ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಸಾತ್; ಎಲ್ಲೆಲ್ಲೂ ಸರತಿ ಸಾಲು..!

ಮತಗಟ್ಟೆ ಕೇಂದ್ರದ ಪ್ರವೇಶದಲ್ಲೇ ದಾಖಲೆ ಪರಿಶೀಲನೆ; ಅನಾರೋಗ್ಯ ಪೀಡಿತರಿಗೆ, ವಯೋವೃದ್ಧರಿಗೆ ವಾಹನ ವ್ಯವಸ್ಥೆ
Last Updated 13 ಮೇ 2018, 8:57 IST
ಅಕ್ಷರ ಗಾತ್ರ

ವಿಜಯಪುರ: ನಸುಕಿನ ಆರು ಗಂಟೆ ಯಿಂದಲೂ ಮತಗಟ್ಟೆಗಳ ಮುಂಭಾಗ ಮತದಾರರ ಸರತಿ ಸಾಲು. ಮಧ್ಯಾಹ್ನ 1 ರಿಂದ ಸಂಜೆ 4ರವರೆಗೂ ಮಾತ್ರ ಸ್ವಲ್ಪ ಇಳಿಮುಖ. ಮತದಾನದ ಅವಧಿ ಪೂರ್ಣಗೊಂಡರೂ; ಮತ್ತೆ ತಾಸುಗಟ್ಟಲೇ ಸರದಿಯಲ್ಲಿ ನಿಂತು ಅತ್ಯುತ್ಸಾಹದಿಂದ ಮತ ಚಲಾಯಿಸಿದ ಮತದಾರರು...

ಜಿಲ್ಲೆಯ 2098 ಮತಗಟ್ಟೆಗಳ ಮುಂಭಾಗವೂ ಕಿಕ್ಕಿರಿದ ಜನಸಂದಣಿ. ಪುರುಷರು, ಯುವಕರಿಗೆ ಸೆಡ್ಡು ಹೊಡೆಯುವಂತೆ ಮಹಿಳೆಯರು ಸಹ ಮತಗಟ್ಟೆ ಮುಂಭಾಗ ಸಾಲು ಹಚ್ಚಿ ಮತ ಯಾಚಿಸಿದ ದೃಶ್ಯಾವಳಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಶನಿವಾರ ನಡೆದ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ಗೋಚರಿಸಿತು.

ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಯ್ತು. ಆದರೆ ವಿವಿಧೆಡೆ ಇವಿಎಂ ಯಂತ್ರಗಳ ತಾಂತ್ರಿಕ ಲೋಪದಿಂದ ವಿಳಂಬವಾದ ದೂರುಗಳು ಕೇಳಿ ಬಂದವು. ನಂತರ ತಂತ್ರಜ್ಞರು ಸರಿ ಪಡಿಸಿದ ಬಳಿಕ ಎಲ್ಲೆಡೆ ಮತದಾನ ಸುಗಮವಾಗಿ ನಡೆಯಿತು.

ಪ್ರವೇಶ ದ್ವಾರದಲ್ಲೇ ತಪಾಸಣೆ: ಮತಗಟ್ಟೆ ಕೇಂದ್ರಗಳನ್ನು ಪ್ರವೇಶಿಸುವ ದ್ವಾರದಲ್ಲೇ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪ್ಯಾರಾ ಮಿಲಿಟರಿ ತುಕಡಿಯ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಜಂಟಿಯಾಗಿ ಮತದಾರರ ದಾಖಲೆ ಪರಿಶೀಲಿಸಿ, ಮತದಾರರನ್ನು ಒಳಗೆ ಕಳುಹಿಸಿಕೊಟ್ಟ ಚಿತ್ರಣ ಗ್ರಾಮೀಣ ಪ್ರದೇಶದ ಎಲ್ಲೆಡೆ ಗೋಚರಿಸಿತು.

