₹ 287 ಕೋಟಿ ಬಜೆಟ್‌ಗೆ ಅನುಮೋದನೆ

7
ಅಪೂರ್ಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯರ ತೀವ್ರ ಆಕ್ರೋಶ

₹ 287 ಕೋಟಿ ಬಜೆಟ್‌ಗೆ ಅನುಮೋದನೆ

Published:
Updated:
ಬೀದರ್‌ನಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿದರು. ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಇದ್ದಾರೆ

ಬೀದರ್‌: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ₹ 287 ಕೋಟಿ ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಿದೆ.

ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸದಸ್ಯರು ಸುದೀರ್ಘ ಚರ್ಚೆ ಮಾಡಿ ಕೊನೆಯ ಗಳಿಗೆಯಲ್ಲಿ ಬಜೆಟ್‌ಗೆ ಒಪ್ಪಿಗೆ ಸೂಚಿಸಿದರು.

‘ಜಿಲ್ಲಾ ಪಂಚಾಯಿತಿಗೆ ₹ 407.32 ಕೋಟಿ ಹಂಚಿಕೆಯಾಗಿದೆ. ಕಳೆದ ವರ್ಷ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿದ್ದ ಅನುದಾನದಲ್ಲಿ ₹ 47.47 ಕೋಟಿ ಉಳಿದುಕೊಂಡಿದೆ. ರಾಜ್ಯ ಸರ್ಕಾರ ₹ 399.97 ಕೋಟಿ ಬಿಡುಗಡೆ ಮಾಡಿದೆ. ಪ್ರಸ್ತುತ ₹ ₹447 ಕೋಟಿ ಅನುದಾನ ಲಭ್ಯ ಇದೆ’ ಎಂದು ಭಾರತಬಾಯಿ ತಿಳಿಸಿದರು.

‘ಪಂಚಾಯತ್ ರಾಜ್‌ ಎಂಜಿನಿಯರಿಂಗ್‌ ಅಧಿಕಾರಿ ಹಾಗೂ ಸಿಬ್ಬಂದಿ ಭತ್ಯೆಗೆ ₹ 5.77 ಕೋಟಿ, ಪ್ರಾಥಮಿಕ ಶಿಕ್ಷಣಕ್ಕೆ ₹ 81 ಕೋಟಿ, ಪ್ರೌಢ ಶಾಲೆಗಳಿಗೆ ₹62.91 ಕೋಟಿ, ಅಕ್ಷರ ದಾಸೋಹ ಯೋಜನೆಗೆ ₹ 63.91 ಕೋಟಿ, ಆರೋಗ್ಯಕ್ಕೆ ₹ 38.39 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ಹೇಳಿದರು.

ಸದಸ್ಯ ಲಕ್ಷಣರಾವ್‌ ಬುಳ್ಳಾ ಮಾತನಾಡಿ, ‘ಅಧಿಕಾರಿಗಳು 2015–2016, 2016–2017ರ ಬಜೆಟ್‌ಗೆ ಸಾಮಾನ್ಯ ಸಭೆಯ ಒಪ್ಪಿಗೆ ಪಡೆದುಕೊಂಡಿಲ್ಲ. ಈಗ ಮತ್ತೆ ಹೊಸ ಬಜೆಟ್‌ ಮಂಡನೆಗೆ ಮುಂದಾಗಿದ್ದಾರೆ. ನಾಲ್ಕು ತಿಂಗಳಿಂದ ಸಾಮಾನ್ಯ ಸಭೆ ಕರೆದಿಲ್ಲ. ಚರ್ಚೆಯನ್ನೂ ನಡೆಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅನುಮತಿ ಪಡೆಯದೇ ಕಾಮಗಾರಿ ಕೈಗೊಂಡು ಅಧಿಕಾರಿಗಳು ಯೋಜನಾ ವೆಚ್ಚಕ್ಕೆ ಅನುಮೋದನೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

ಉಪಾಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿ, ‘ಜಿಲ್ಲಾ ಪಂಚಾಯಿತಿಯಲ್ಲಿ ಅನೇಕ ಪ್ರಮುಖ ಹುದ್ದೆಗಳು ಖಾಲಿ ಇವೆ. ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಕಾರಣಕ್ಕಾಗಿಯೇ ಹಿಂದಿನ ವರ್ಷದ ಬಜೆಟ್‌ಗೆ ಅನುಮೋದನೆ ದೊರೆತಿಲ್ಲ’ ಎಂದು ಸಮಜಾಯಿಸಿ ನೀಡಿದರು.

‘ಕುಡಿಯುವ ನೀರು ಪೂರೈಕೆ ಯೋಜನೆಗೆ ಸರ್ಕಾರ ₹ 1 ಕೋಟಿ ಬಿಡುಗಡೆ ಮಾಡಿದರೂ ಆಯಾ ಗ್ರಾಮಗಳ ತಲಾ ಒಬ್ಬ ವ್ಯಕ್ತಿಗೆ ಕನಿಷ್ಠ 10 ಲೀಟರ್‌ ಸಹ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ‘ತುರ್ತು ಸಂದರ್ಭದಲ್ಲಿ ₹ 17 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲಾಗಿದೆ. ಶುದ್ಧ ಕುಡಿಯುವ ನೀರಿನ ಯೋಜನೆಯ ₹ 6 ಕೋಟಿ ಬಳಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

ಸದಸ್ಯ ವಿಜಯಕುಮಾರ ಪಾಟೀಲ ಮಾತನಾಡಿ, ‘ಬೆನಕನಹಳ್ಳಿಯಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ನಿಂದ ಖಾಸಗಿ ವ್ಯಕ್ತಿಯೊಬ್ಬರು ಬಾವಿಗೆ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ಬೇಸಿಗೆಯಲ್ಲಿ ಗ್ರಾಮದ ಜನ ಕುಡಿಯುವ ನೀರಿಗೆ ಪರಿತಪಿಸಿದರೂ ಖಾಸಗಿ ವ್ಯಕ್ತಿಗೆ ನೀರು ಬಳಸಿಕೊಳ್ಳಲು ಅನುಮತಿ ನೀಡಿದ್ದು ಯಾರು’ ಎಂದು ಪ್ರಶ್ನಿಸಿದರು.

‘ನಾಲ್ಕು ವರ್ಷಗಳಿಂದ ಓವರ್‌ಹೆಡ್‌ ಟ್ಯಾಂಕ್‌ನಿಂದ ನೀರು ಪಡೆಯುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ. ಗ್ರಾಮಸ್ಥರು ಮೊಬೈಲ್‌ಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

₹ 1 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿ ಹೊರ ಗುತ್ತಿಗೆ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಪರಿಶೀಲನೆ ನಡೆಸಲು ರಚಿಸಲಾದ ಸಮಿತಿಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಯಿತು.

ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

**

ವ್ಯಕ್ತಿಯೊಬ್ಬರು ಓವರ್‌ಹೆಡ್‌ ಟ್ಯಾಂಕ್‌ ನಿಂದ ಬಾವಿಗಳಿಗೆ ನೀರು ತುಂಬಿಕೊಳ್ಳುತ್ತಿದ್ದಾರೆ. ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳಿಗೆ ನೋಟಿಸ್‌ ಕೊಡಿ.

-ಭಾರತಬಾಯಿ ಶೇರಿಕಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !