ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷೇತ್ರದ ನೀರಿನ ಸಮಸ್ಯೆ ಪರಿಹರಿಸಲಿ’

ಅಭಿವೃದ್ಧಿಯ ನಿರೀಕ್ಷೆ ಹಂಚಿಕೊಂಡ ಕುಂದಗೋಳ ಕ್ಷೇತ್ರದ ಮತದಾರರು
Last Updated 17 ಮೇ 2018, 5:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡನೇ ಸಲ ವಿಜಯ ಸಾಧಿಸಿದ ಕಾಂಗ್ರೆಸ್‌ನ ಸಿ.ಎಸ್‌. ಶಿವಳ್ಳಿ ಅವರ ವಿಜಯೋತ್ಸವದ ಸಂಭ್ರಮದ ಗುಂಗು ಕ್ಷೇತ್ರದಲ್ಲಿ ಅಲ್ಲಲ್ಲಿ ಕಂಡು ಬಂತು. ಟೀ ಅಂಗಡಿ, ಹೇರ್ ಕಟಿಂಗ್ ಸಲೂನ್, ಬಸ್ ತಂಗುದಾಣ, ಸೇರಿದಂತೆ ವಿವಿಧೆಡೆ ಜನರು ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದರು. ಕೂದಲೆಳೆ ಅಂತರದ ದಾಖಲೆ ಜಯ ಹಾಗೂ ಸಮ್ಮಿಶ್ರ ಸರ್ಕಾರ ರಚನೆಯ ಕಸರತ್ತಿನ ಸುತ್ತಲೇ ಅವರ ಮಾತು ಗಿರಕಿ ಹೊಡೆಯುತ್ತಿತ್ತು. ಈ ಮಧ್ಯೆಯೇ, ‘ಮರು ಆಯ್ಕೆಯಾದ ಶಾಸಕರಿಂದ ನೀವು ನಿರೀಕ್ಷಿಸುವುದೇನು?’ ಎಂಬ ಪ್ರಶ್ನೆಗೆ ಕ್ಷೇತ್ರದ ಜನರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

‘ರಸ್ತೆ, ಕುಡಿಯುವ ನೀರು, ಒಳ ಚರಂಡಿ, ಸಮುದಾಯ ಭವನ ಸೇರಿದಂತೆ ಹಲವು ಕಾಮಗಾರಿಗಳನ್ನು ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಆ ಕೆಲಸಗಳು ಕುಗ್ರಾಮಗಳಿಗೂ ವಿಸ್ತರಣೆಯಾಗಬೇಕು’ ಎಂದು ನೂಲ್ವಿಯ ಆಟೊ ಚಾಲಕ ಬಸವರಾಜ ಕಲಗಾರ ಹೇಳಿದರು.

ಶೈಕ್ಷಣಿಕ ಅಭಿವೃದ್ಧಿ: ‘ಶೈಕ್ಷಣಿಕವಾಗಿ ಕುಂದಗೋಳದಲ್ಲಿ ಶಾಲಾ–ಕಾಲೇಜುಗಳು ಆರಂಭವಾಗಬೇಕು. ಸುಸಜ್ಜಿತ ತಾಲ್ಲೂಕು ಕ್ರೀಡಾಂಗಣ ಬೇಕು. ಎಲ್ಲಾ ವಿಷಯಗಳ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸ್‌ಗಳ ಕಾಲೇಜು ಆರಂಭಿಸಬೇಕು. ಎಸ್‌ಸಿ ಮತ್ತು ಎಸ್‌ಟಿ ಹೊರತುಪಡಿಸಿ, ಇತರ ಸಮುದಾಯಗಳ ವಿದ್ಯಾರ್ಥಿಗಳಿಗೂ ಸರ್ಕಾರಿ ಹಾಸ್ಟೆಲ್‌ಗಳನ್ನು ತೆರೆಯಬೇಕು’ ಎಂದು ಕುಂದಗೋಳದ ವಿದ್ಯಾರ್ಥಿನಿ ಎನ್‌.ಬಿ. ಶಿವಕ್ಕನವರ ಅಭಿಪ್ರಾಯಟ್ಟರು.

ಎಲ್ಲರಿಗೂ ಆದ್ಯತೆ ನೀಡಲಿ: ‘ಕಾಂಗ್ರೆಸ್ ಜನಪ್ರತಿನಿಧಿಗಳು ಅಹಿಂದ ಮತ್ತು ಮುಸ್ಲಿಂ ಸಮುದಾಯವನ್ನು ಹೆಚ್ಚಾಗಿ ಓಲೈಕೆ ಮಾಡುವ ಮೂಲಕ, ಇತರ ಸಮುದಾಯಗಳನ್ನು ಕಡೆಗಣಿಸುತ್ತಾರೆ. ಅಭಿವೃದ್ಧಿ ವಿಷಯದಲ್ಲೂ ಇಂತಹ ಪಕ್ಷಪಾತ ಸಾಮಾನ್ಯವಾಗಿದೆ. ಹಾಗಾಗಿ, ಶಿವಳ್ಳಿ ಅವರು ಕ್ಷೇತ್ರದ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಂಡು, ಅವರ ಅಭ್ಯುದಯಕ್ಕೆ ಶ್ರಮಿಸಬೇಕು’ ಎಂದು ವಕೀಲ ಬಸವರಾಜ ಹೇಳಿದರು.

ಅಲೆಮಾರಿಗಳಿಗೆ ನೆಲೆ ಕಲ್ಪಿಸಲಿ

ಕ್ಷೇತ್ರದಲ್ಲಿ ಬುಡ್ಗ ಜಂಗಮ, ಸುಡುಗಾಡು ಸಿದ್ಧ ಸೇರಿದಂತೆ ಹಲವು ಅಲೆಮಾರಿ ಸಮುದಾಯ ಗಳಿವೆ. ಬದುಕಿನ ತುತ್ತಿಗಾಗಿ ಊರೂರು ಸುತ್ತುವ ಇಂತಹ ಸಮುದಾಯಗಳು ಒಂದೆಡೆ ನೆಲೆ ನಿಂತು, ಬದುಕು ಕಟ್ಟಿಕೊಳ್ಳುವಂತೆ ಮಾಡಬೇಕು. ಪಡಿತರ ಚೀಟಿ, ಆಶ್ರಯ ಮನೆ ಸೇರಿದಂತೆ ನಾವು ವಾಸಿಸುವ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು
– ರಾಮಕುಮಾರ್ ಮಹಾಂತ, ಅಲೆಮಾರಿ ಸಮುದಾಯದ ಮುಖಂಡ, ಅದರಗುಂಚಿ

ಕೃಷಿಗೆ ನೀರು ಕೊಡಲಿ

ಬಯಲು ಸೀಮೆಯಾಗಿರುವ ಕುಂದಗೋಳ ತಾಲ್ಲೂಕಿನಲ್ಲಿ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ.ಹಾಗಾಗಿ, ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮೊದಲು ಆಗಬೇಕು. ಅರ್ಧಕ್ಕೆ ನಿಂತಿರುವ ನೀರಾವರಿ ಹಾಗೂ ಕೆರೆಗೆ ಮರುಜೀವ ನೀಡುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಮಾಡಬೇಕು. ಮಹದಾಯಿ ನೀರು ತರಬೇಕು 
– ಗಂಗನಗೌಡ, ರೈತ, ಶೇರವಾಡ

‘ಅಭಿವೃದ್ಧಿ ಸಮಾನವಾಗಿರಲಿ’

‘ಕುಂದಗೋಳದ ಜನ ಅಭಿವೃದ್ಧಿಗೆ ಮಣೆ ಹಾಕುವವರು ಎಂಬುದನ್ನು ಈ ಚುನಾವಣೆ ಸಾಬೀತು ಪಡಿಸಿದೆ. ಅಭಿವೃದ್ಧಿಯ ವಿಷಯದಲ್ಲಿ ಪಕ್ಷಪಾತ ಮಾಡಬಾರದು. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಬೇಕು.
ಪಟ್ಟಣವನ್ನು ಮೇಲ್ದರ್ಜೆಗೆ ಏರಿಸಬೇಕು. ಬೆಳೆ ವಿಮೆ, ಬಿತ್ತನೆ ಬೀಜ, ಬೆಳೆ ಹಾನಿ, ಸೇರಿದಂತೆ ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು 
– ಡಿ.ವಿ. ಪಾಟೀಲ, ನಿವೃತ್ತ ನೌಕರ, ಕುಂದಗೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT