ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಶಾಂತಿಯುತ ಮತದಾನ

Last Updated 17 ಏಪ್ರಿಲ್ 2021, 15:47 IST
ಅಕ್ಷರ ಗಾತ್ರ

ಬಸವಕಲ್ಯಾಣ: ಬಸವಕಲ್ಯಾಣ ವಿಧಾಸಭಾ ಕ್ಷೇತ್ರದ ಉಪ ಚುನಾವಣೆ ಶನಿವಾರ ಶಾಂತಿಯುತವಾಗಿ ನಡೆಯಿತು. ಕ್ಷೇತ್ರದ ವ್ಯಾಪ್ತಿಯ 326 ಮತಗಟ್ಟೆಗಳಲ್ಲಿ ಸಂಜೆ 7 ಗಂಟೆಯ ವರೆಗೂ ಮತದಾನ ನಡೆಯಿತು.

ಬಸವಕಲ್ಯಾಣ ತಾಲ್ಲೂಕಿನ ಮುಚಳಂಬದ ಮತಗಟ್ಟೆ 41ರಲ್ಲಿ ಬೆಳಿಗ್ಗೆ 10.20ರ ವೇಳೆಗೆ 128 ಮಂದಿ ಮಾತ್ರ ಮತದಾನ ಮಾಡಿದ್ದರು. ಧನ್ನೂರ (ಕೆ.ಎಚ್‌) ಗ್ರಾಮದ ಮತಗಟ್ಟೆ 50ರಲ್ಲಿ 843 ಮತದಾರರ ಪೈಕಿ 10 ಗಂಟೆಯ ವೇಳೆಗೆ ಶೇಕಡ 25ರಷ್ಟು ಜನ ಮತಹಕ್ಕು ಚಲಾಯಿಸಿದ್ದರು.

ಬಸವಕಲ್ಯಾಣದ ಜೀಜಾಮಾತಾ ಶಾಲೆಯ ಮತಗಟ್ಟೆ 80ರಲ್ಲಿ ಬೆಳಿಗ್ಗೆ 10 ಗಂಟೆಗೆ 744 ಮತದಾರರಲ್ಲಿ 131 ಜನ ಮತದಾನ ಮಾಡಿದ್ದರು. ಲಮಾಣಿ ವಿದ್ಯಾರ್ಥಿ ನಿಲಯದ ಮತಗಟ್ಟೆ 87ರಲ್ಲೂ ಮತಹಕ್ಕು ಚಲಾಯಿಸಿದವರ ಸಂಖ್ಯೆ 150 ದಾಟಿರಲಿಲ್ಲ. ನೀಲಾಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಶೇಕಡ 30ರಷ್ಟು ಜನ ಮಾತ್ರ ಮತದಾನ ಮಾಡಿದ್ದರು.

ಬೇಟಬಾಲಕುಂದಾದಲ್ಲಿ ಸ್ಥಾಪಿಸಿದ್ದ ಸಖಿ ಮತಗಟ್ಟೆ ಮತದಾರರನ್ನು ಸೆಳೆಯಿತು. ಮತಗಟ್ಟೆಗೆ ಪೂರ್ಣ ಗುಲಾಬಿ ಬಣ್ಣ ಬಳಿಯಲಾಗಿತ್ತು. ಪ್ರವೇಶ ದ್ವಾರದಲ್ಲಿ ಗುಲಾಬಿ ಬಣ್ಣದ ಬಲೂನ್‌ ಅಳವಡಿಸಲಾಗಿತ್ತು. ಗುಲಾಬಿ ಬಣ್ಣದ ಸೀರೆ ಧರಿಸಿದ್ದ ಮಹಿಳಾ ಸಿಬ್ಬಂದಿಯೇ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಿದರು. ಇಲ್ಲಿ ಬೆಳಿಗ್ಗೆ 9 ಗಂಟೆ ವೇಳೆಗೆ 63 ಹಾಗೂ 11 ಗಂಟೆ ವೇಳೆಗೆ 104 ಜನ ಮತದಾನ ಮಾಡಿದ್ದರು.

ಮಹಾರಾಷ್ಟ್ರದ ಗಡಿಯಲ್ಲಿರುವ ಮಂಠಾಳದ ಪ್ರಾಥಮಿಕ ಶಾಲೆಯ ಮತಗಟ್ಟೆ 161ರಲ್ಲಿ ಬೆಳಿಗ್ಗೆ 7 ರಿಂದ 9 ಗಂಟೆ ವರೆಗೆ 121, 9ರಿಂದ 11 ಗಂಟೆಗೆ 129 ಹಾಗೂ 11ರಿಂದ ಮಧ್ಯಾಹ್ನ 1 ಗಂಟೆ ವರೆಗೆ 66 ಜನ ಮತದಾನ ಮಾಡಿದ್ದರು. ಮಧ್ಯಾಹ್ನ ಶೇಕಡ 50 ರಷ್ಟು ಮತದಾನವಾಗಿತ್ತು.


ಮತದಾರರಿಗೆ ನೆರವು

ಮಧ್ಯಾಹ್ನದ ವರೆಗೂ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು. ಬಿಸಿಲಿನಿನ ಝಳಕ್ಕೆ ಅನೇಕ ಮತದಾರರು ಮತಗಟ್ಟೆಗಳತ್ತ ಸುಳಿಯಲಿಲ್ಲ. ಸಂಜೆಯ 5 ಗಂಟೆಯ ನಂತರ ಮತ್ತೆ ಮತದಾನ ಬಿರುಸು ಪಡೆದುಕೊಂಡಿತು. ಮಂಠಾಳದಲ್ಲಿ ರಾಜಕೀಯ ಪಕ್ಷಗಳು ಆಯ್ದ ಮತದಾರರನ್ನು ಆಟೊರಿಕ್ಷಾದಲ್ಲಿ ಕರೆದುಕೊಂಡು ಬಂದಿದ್ದು, ಕಂಡು ಬಂದಿತು.

ಮತಗಟ್ಟೆಗಳ ಸಮೀಪ ರಾಜಕೀಯ ಪಕ್ಷಗಳ ಕಾರ್ಯಕರ್ತರ ದಂಡು ಕಂಡು ಬರಲಿಲ್ಲ. ಆದರೆ, ಮತಗಟ್ಟೆಗೆ ಬರುತ್ತಿದ್ದವರಿಗೆ ತೆರೆ ಮರೆಯಲ್ಲಿ ಕೈಜೋಡಿಸಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಮನವಿ ಕೊಂಡರು.

ಬಿಸಿಲನ್ನು ಲೆಕ್ಕಿಸದೇ ಕೆಲ ವಯೋವೃದ್ದರು, ವಿಕಲಚೇತನರು, ಯುವ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಉಪ ಚುನಾವಣೆಯಲ್ಲಿ ತಮ್ಮ ಅಂಗರಕ್ಷಕ ಮತ್ತು ವಾಹನ ಚಾಲಕರಿಗೆ ಮತ ಹಕ್ಕು ಚಲಾಯಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸಹಕರಿಸಿದರು.

ಅಂಗರಕ್ಷಕ ಹನುಮಂತ ರೆಡ್ಡಿ ಅವರು ಇಲ್ಲಾಳ ಗ್ರಾಮದ ಮತಗಟ್ಟೆ ಸಂಖ್ಯೆ 175ರಲ್ಲಿ ಮತ್ತು ವಾಹನ ಚಾಲಕ ಪಾಪನಾಶ ಅವರು ಮುಚಳಂಬದ ಮತಗಟ್ಟೆ ಸಂಖ್ಯೆ 40ರಲ್ಲಿ ಮತಹಕ್ಕು ಚಲಾಯಿಸಿದರು. ಜಿಲ್ಲಾಧಿಕಾರಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ ತಮ್ಮ ಕರ್ತವ್ಯಪಾಲನೆ ಜತೆಗೆ ತಮ್ಮ ಸಿಬ್ಬಂದಿಯ ಮತದಾನಕ್ಕೆ ಅವಕಾಶ ಕಲ್ಪಿಸಿದರು.

ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಬೆಳಿಗ್ಗೆ 9 ಗಂಟೆಗೆ ಶೇ 7.46 ರಷ್ಟು, 11 ಗಂಟೆಗೆ ಶೇ 19.48, ಮಧ್ಯಾಹ್ನ 1 ಗಂಟೆಗೆ ಶೇ 29, 3 ಗಂಟೆ ಶೇ 37.73 ಹಾಗೂ ಸಂಜೆ 5 ಗಂಟೆಗೆ ಶೇ.52.40 ರಷ್ಟು ಮತದಾನವಾಗಿದೆ. ಈ ಬಾರಿ ಮತದಾನ ಅವಧಿಯನ್ನು 7 ಗಂಟೆಗೆ ವಿಸ್ತರಿಸಿರುವ ಕಾರಣ ಬಿಸಿಲು ಕಡಿಮೆಯಾದ ಕಾರಣ ಅನೇಕ ಜನ ಸಂಜೆ ವೇಳೆಗೆ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.

ಬಸವಕಲ್ಯಾಣ ವಿಧಾಬಸಭಾ ಕ್ಷೇತ್ರದಲ್ಲಿ 2013ಲ್ಲಿ ಶೇಕಡ 63 ರಷ್ಟು ಹಾಗೂ 2018ರಲ್ಲಿ ಶೇಕಡ 64,56 ಮತದಾನವಾಗಿತ್ತು. ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಕಡಿಮೆಯಾಗಿದೆ.

***
ಮೊದಲ ಮತ: ಖುಷಿ

ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದ ಎಂಎಸ್‌ಸಿ ವಿದ್ಯಾರ್ಥಿನಿ ಅಪರ್ಣಾ ಮತ್ತು ಎಂಕಾಂ ವಿದ್ಯಾರ್ಥಿನಿ ಪೂಜಾರಾಣಿ ಅವರು ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿ ಸಂತಸ ಹಂಚಿಕೊಂಡರು. ವೃದ್ಧೆ ಮೆಹತಾಬಿ ಅವರು ಮೊಮ್ಮಗನ ಸಹಾಯದಿಂದ ಬೇಟಬೆಳಕುಂದಾದ ಮಹಿಳಾ ಸ್ನೇಹಿ ಮತಗಟ್ಟೆಗೆ ಬಂದು ಮತದಾನ‌ ಮಾಡಿದ್ದು ವಿಶೇಷವಾಗಿತ್ತು.

ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಏಪ್ರೀಲ್ 17ರಂದು ಬೆಳಿಗ್ಗೆ ವಿವಿಧ ಮತಗಟ್ಟೆಗಳಿಗೆ ಭೇಟಿ‌ ನೀಡಿ ಪರಿಶೀಲಿಸಿದರು. ಇಲ್ಲಾಳ‌ ಮತ್ತು ಮುಚಳಂಬದ ಮತಗಟ್ಟೆಗಳಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಬಿಎಲ್ಒ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಸ್ನೇಹಿ 'ಸಖಿ' ಬೇಟಬೆಳಕುಂದಾ ಮತಗಟ್ಟೆ

ಬೀದರ್‌: ಮಹಿಳಾ ಮತದಾರರಿಗೆ ಮತದಾನಕ್ಕೆ ಪ್ರೇರೇಪಿಸಲು ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಎರಡು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬಸವಕಲ್ಯಾಣ ತಾಲೂಕಿನ ಬೇಟಬಾಲಕುಂದಾ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಸ್ಥಾಪಿಸಿದ್ದ ಮಹಿಳಾ ಸ್ನೇಹಿ ಸಖಿ ಮತಗಟ್ಟೆ ಗಮನ ಸೆಳೆಯಿತು.

ಮತಗಟ್ಟೆ ಅಧಿಕಾರಿಗಳಾಗಿ ಅನಿತಾ ಸಾವಳಕರ್, ಕವಿತಾ ಬಿ ಎಚ್, ಕನ್ಯಾಕುಮಾರಿ, ಸಂಗಮ್ಮ ಮತ್ತು ಸಿಬ್ಬಂದಿ ಸುನೀತಾ ಕಾರ್ಯನಿರ್ವಹಿಸಿದರು. ರಾಜ್ಯಮಟ್ಟದ ಮಾಸ್ಟರ್ ಟ್ರೇನರ್ ಗೌತಮ ಅರಳಿ ಇದ್ದರು. ಸಖಿ ಮತಗಟ್ಟೆಯಲ್ಲಿ ಒಟ್ಟು 679 ಮತದಾರರ ಪೈಕಿ ಬೆಳಿಗ್ಗೆ 9 ಗಂಟೆವರೆಗೆ 22 ಪುರುಷರು ಮತ್ತು 10 ಜನ ಮಹಿಳೆಯರು, ಬೆಳಗಿನ 11 ಗಂಟೆವರೆಗೆ 49 ಮಹಿಳೆಯರು ಮತ್ತು 77 ಪುರುಷರು ಮತ ಚಲಾಯಿಸಿದ್ದರು.

***
ಮೇ 2 ರಂದು ಮತ ಎಣಿಕೆ

ಬೀದರ್‌ನ ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಶನಿವಾರ ರಾತ್ರಿ ಮತಯಂತ್ರಗಳನ್ನು ತಂದು ಇಡಲಾಗಿದೆ. ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಮೇ 2ರಂದು ಮತಗಳ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT