ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದ ಈರುಳ್ಳಿ, ಏರಿದ ಬದನೆಕಾಯಿ- ಕೆಲ ತರಕಾರಿ ಬೆಲೆಯಲ್ಲಿ ಹೆಚ್ಚಳ

Last Updated 21 ಆಗಸ್ಟ್ 2021, 12:46 IST
ಅಕ್ಷರ ಗಾತ್ರ

ಬೀದರ್‌: ಸಾಲು ಸಾಲು ಹಬ್ಬಗಳ ಆಚರಣೆಯ ಸಂದರ್ಭದಲ್ಲೇ ನಗರದ ಮಾರುಕಟ್ಟೆಯಲ್ಲಿ ಕೆಲ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿರುವ ಅವಧಿಯಲ್ಲೇ ತರಕಾರಿ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಕಿರಿಕಿರಿಯಾದರೆ, ರೈತರಿಗೆ ಖುಷಿ ತಂದಿದೆ.

ಹಬ್ಬಗಳು ಶುರುವಾಗುತ್ತಿದ್ದಂತೆಯೇ ಬೆಳ್ಳುಳ್ಳಿ ಬೆಲೆ ದಿಢೀರ್‌ ಪ್ರತಿ ಕ್ವಿಂಟಲ್‌ಗೆ ₹ 3,100 ಹೆಚ್ಚಿದೆ. ನಾಗರ ಪಂಚಮಿ ನಂತರ ಬಂದ ವರಮಹಾಲಕ್ಷ್ಮಿ, ಮೊಹರಂ ಹಾಗೂ ನೂಲು ಹುಣ್ಣಿಮೆ ವೇಳೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಅಡಿಗೆ ಸ್ವಾದ ಹೆಚ್ಚಿಸುವ ಬೆಳ್ಳುಳ್ಳಿ ಬೆಲೆ ಭಾದ್ರಪದ ಚೌತಿಗೆ ಗಣೇಶ ಬಂದು ಹೋಗುವವರೆಗೂ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಹಸಿ ಮೆಣಸಿನಕಾಯಿ ಉಗ್ರರೂಪ ತಾಳಿದೆ. ಬೆಲೆಯ ಖಾರ ಹೆಚ್ಚಿಸಿಕೊಂಡಿದೆ. ಹಸಿ ಮೆಣಸಿನಕಾಯಿ ಇಲ್ಲದೆ ಉಪಾಹಾರ ಸಿದ್ಧಪಡಿಸುವುದೇ ಕಷ್ಟ. ಹೀಗಾಗಿ ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರು ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ.

ಹದಿನೈದು ದಿನಗಳ ಹಿಂದೆ ಮಳೆಯಿಂದ ಕೊಳೆತು ಹೋಗುವ ಭಯದಿಂದ ರೈತರು ಕೈಗೆ ದೊರೆತ ಬೆಲೆಯಲ್ಲಿ ಮೆಣಸಿನಕಾಯಿ ಮಾರಾಟ ಮಾಡಿದ್ದರು. ಆದರೆ, ಈ ವಾರ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.

ಎಲ್ಲರ ಅಚ್ಚುಮೆಚ್ಚಿನ ನುಗ್ಗೆಕಾಯಿ ಮಾರುಕಟ್ಟೆಯಲ್ಲಿ ಮತ್ತೆ ಎದ್ದು ನಿಂತಿದೆ. ತರಕಾರಿ ರಾಜ ಬದನೆಕಾಯಿ ತನ್ನ ಕಿರೀಟ ಗಟ್ಟಿ ಮಾಡಿಕೊಂಡಿದೆ. ನಾನೇನು ಕಮ್ಮಿ ಎನ್ನುವಂತೆ ಬೆಂಡೆಕಾಯಿ ಬೆಂಡಾಗಿಲ್ಲ. ತರಕಾರಿ ಮಾರುಕಟ್ಟೆಯಲ್ಲಿ ಹಿರೇಕಾಯಿ ಹಿರಿಹಿರಿ ಹಿಗ್ಗಿ ನಿಂತಿದೆ.

ಪ್ರತಿ ಕ್ವಿಂಟಲ್‌ಗೆ ಹಸಿ ಮೆಣಸಿನಕಾಯಿ ₹ 3,500, ನುಗ್ಗೆಕಾಯಿ ₹ 3 ಸಾವಿರ, ಬೀನ್ಸ್‌, ಟೊಮೆಟೊ, ಪಾಲಕ್‌ ₹ 1 ಸಾವಿರ, ಗಜ್ಜರಿ, ಹಿರೇಕಾಯಿ, ಬದನೆಕಾಯಿ, ಬೆಂಡೆಕಾಯಿ ₹ 500, ಮೆಂತೆ ಸೊಪ್ಪು ₹ 600 ಹೆಚ್ಚಾಗಿದೆ.

ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500, ಬೀಟ್‌ರೂಟ್‌, ಕರಿಬೇವು ₹ 1 ಸಾವಿರ ಕಡಿಮೆಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಯಾರ ಉಸಾಬರಿಯೂ ಬೇಡ ಎನ್ನುವಂತೆ ಮಾರುಕಟ್ಟೆಯಲ್ಲಿ ಆಲೂಗಡ್ಡೆ, ಎಲೆಕೋಸು, ಹೂಕೋಸು, ಸಬ್ಬಸಗಿ, ಕೊತಂಬರಿ ತಣ್ಣಗಾಗಿರುವ ಕಾರಣ ಬೆಲೆ ಸ್ಥಿರವಾಗಿದೆ.

ಬೀದರ್‌ ಮಾರುಕಟ್ಟೆಗೆ ನಾಸಿಕ್‌ನಿಂದ ಬೆಳ್ಳುಳ್ಳಿ ಹಾಗೂ ಈರುಳ್ಳಿ ಬಂದಿದೆ. ಈರುಳ್ಳಿ ಬೆಳೆಗಾರರು ಹಾಗೂ ದಾಸ್ತಾನು ಇಟ್ಟುಕೊಂಡಿದ್ದ ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರಕಿದೆ. ನುಗ್ಗೆಕಾಯಿ, ಬೀನ್ಸ್, ಹಿರೇಕಾಯಿ, ಟೊಮೆಟೊ ಹೈದರಾಬಾದ್‌ನಿಂದ ಆವಕವಾಗಿದೆ. ಹಸಿಮೆಣಸಿನಕಾಯಿ ಹಾಗೂ ಕೊತಂಬರಿ ಬೆಳಗಾವಿ ಜಿಲ್ಲೆಯಿಂದ ಬಂದಿದೆ.

‘ಭಾಲ್ಕಿ, ಚಿಟಗುಪ್ಪ, ಹುಮನಾಬಾದ್‌ ಹಾಗೂ ಬೀದರ್ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಬದನೆಕಾಯಿ, ಬೆಂಡೆಕಾಯಿ, ಕರಿಬೇವು, ಕೊತಂಬರಿ, ಎಲೆಕೋಸು ಹಾಗೂ ಹೂಕೋಸು ಬಂದಿದೆ‘ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

***

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ

ಈರುಳ್ಳಿ 25-30, 20-25

ಮೆಣಸಿನಕಾಯಿ 30-35, 55-60

ಆಲೂಗಡ್ಡೆ 40-45, 40-45

ಎಲೆಕೋಸು 30-40, 35-40

ಬೆಳ್ಳುಳ್ಳಿ 70-80, 100-110

ಗಜ್ಜರಿ 30-40, 40-45

ಬೀನ್ಸ್‌ 70-80, 80-90

ಬದನೆಕಾಯಿ 40-45, 40-50

ಮೆಂತೆ ಸೊಪ್ಪು 35-40, 90-100

ಹೂಕೋಸು 35-40, 30-40

ಸಬ್ಬಸಗಿ 40–50, 40-50

ಬೀಟ್‌ರೂಟ್‌ 40-50, 30-40

ತೊಂಡೆಕಾಯಿ 40-45, 35-40

ಕರಿಬೇವು 30-40, 20-30

ಕೊತಂಬರಿ 30-35, 30-35

ಟೊಮೆಟೊ 20-30, 30-40

ಪಾಲಕ್‌ 30-40, 40-50

ಬೆಂಡೆಕಾಯಿ 40-45, 40-50

ಹಿರೇಕಾಯಿ 40-45, 40-50

ನುಗ್ಗೆಕಾಯಿ 45-50, 70-80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT