ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಟಿಎಂಸಿ ಅಡಿ ನೀರು ಪ್ರಸ್ತಾವಕ್ಕೆ ವಿರೋಧ

Last Updated 7 ಫೆಬ್ರುವರಿ 2018, 7:08 IST
ಅಕ್ಷರ ಗಾತ್ರ

ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಸಿಂಗಟಾಲೂರು ಏತನೀರಾವರಿ ಯೋಜನೆಗೆ ಹೆಚ್ಚುವರಿಯಾಗಿ 6 ಟಿಎಂಸಿ ಅಡಿ ನೀರು ಕೊಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಪಕ್ಷಾತೀತ ಹೋರಾಟ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸಿತು.

ಇಲ್ಲಿಯ ಸರ್ಕಿಟ್ ಹೌಸ್‌ನಲ್ಲಿ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ವಿವಿಧ ಪಕ್ಷ, ಸಂಘ-ಸಂಸ್ಥೆಗಳ ಮುಖಂಡರು ಮಂಗಳವಾರ ಸಭೆ ಸೇರಿ ಸಿಂಗಟಾಲೂರು ಏತನೀರಾವರಿ ಯೋಜನೆಗೆ ನೀರು ಪಡೆಯಲು ಯತ್ನಿಸುತ್ತಿರುವ ಮತ್ತು ಪಾವಗಡಕ್ಕೆ 2.5 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಿಡಲು ತೀರ್ಮಾನಿಸಿರುವ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಇದೇ ರೀತಿ ತುಂಗಭದ್ರಾ ಜಲಾಶಯದ ನೀರನ್ನು ಮೇಲ್ಭಾಗದಲ್ಲಿ ಪಡೆಯುತ್ತಾ ಹೋದಲ್ಲಿ ಮುಂದೊಂದು ದಿನ ಮೂರು ಜಿಲ್ಲೆಗಳು ಸಂಪೂರ್ಣ ನೀರಿನಿಂದ ವಂಚಿತಗೊಳ್ಳಬೇಕಾದ ಪರಿಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ’ ಎಂಬ ಸಭೆಯಲ್ಲಿ ಆತಂಕ ವ್ಯಕ್ತವಾಯಿತು.

‘ತುಂಗಭದ್ರಾ ಜಲಾಶಯದ ನೀರಿನ ಸಮರ್ಪಕ ವಿತರಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಲೋಪದೋಷಗಳು ಆಗುತ್ತಾ ಬಂದಿವೆ. ಕೈಗಾರಿಕೆಗಳಿಗೆ ಕಾನೂನು ಬಾಹಿರವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಕಾರಣ ತಜ್ಞರ ಸಮಿತಿಯೊಂದನ್ನು ರಚಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಅವಶ್ಯಕತೆಯಿದೆ’ ಎಂದು ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ತುಮಕೂರು, ಚಿತ್ರದುರ್ಗಕ್ಕೆ 30 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುತ್ತದೆ. ತುಂಗ ಜಲಾಶಯ ಮತ್ತು ಭದ್ರಾಕ್ಕೆ ಲಿಂಕ್ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ ನೀರಿನ ಅಭಾವ ಉಂಟಾಗಲಿದೆ ಎಂದು ಬಳ್ಳಾರಿ ಜಿಲ್ಲೆಯ ಪುರುಷೋತ್ತಮಗೌಡ ತಿಳಿಸಿದರು.

ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಮಾತನಾಡಿ, ‘ಮುಂಬರುವ ಪೀಳಿಗೆಗೆ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಾದರೆ ನೀರಿನ ಹರಿವು ಹೆಚ್ಚಿಸುವುದು ಮತ್ತು ಸಂಗ್ರಹಣ ಸಾಮರ್ಥ್ಯ ಹೆಚ್ಚಿಸುವುದು ನಮ್ಮ ಮುಂದಿರುವ ಕೆಲಸ. ಆ ಹಿನ್ನಲೆಯಲ್ಲಿ ಪರಮಶಿವಯ್ಯ ವರದಿಯನ್ನು ಜಾರಿಗೆ ತರಲು ಸರ್ಕಾರದ ಗಮನ ಸೆಳೆಯಬೇಕು’ ಎಂದರು.

ಸಾಹಿತಿ ವಿಠಪ್ಪ ಗೋರಂಟ್ಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಮುಖಂಡ ಅಶೋಕಗೌಡ ಗದ್ರಟಗಿ, ಹೋರಾಟಗಾರ ಜೆ.ಭಾರಧ್ವಾಜ್ ಗಂಗಾವತಿ, ಮಾಜಿ ಶಾಸಕ ಗಂಗಾಧರ್ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಅಮರೇಗೌಡ ವಿರುಪಾಪುರ, ರೈತ ಮುಖಂಡ ಶಾಮಸುಂದರ ಕೀರ್ತಿ, ಜಾತಿ ನಿರ್ಮೂಲನಾ ಚಳವಳಿ ಸಂಚಾಲಕ ಎಚ್.ಎನ್.ಬಡಿಗೇರ್, ಕೃಷಿ ಮಾರಾಟ ಮಂಡಳಿ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ್, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡರಾದ ಕೆ.ಜನಾರ್ದನ್, ಈರೇಶ ಇಲ್ಲೂರು ವಕೀಲ, ಅರವಿ ನಾಗನಗೌಡ, ಬಸವರಾಜ ನಾಡಗೌಡ, ಚಂದ್ರಭೂಪಾಲ ನಾಡಗೌಡ, ಗುಂಡಪ್ಪ ಬಳಿಗಾರ, ವಿ.ಎಸ್.ಸತ್ಯನಾರಾಯಣ, ಬಿ.ಎನ್.ಯರದಿಹಾಳ, ಸಾಯಿ ರಾಮ ಕೃಷ್ಣ, ವೆಂಕೋಬ ಕಲ್ಲೂರು, ದಾಸರಿ ಸತ್ಯನಾರಾಯಣ ಪಾಲ್ಗೊಂಡಿದ್ದರು.

* * 

ನಿವೃತ್ತ ಎಂಜಿನಿಯರ್ ಒಳಗೊಂಡ ತಜ್ಞರ ಸಮಿತಿ ರಚಿಸಿ ಅವರು ನೀಡುವ ವರದಿ ಆಧಾರದ ಮೇಲೆ ವಸ್ತುಸ್ಥಿತಿಯನ್ನು ಸರ್ಕಾರ ಗಮನ ಸೆಳೆಯಲು ಮತ್ತು ಪಕ್ಷಾತೀತವಾಗಿ ತುಂಗಭದ್ರಾ ಜಲಾಶಯ ಉಳಿಸಲು ಹೋರಾಟ ಮುಂದುವರೆಯಲಿದೆ.
ಕೆ.ವಿರೂಪಾಕ್ಷಪ್ಪ, ಮಾಜಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT