7
ಸಕಾಲದಲ್ಲಿ ಚಿಕಿತ್ಸೆ ನೀಡದ ವೈದ್ಯರು, ಕೆಟ್ಟು ಹೋಗಿರುವ ಸ್ಕ್ಯಾನಿಂಗ್‌ ಯಂತ್ರಗಳು

ರೋಗಿಗಳ ಪಾಲಿಗೆ ಅಸ್ಥಿಪಂಜರ ‘ಬ್ರಿಮ್ಸ್‌ ಆಸ್ಪತ್ರೆ’

Published:
Updated:
ಬೀದರ್‌ನ ಬ್ರಿಮ್ಸ್ ಬೋಧಕ ಆಸ್ಪತ್ರೆ

ಬೀದರ್‌: ರಾಜ್ಯದ ಕಿರೀಟದಂತಿರುವ ಜಿಲ್ಲೆಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯಗಳು ದೊರೆಯಲಿ ಎನ್ನುವ ಉದ್ದೇಶದಿಂದ ಸರ್ಕಾರ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಪರಿಕಲ್ಪನೆಯೊಂದಿಗೆ ₹ 110 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸಿದ ಬೃಹತ್‌ ಕಟ್ಟಡ ಇದೀಗ ರೋಗಿಗಳ ಪಾಲಿಗೆ ಅಸ್ಥಿಪಂಜರವಾಗಿದೆ.

ಆಸ್ಪತ್ರೆಯಲ್ಲಿನ ಎಂಆರ್‌ಐ, 2ಡಿಎಂಕೆ ಹಾಗೂ ಸ್ಕ್ಯಾನಿಂಗ್‌ ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಐದು ಕ್ಷಕಿರಣ ಯಂತ್ರಗಳಲ್ಲಿ ಎರಡು ಹಾಳಾಗಿವೆ. ಆರು ಡಯಾಲಿಸಿಸ್‌ ಯಂತ್ರಗಳು ಇದ್ದರೂ ಸಿಬ್ಬಂದಿ ರೋಗಿಗಳೊಂದಿಗೆ ಸಹಕರಿಸುತ್ತಿಲ್ಲ. ಡಯಾಲಜರ್‌ ಟ್ಯೂಬ್‌ಗಳು ಆಸ್ಪತ್ರೆಯಿಂದ ಕಾಣೆಯಾಗುತ್ತಿವೆ. ಆಸ್ಪತ್ರೆಯಲ್ಲಿನ ವೈದ್ಯಕೀಯ ಉಪಕರಣಗಳನ್ನು ಸಿಬ್ಬಂದಿಯೇ ಹಾಳು ಮಾಡುತ್ತಿದ್ದಾರೆ ಎನ್ನುವ ಆರೋಪ ದಟ್ಟವಾಗಿದೆ.

ವೈದ್ಯರು ಹೊರಗಡೆಯಿಂದ ಔಷಧ ತರುವಂತೆ ಚೀಟಿ ಬರೆದುಕೊಡುವುದು ನಿಂತಿಲ್ಲ. ಇಂತಹ ಖಾಸಗಿ ಆಸ್ಪತ್ರೆ ಅಥವಾ ಕೇಂದ್ರಕ್ಕೇ ಹೋಗಿ ಎಕ್ಸ್‌ರೆ, ಸ್ಕ್ಯಾನಿಂಗ್‌ ಮಾಡಿಸಿಕೊಂಡು ಬನ್ನಿ ಎಂದು ವೈದ್ಯಕೀಯ ಸಿಬ್ಬಂದಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿನ ಡಯಾಲಜರ್‌ ಟ್ಯೂಬ್‌ಗಳು ಖಾಸಗಿ ಆಸ್ಪತ್ರೆಯಲ್ಲಿ ಕಾಣಸಿಗುತ್ತಿವೆ ಎಂದು ರೋಗಿಗಳು ಆಡಿಕೊಳ್ಳುತ್ತಿದ್ದಾರೆ. ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಹಿರಿಯ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ ರೋಗಿಗಳಿಗೆ ವೈದ್ಯರಿಂದ ಚಿಕಿತ್ಸೆ ದೊರೆಯುತ್ತಿಲ್ಲ.

ಜಿಲ್ಲಾ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರೆಯಬಹುದು ಎನ್ನುವ ನಿರೀಕ್ಷೆಯಿಂದ ಗ್ರಾಮೀಣ ಪ್ರದೇಶದಿಂದ ಬರುವ ಸಾವಿರಾರು ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ನಿರಾಶೆಯೊಂದಿಗೆ ಮರಳುವಂತಾಗಿದೆ. ದೊಡ್ಡ ಆಸ್ಪತ್ರೆಯಲ್ಲಿ ತಲೆ ನೋವಿನ ಮಾತ್ರೆಗಳೂ ದೊರೆಯುತ್ತಿಲ್ಲ! ಬ್ರಿಮ್ಸ್‌ ನಿರ್ದೇಶಕರಿಗೆ ಔಷಧಿಗಳನ್ನು ಖರೀದಿಸುವ ವಿಶೇಷ ಅಧಿಕಾರ ಇದೆ. ಆದರೆ ಅವರು ಸಕಾಲದಲ್ಲಿ ಔಷಧ ವ್ಯವಸ್ಥೆ
ಮಾಡುತ್ತಿಲ್ಲ ಎಂದು ರೋಗಿಗಳು ದೂರುತ್ತಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರ ಸಂಬಂಧಿಗಳೇ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂಗ್ಲಿಷ್‌ ಅರಿಯದ, ಕನ್ನಡ ಬಾರದ ಸಿಬ್ಬಂದಿಯಿಂದಾಗಿ ಆಡಳಿತ ವ್ಯವಸ್ಥೆಗೂ ಹಿನ್ನಡೆ ಉಂಟಾಗಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರ ಬಳಿ ಇಲ್ಲಿಯ ಸಿಬ್ಬಂದಿಯ ಸಂಖ್ಯೆ ಹಾಗೂ ವೈದ್ಯಕೀಯ ಉಪಕರಣಗಳ ನಿಖರ ಮಾಹಿತಿಯೂ ಇಲ್ಲ.

ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ರೋಗಿಗಳಿಗೆ ಶೌಚಾಲಯದ ಸರಿಯಾದ ವ್ಯವಸ್ಥೆ ಇಲ್ಲ. ವರ್ಷದ ಹಿಂದೆಯೇ ಶೌಚಾಲಯದ ನೀರು ಸರಿಯಾಗಿ ಹರಿದು ಹೋಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ತುರ್ತು ನಿಗಾ ಘಟಕದ ಬಳಿಯಲ್ಲೇ ಕೊಳಚೆ ಸಂಗ್ರಹವಾಗಿ ಗಬ್ಬು ನಾರುತ್ತಿದೆ.  ಹೊಸ ಕಟ್ಟಡದಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲ.

ಏಳು ಅಂತಸ್ತಿನ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವ ವಿಭಾಗ ಎಲ್ಲಿದೆ ಎನ್ನುವುದು ಗೊತ್ತಾಗುವುದೇ ಇಲ್ಲ. ಅನೇಕ ಕಡೆಗೆ ಇಂದಿಗೂ ಫಲಕಗಳನ್ನು ಅಳವಡಿಸಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಶ್ರವಣ ಆಸ್ಪತ್ರೆಗೆ ಭೇಟಿ ನೀಡಿದಾಗಲೂ ಇದೇ ಸಮಸ್ಯೆ ಎದುರಾಗಿತ್ತು. ಅವರು ಬ್ರಿಮ್ಸ್‌ ನಿರ್ದೇಶಕರಿಗೆ ಸ್ಥಳದಲ್ಲೇ ಸೂಚನೆ ನೀಡಿದರೂ ಸುಧಾರಣೆ ಕಂಡು ಬಂದಿಲ್ಲ.

ಬೃಹತ್‌ ಕಟ್ಟಡದಲ್ಲಿ ಎರಡು ಲಿಫ್ಟ್‌ಗಳು ಇವೆ. ಒಂದು ಲಿಫ್ಟ್‌ನಲ್ಲಿ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಮೇಲಿನ ಅಂತಸ್ತಿಗೆ ಹೋಗಲು ರೋಗಿಗಳು ಪರದಾಡಬೇಕಾಗಿದೆ. ಮಂಡಿನೋವು ಇರುವ ವೃದ್ಧರು ನಾಲ್ಕನೇ ಅಂತಸ್ತಿಗೆ  ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದಾರೆ.

ಸೊಲ್ಲಾಪುರದ ಏಜೆಂಟರ ಮೂಲಕ ಅಕ್ರಮವಾಗಿ ನೇಮಕಾತಿ ಹೊಂದಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ. ಸಿಬ್ಬಂದಿ ನೇಮಕಾತಿ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬಂದಿದ್ದು, ವಿಚಾರಣೆ ಮುಂದುವರಿದಿದೆ.

ಬೆಂಕಿ ಅನಾಹುತ, ರಸ್ತೆ ಅಪಘಾತಕ್ಕೆ ಈಡಾದ ಗಾಯಾಳುಗಳನ್ನು ಆರೋಗ್ಯ ಕವಚ ವಾಹನದಲ್ಲಿ ತ್ವರಿತವಾಗಿ ಆಸ್ಪತ್ರೆಗೆ ತಂದು ದಾಖಲು ಮಾಡಿದರೂ ಇಲ್ಲಿ ಪ್ರಾಥಮಿಕ ಚಿಕಿತ್ಸೆ ಮಾತ್ರ ಸಿಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ರೋಗಿಗಳನ್ನು ಹೈದರಾಬಾದ್‌ ಹಾಗೂ ಸೊಲ್ಲಾಪುರದ ಆಸ್ಪತ್ರೆಗಳಿಗೆ ಒಯ್ಯುವುದು ನಿಂತಿಲ್ಲ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿವೆ.  

ಬ್ರಿಮ್ಸ್‌ ಅಸ್ಪತ್ರೆಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ವೈದ್ಯರೊಬ್ಬರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡಿಲ್ಲ. ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಅನೇಕ ಬಾರಿ ಮಾತ್ರೆಗಳೂ ಸಿಗುತ್ತಿಲ್ಲ. ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಮೇಲಧಿಕಾರಿಗೂ ಪತ್ರ ಬರೆದಿದ್ದೇನೆ ಎಂದು ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಮಾಧ್ಯಮ ಗೋಷ್ಠಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಈಚೆಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಎಚ್‌.ಆರ್‌.ಮಹಾದೇವ್‌ ಅವರಿಂದಾದರೂ ಆಸ್ಪತ್ರೆ ಸುಧಾರಣೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ ಜನ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !