ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿರ್ವಹಣೆಯ ಸ್ಥಿತಿಗತಿ

Last Updated 29 ಜನವರಿ 2018, 8:56 IST
ಅಕ್ಷರ ಗಾತ್ರ

ಕೋಲಾರ: ರಸ್ತೆಗಳಲ್ಲಿ ದೂಳಿನ ಮಜ್ಜನ... ಹೆಜ್ಜೆ ಇಟ್ಟಲೆಲ್ಲಾ ಗುಂಡಿಗಳು... ಕಣ್ಣು ಹಾಯಿಸಿದಲೆಲ್ಲಾ ಕಲ್ಲು ಮಣ್ಣಿನ ರಾಶಿ... ಗುಂಡಿಮಯ ರಸ್ತೆಗಳ ಮಧ್ಯೆ ಆಮೆ ಗತಿಯಲ್ಲಿ ಸಾಗುವ ವಾಹನಗಳು... ಇದು ಯಾವುದೊ ಕುಗ್ರಾಮದ ಚಿತ್ರಣವಲ್ಲ. ಬದಲಿಗೆ ಜಿಲ್ಲಾ ಕೇಂದ್ರದ ದುಸ್ಥಿತಿ.

ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್‌ಡಿಬಿ) ಅಟಲ್‌ ನಗರ ಪುನರುತ್ಥಾನ ಹಾಗೂ ನಗರ ಪರಿವರ್ತನಾ ಯೋಜನೆಯಡಿ (ಅಮೃತ್‌) ನಗರದಲ್ಲಿ ಆರಂಭಿಸಿರುವ ಒಳ ಚರಂಡಿ (ಯುಜಿಡಿ) ಕಾಮಗಾ ರಿಯು ರಸ್ತೆಗಳ ಚಿತ್ರಣವನ್ನೇ ಬದಲಿಸಿದೆ.

ನಗರದಲ್ಲಿನ 159 ಕಿ.ಮೀ ರಸ್ತೆಯನ್ನು ನಗರಸಭೆ ಹಾಗೂ 10 ಕಿ.ಮೀ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯು ನಿರ್ವಹಣೆ ಮಾಡುತ್ತಿದೆ. ಕೆಯುಡಬ್ಲ್ಯೂಎಸ್‌ಡಿಬಿ ಯುಜಿಡಿ ಕಾಮಗಾರಿಗಾಗಿ ನಗರದೆಲ್ಲೆಡೆ ರಸ್ತೆ ಗಳನ್ನು ಮನಬಂದಂತೆ ಅಗೆದಿದ್ದು, ನಗರವಾಸಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಬವಣೆ ಪಡು ವಂತಾಗಿದೆ. ಕಾಮಗಾರಿಯಿಂದ ನಗರ ಸೌಂದರ್ಯ ಹಾಳಾಗಿದ್ದು, ದೂಳಿನ ಆರ್ಭಟ ಜೋರಾಗಿದೆ.

₹ 73 ಕೋಟಿ: ಅಮೃತ್‌ ಯೋಜನೆಯಡಿ ನಗರದ ಮೂಲ ಸೌಕರ್ಯಕ್ಕೆ ಬಿಡುಗಡೆಯಾಗಿರುವ ಅನುದಾನ ದಲ್ಲಿ ₹ 73 ಕೋಟಿಯನ್ನು ಯುಜಿಡಿ ಸೌಲಭ್ಯಕ್ಕೆ ಮೀಸಲಿಡಲಾಗಿದೆ. 1960ಕ್ಕೂ ಮುನ್ನ ನಿರ್ಮಾಣವಾಗಿರುವ ಯುಜಿಡಿ ಮಾರ್ಗದಲ್ಲಿ ಹಾಗೂ ಹೊರವಲಯದ ಬಡಾವಣೆಗಳಲ್ಲಿ ಹೊಸದಾಗಿ 120 ಕಿ.ಮೀ ಯುಜಿಡಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಯೋಜನೆಯಲ್ಲಿ 4 ಸಾವಿರ ಮ್ಯಾನ್‌ಹೋಲ್‌ ನಿರ್ಮಾಣವಾಗಲಿವೆ ಎಂಬುದು ನಗರಸಭೆ ಅಧಿಕಾರಿಗಳ ವಿವರಣೆ

ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ 2016ರ ನವೆಂಬರ್‌ನಲ್ಲಿ ಪೂರ್ಣ ಗೊಂಡಿದ್ದು, ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು 3 ವರ್ಷಗಳ ಗಡುವು ನೀಡಲಾಗಿದೆ. ಟಮಕ, ವಿನೋಬನಗರ ಸೇರಿದಂತೆ ಹೊರವಲಯದ ಬಡಾವಣೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರು ಈಗ ನಗರದೊಳಗೆ ಕಾಮಗಾರಿ ಆರಂಭಿಸಿದ್ದಾರೆ.

ಅವಾಂತರ ಒಂದೆರಡಲ್ಲ: ಗುತ್ತಿಗೆ ದಾರರು ಕಾಮಗಾರಿ ನೆಪದಲ್ಲಿ ಮಾಡಿ ರುವ ಅವಾಂತರ ಒಂದೆರ ಡಲ್ಲ. ಹಲವೆಡೆ ಕುಡಿಯುವ ನೀರು ಸರಬರಾಜಿನ ಪೈಪ್‌ಗಳನ್ನು ಹಾಳುಗೆಡವಿದ್ದಾರೆ. ಅಲ್ಲದೇ, ದೂರಸಂಪರ್ಕ ಜಾಲದ ವಯರ್‌ಗಳನ್ನು ತುಂಡರಿಸಿದ್ದಾರೆ. ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಗಳನ್ನೆಲ್ಲಾ ಅಡ್ಡಾದಿಡ್ಡಿ ಅಗೆದು, ಆ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವಂತೆ ಮಾಡಿದ್ದಾರೆ.

ಆರೋಗ್ಯ ಹಾಳು: ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ವಾಹನ ಸವಾರರು, ಜನಸಾಮಾನ್ಯರಿಗೆ ನಿತ್ಯವೂ ದೂಳಿನ ಅಭಿಷೇಕವಾಗುತ್ತಿದೆ. ವಾಹನ ಸಂಚರಿಸಿದಾಗ ಏಳುವ ದೂಳಿನಿಂದ ಜನರ ಆರೋಗ್ಯ ಹಾಳಾಗು ತ್ತಿದೆ. ಅಸ್ತಮಾ, ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ದೂಳಿನಿಂದ ರಕ್ಷಣೆ ಪಡೆಯಲು ಜನ ಕರವಸ್ತ್ರಗಳ ಮೊರೆ ಹೋಗಿದ್ದಾರೆ.

ದೂಳಿನ ಕಿರಿಕಿರಿ: ಕಾಮಗಾರಿ ಸ್ಥಳಗಳ ಅಕ್ಕಪಕ್ಕ ಇರುವ ಹೋಟೆಲ್‌, ಬೇಕರಿ, ಅಂಗಡಿಗಳ ಕೆಲಸಗಾರರು ಹಾಗೂ ವರ್ತಕರಿಗೆ ದೂಳಿನ ಸಮಸ್ಯೆಯಿಂದ ಕಿರಿಕಿರಿಯಾಗುತ್ತಿದೆ. ಹೋಟೆಲ್‌ ಮತ್ತು ಅಂಗಡಿಗಳಿಗೆ ತೂರಿ ಬರುವ ದೂಳಿನಿಂದ ಆಹಾರ ಪದಾರ್ಥಗಳು, ಸರಕುಗಳು ಕಲುಷಿತ ವಾಗುತ್ತಿವೆ. ಗ್ರಾಹಕರು ಅರಿವಿಲ್ಲದೆ ಹೋಟೆಲ್‌ಗಳಲ್ಲಿ ದೂಳುಮಯ ಆಹಾರವನ್ನೇ ಸೇವಿಸುತ್ತಿದ್ದಾರೆ. ಕೆಲಸ ಗಾರರಿಗೆ ದೂಳನ್ನು ಸ್ವಚ್ಛಗೊಳಿಸುವುದೇ ಕೆಲಸವಾಗಿದೆ.

ಕಾಮಗಾರಿ ಕಳಪೆ: ಹಲವೆಡೆ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಗಳನ್ನು ದುರಸ್ತಿ ಮಾಡಿಲ್ಲ. ಕೆಲವೆಡೆ ಮ್ಯಾನ್‌ಹೋಲ್‌ಗಳು ರಸ್ತೆ ಮಟ್ಟಕ್ಕಿಂತ ಮೇಲ್ಭಾಗದಲ್ಲಿದ್ದು, ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆಲ ಬಡಾವಣೆಗಳಲ್ಲಿ ಯುಜಿಡಿ ವ್ಯವಸ್ಥೆ ಚೆನ್ನಾಗಿದ್ದರೂ ಅನುದಾನ ಬಳಕೆ ಮಾಡಬೇಕೆಂಬ ಉದ್ದೇಶದಿಂದ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ರಸ್ತೆಗಳ ದುಸ್ಥಿತಿಯಿಂದ ಆಗಾಗ್ಗೆ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ. ರಸ್ತೆ ಗುಂಡಿಗಳಲ್ಲಿ ಬಿದ್ದು ಗಾಯಗೊಂಡ ಬೈಕ್‌ ಸವಾರರಿಗೆ ಲೆಕ್ಕವಿಲ್ಲ. ಕಾಮಗಾರಿ ಪೂರ್ಣಗೊಳ್ಳಲು ಇನ್ನು ನಾಲ್ಕೈದು ತಿಂಗಳು ಆಗಲಿದ್ದು, ನಗರವಾಸಿಗಳು ಆವರೆಗೆ ದೂಳಿನ ಸಂಕಷ್ಟ ಸಹಿಸಿಕೊಳ್ಳುವುದು ಅನಿವಾರ್ಯ.

* * 

ಬಡಾವಣೆಯಲ್ಲಿ ಯುಜಿಡಿ ವ್ಯವಸ್ಥೆ ಚೆನ್ನಾಗಿದ್ದು, ಕೊಳಚೆ ನೀರು ಸರಾಗ ವಾಗಿ ಹರಿಯುತ್ತಿತ್ತು. ಹೊಸ ಯುಜಿಡಿ ಸಂಪರ್ಕದ ಅಗತ್ಯವಿರಲಿಲ್ಲ
ನಾರಾಯಣ
ಕಠಾರಿಪಾಳ್ಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT