ಸೋಮವಾರ, ಏಪ್ರಿಲ್ 19, 2021
25 °C
ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳ ಘೋಷಣೆ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ: ಉಪ ಚುನಾವಣೆ ಚಟುವಟಿಕೆ ಚುರುಕು

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಒಲ್ಲೆ ಒಲ್ಲೆ ಎನ್ನುತ್ತ ಕೊನೆಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ ಅವರು ಈ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯನ್ನು ಎಲ್ಲರಕ್ಕಿಂತ ಮೊದಲೇ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಜಿಗಿದು ಟಿಕೆಟ್ ಪಡೆದಿರುವ ಕಾರಣ ಯಾರಿಗೆ ಲಾಭವಾಗಬಲ್ಲದು ಎಂಬುದರ ಲೆಕ್ಕಾಚಾರ ಆರಂಭವಾಗಿದೆ.

ಕ್ಷೇತ್ರದಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದರೂ ಈ ಸಮುದಾಯದ ಅಭ್ಯರ್ಥಿಗಳು ಇತರರ ಮತಗಳನ್ನು ಸೆಳೆಯುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ಪಕ್ಷದವರು ಟಿಕೆಟ್ ನೀಡುತ್ತಿರಲಿಲ್ಲ. ಒಮ್ಮೆ ಕಾಂಗ್ರೆಸ್ ಈ ಸಮುದಾಯದವರಿಗೆ ಟಿಕೆಟ್ ನೀಡಿ ಕೈಸುಟ್ಟುಕೊಂಡಿತ್ತು. ಆದರೂ, ಕುಮಾರಸ್ವಾಮಿಯವರು ಪಕ್ಷದ ವೀಕ್ಷಕರನ್ನು ಕ್ಷೇತ್ರಕ್ಕೆ ಕಳುಹಿಸಿ ಇದೇ ಸಮುದಾಯದ ಮುಖಂಡರು ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ವಾತಾವರಣ ತಯಾರು ಮಾಡಬೇಕು ಎಂದು ಸಲಹೆ ನೀಡಿದ್ದರು. ಅದರಂತೆ ಕಾಂಗ್ರೆಸ್‌ನಿಂದ ಮೂರು ಸಲ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಫಲ ಆಗಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡ ಯಸ್ರಬ್ ಅಲಿ ಅವರನ್ನು ಮರುಕ್ಷಣವೇ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಹಾಗೆ ನೋಡಿದರೆ, ಪಕ್ಷದಲ್ಲಿ ಕೆಲ ಆಕಾಂಕ್ಷಿಗಳು ಇದ್ದರಾದರೂ, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿರುವುದರ ಹಿಂದಿನ ಗುಟ್ಟೇನಿರಬಹುದು ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.

ಅಲ್ಪಸಂಖ್ಯಾತರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದರು. ಒಟ್ಟಾರೆ, ಅಹಿಂದ ಮತಗಳು ದೊರೆತಿದ್ದರಿಂದ ಕಾಂಗ್ರೆಸ್‌ನ ಬಿ.ನಾರಾಯಣರಾವ್ ಗೆದ್ದಿದ್ದರು. ಆ ವಾತಾವರಣ ಈಗಲೂ ಇಲ್ಲಿದೆ. ಆದರೆ, ಈಗ ಯಸ್ರಬ್ ಅಲಿ ಖಾದ್ರಿ ಅವರು ಕಣದಲ್ಲಿರುವ ಕಾರಣ ಪರಿಸ್ಥಿತಿ ಬದಲಾಗಲಿದೆ.

ಆದರೂ, ಅಲ್ಪಸಂಖ್ಯಾತರ ಮತಗಳನ್ನು ಜೆಡಿಎಸ್ ಎಷ್ಟು ಪ್ರಮಾಣದಲ್ಲಿ ಪಡೆಯಬಹುದು ಎಂಬುದು ಕಾಂಗ್ರೆಸ್ ಅಭ್ಯರ್ಥಿಯ ಪ್ರಭಾವದ ಮೇಲೆ ಅವಲಂಬಿತವಾಗಿದೆ. ಕಾಂಗ್ರೆಸ್ ಕೂಡ ಮಲ್ಲಮ್ಮ ಬಿ.ನಾರಾಯಣರಾವ್ ಅವರನ್ನು ನಿರೀಕ್ಷಿಸಿದಂತೆಯೇ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಅನುಕಂಪದ ಅಲೆ ಸೃಷ್ಟಿಯಾದರೆ ಕಳೆದ ಚುನಾವಣೆಯಂತೆಯೇ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಕೈ ಬಿಡದಿರಬಹುದು. ಏನಿದ್ದರೂ, ಬಿಜೆಪಿ ಅಭ್ಯರ್ಥಿಯ ಘೋಷಣೆಯ ನಂತರ ಸ್ಥಿತಿ ಸ್ಪಷ್ಟವಾಗಲಿದೆ.

ಜನರ ಚಿತ್ತ ಬಿಜೆಪಿಯತ್ತ
ಬೀದರ್‌:
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬಸವಕಲ್ಯಾಣ ಉಪ ಚುನಾವಣೆಯ ಅಭ್ಯರ್ಥಿಗಳನ್ನು ಘೋಷಿಸಿದ ನಂತರ ಕ್ಷೇತ್ರದ ಜನರ ಚಿತ್ತ ಬಿಜೆಪಿಯತ್ತ ನೆಟ್ಟಿದೆ. ಶನಿವಾರ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟವಾಗುವ ನಿರೀಕ್ಷೆ ಇದೆ.

ಬಿ.ಎಸ್‌.ಯಡಿಯೂರಪ್ಪ ಅವರು ಪಕ್ಷದಲ್ಲಿ ಪ್ರಭಾವ ಉಳಿಸಿಕೊಳ್ಳಲು ಬಸವಕಲ್ಯಾಣದಲ್ಲಿ ಗೆಲುವು ಸಾಧಿಸಲೇಬೇಕು ಎಂದು ಪಣ ತೊಟ್ಟಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರ ಮೇಲೆ ಒತ್ತಡ ತಂದು ಪುತ್ರನಿಗೆ ಟಿಕೆಟ್‌ ಕೊಡಿಸಿದರೂ ಅಚ್ಚರಿ ಇಲ್ಲ ಎಂದು ವಿಜಯೇಂದ್ರ ಆಪ್ತ ವಲಯದವರು ಮಾತನಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ಬೇರೆ ಪಕ್ಷಗಳಂತೆ ಇಲ್ಲ. ಅಭ್ಯರ್ಥಿಯ ಆಯ್ಕೆ ಅಂತಿಮ ಕ್ಷಣದ ವರೆಗೂ ಗೊತ್ತಾಗಲಾರದು. ಇಲ್ಲಿ ವಂಶ ಪಾರಂಪರ್ಯಕ್ಕೆ ಅವಕಾಶ ಇಲ್ಲ. ನಿಷ್ಠಾವಂತ ಕಾರ್ಯಕರ್ತನಿಗೇ ಪಕ್ಷದ ಟಿಕೆಟ್‌ ದೊರೆಯಲಿದೆ. ಇಷ್ಟನ್ನು ಬಿಟ್ಟರೆ ಉಳಿದ ಎಲ್ಲವೂ ಉ‍ಹಾಪೋಹಗಳೇ ಆಗಿವೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

ಶನಿವಾರ ಬೆಂಗಳೂರಲ್ಲಿ ಪಕ್ಷದ ವರಿಷ್ಠರ ಸಭೆ ಕರೆಯಲಾಗಿದೆ. ಅಂದು ಅಭ್ಯರ್ಥಿಯ ಹೆಸರು ಪ್ರಕಟಿಸುವ ಸಾಧ್ಯತೆ ಇದೆ. ಟಿಕೆಟ್‌ ದೊರೆಯುವ ಸಾಧ್ಯತೆಗಳು ಕಡಿಮೆ ಇದ್ದರೂ ಕೆಲ ಮುಖಂಡರು ಗುಂಪು ಕಟ್ಟಿಕೊಂಡು ಪಕ್ಷದ ವರಿಷ್ಠರ ಮೇಲೆ ಗಾಡ್ ಫಾದರ್‌ಗಳ ಮೂಲಕ ಒತ್ತಡ ಹಾಕುವ ತಂತ್ರವನ್ನು ಮುಂದುವರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು