, ಸರ್ಕಾರದ ಸೂಚನೆ ಪ್ರಕಾರ ಸದ್ಯ ಯಾರಿಗೂ ಹೊಸ ಕಾರ್ಡ್ ಮಾಡಿಕೊಡುತ್ತಿಲ್ಲ. ಈ ಹಿಂದಿನಿಂದ ಬೇರೆ ಬೇರೆ ಕುಟುಂಬಗಳೆಂದು ತೋರಿಸಿದವರ ಕಾರ್ಡ್‌ಗಳು ಚಾಲ್ತಿಯಲ್ಲಿವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಅಂಕಿ–ಅಂಶ
54,871 ಜಿಲ್ಲೆಯಲ್ಲಿರುವ ಎಪಿಎಲ್ ಕಾರ್ಡುದಾರರು
3,42,881 ಜಿಲ್ಲೆಯಲ್ಲಿರುವ ಬಿಪಿಎಲ್ ಕಾರ್ಡುದಾರರು
146 ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.