ಮತದಾನ ಮಾಡಿದ ಮತದಾರ ರನ್ನು ಮತಗಟ್ಟೆಯಿಂದ ತ್ವರಿತವಾಗಿ ಹೊರ ಕಳುಹಿಸಿತು. ನಗರ ಕ್ಷೇತ್ರದಲ್ಲೂ ಕೆಲವೆಡೆ ಭದ್ರತಾ ಸಿಬ್ಬಂದಿ ಖಡಕ್‌ ಆಗಿ ತಮ್ಮ ಕರ್ತವ್ಯ ನಿರ್ವಹಿಸಿದರು. ನಸುಕಿನಲ್ಲೇ ನಗರದ ಗಾಂಧಿಚೌಕ್‌ನ ಬಾಲಕ–ಬಾಲಕಿಯರ ಸರ್ಕಾರಿ ಕಾಲೇಜು ಮತಗಟ್ಟೆ ಕೇಂದ್ರದೊಳಗೆ ಮತ ಚಲಾಯಿಸಿಯೂ ಹೊರಭಾಗದಲ್ಲಿ ನಿಂತಿದ್ದ ಮತದಾರರೊಬ್ಬರನ್ನು ಭದ್ರತಾ ಸಿಬ್ಬಂದಿ ಬಲವಂತದಿಂದ ಹೊರಹಾಕಿತು.

‘ಮೂರ್ನಾಲ್ಕು ಮತಗಟ್ಟೆ ಒಂದೇ ಆವರಣದಲ್ಲಿರುವ ಕೇಂದ್ರಗಳಲ್ಲಿ ಪ್ರವೇಶದ್ವಾರದಲ್ಲೇ ದಾಖಲೆ ಪರಿಶೀಲಿ ಸುತ್ತಿದ್ದೇವೆ. ಮತದಾರನ ಮತ ಯಾವ ಮತಗಟ್ಟೆಯಲ್ಲಿ ಬರುತ್ತದೆ. ಆ ಮತಗಟ್ಟೆ ಕೇಂದ್ರ ಎಲ್ಲಿದೆ ಎಂಬುದನ್ನು ಇಲ್ಲಿಯೇ ತಿಳಿಸಿ ಒಳಗೆ ಕಳುಹಿಸುತ್ತಿದ್ದೇವೆ.

ಇದು ಮತದಾರರಿಗೆ ಮತ ಚಲಾಯಿಸಲು ಸರಳವಾಗಿದೆ. ಇದರ ಜತೆಗೆ ಒಳ ಭಾಗದಲ್ಲಿ ಅನಗತ್ಯವಾಗಿ ಜನರ ಗುಂಪುಗೂಡುವುದನ್ನು ತಪ್ಪಿಸಲು ಸಹ ಅನುಕೂಲಕಾರಿಯಾಗಿದೆ’ ಎಂದು ಬಬಲೇಶ್ವರ ತಾಲ್ಲೂಕು ಮಮದಾಪುರ ಗ್ರಾಮದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಅಸಹಾಯಕರು, ವೃದ್ಧರು, ಅನಾರೋಗ್ಯ ಪೀಡಿತರನ್ನು ಮತಗಟ್ಟೆ ಯೊಳಗೆ ಕರೆದೊಯ್ಯಲು ವಾಹನ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದೇವೆ. ಚುನಾವಣಾ ಸಿಬ್ಬಂದಿ ಹೊರತುಪಡಿಸಿ ಇನ್ಯಾರ ವಾಹನ ಪ್ರವೇಶಕ್ಕೂ ಅವಕಾಶ ನೀಡುತ್ತಿಲ್ಲ’ ಎಂದು ವಿಜಯಪುರದ ಗಾಂಧಿಚೌಕ್‌ನಲ್ಲಿನ ಸರ್ಕಾರಿ ಕಾಲೇಜಿನ ಮತಗಟ್ಟೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಬೆಂಗಳೂರಿನ ಪೊಲೀಸ್ ಸಿಬ್ಬಂದಿ ತಿಳಿಸಿದರು.

ಎಲ್ಲೆಲ್ಲೂ ವಾಹನ ವ್ಯವಸ್ಥೆ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಮತಗಟ್ಟೆಗಳಿಗೆ ಮತದಾರರನ್ನು ಕರೆ ತರಲು ಪ್ರಮುಖ ಅಭ್ಯರ್ಥಿಗಳು ವಾಹನ ವ್ಯವಸ್ಥೆ ಮಾಡಿದ್ದರು. ವಿಜಯಪುರದಲ್ಲಿ ಆಟೊ ವ್ಯವಸ್ಥೆ ಗೋಚರಿಸಿತು. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತದಾರರ ಮನೆ ಬಾಗಿಲಿಗೆ ಆಟೊ ಕೊಂಡೊಯ್ದು, ಮತದಾರರನ್ನು ಕರೆ ತಂದು ಮತ ಹಾಕಿಸಿ ಮತ್ತೆ ವಾಪಸ್‌ ಕಳುಹಿಸಿದ ಚಿತ್ರಣ ಕಂಡು ಬಂತು.

ಗ್ರಾಮೀಣ ಪ್ರದೇಶದಲ್ಲಿನ ಚಿತ್ರಣವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳ ಕಾರ್ಯಕರ್ತರು ಟಂ ಟಂ, ಸುಮೋ ಜೀಪ್‌ಗಳಲ್ಲಿ ಮತದಾರರನ್ನು ಮನೆ ಗಳಿಂದ ಕರೆ ತಂದರು. ಮತಗಟ್ಟೆ ಬಳಿ ಈ ವಾಹನಗಳು ಬರುತ್ತಿದ್ದಂತೆ ಕಾರ್ಯಕರ್ತ ಸಮೂಹ ಮಾದರಿ ಮತ ಯಂತ್ರ ಹಿಡಿದು, ಇದೇ ನಂಬರ್, ಚಿಹ್ನೆ, ಭಾವಚಿತ್ರವಿರುವುದಕ್ಕೆ ಮತ ಹಾಕಿ ಎಂದು ದುಂಬಾಲು ಬೀಳುತ್ತಿದ್ದುದು ಎಲ್ಲೆಡೆ ಸಹಜ ದೃಶ್ಯವಾಗಿತ್ತು. ವೃದ್ಧರು, ಅಶಕ್ತರನ್ನು ಮತಗಟ್ಟೆ ಕೇಂದ್ರದ ಬಳಿಯೇ ಕರೆದೊಯ್ದು ಮತ ಹಾಕಿಸಿದರು.

ಜಾತ್ರೆಯ ಚಿತ್ರಣ...

ಮತಗಟ್ಟೆ ಕೇಂದ್ರಗಳ ಮುಂಭಾಗ ಜಾತ್ರೆಯ ಚಿತ್ರಣ ಗೋಚರಿಸಿತು. ಯುವಕರು, ವಯಸ್ಕರು ಸೇರಿದಂತೆ ಕೆಲವೆಡೆ ಮಹಿಳೆಯರು ನೆರೆದಿದ್ದುದು ವಿಶೇಷವಾಗಿತ್ತು.

ಮತಗಟ್ಟೆಯಿಂದ ಇನ್ನೂರು ಮೀಟರ್ ದೂರದಲ್ಲಿ ಜಮಾಯಿಸಿದ್ದ ಆಯಾ ಪಕ್ಷಗಳ ಕಾರ್ಯಕರ್ತರ ಗುಂಪು ಉತ್ಸಾಹದಿಂದ ಮತದಾರರ ಅಂತಿಮ ಕ್ಷಣದ ಮನವೊಲಿಕೆಗೆ ಹಲವು ಕಸರತ್ತು ನಡೆಸುವಲ್ಲಿ ನಿರತವಾಗಿತ್ತು.

ಹೊನಗನಹಳ್ಳಿ, ಕಾರಜೋಳ, ಕಾಖಂಡಕಿ, ಉಪ್ಪಲದಿನ್ನಿ, ಮಮದಾಪುರ, ಶೇಗುಣಸಿ, ಹಲಗಣಿ, ಬಬಲೇಶ್ವರ, ಸಾರವಾಡ ಗ್ರಾಮಗಳ ಮತಗಟ್ಟೆ ಮುಂಭಾಗ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರು ಪೈಪೋಟಿಯಿಂದ ನೆರೆದು, ತಮ್ಮ ಪಕ್ಷಗಳ ಪರ ಮತ ಯಾಚಿಸಿದರು.

ಉಪ್ಪಲದಿನ್ನಿಯಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಬರುತ್ತಿದ್ದ ಮತದಾರರಿಗೆ ‘ಒಂದಕ್ಕೊತ್ತಿದರೆ ನೀರು, ಎರಡಕ್ಕೊತ್ತಿದರೆ ಬೀರು, ನೀವೇ ಯೋಚಿಸಿ ತೀರ್ಮಾನಿಸಿ’ ಎಂದು ಮತ ಯಾಚಿಸಿದರೆ; ಬಬಲೇಶ್ವರದಲ್ಲಿ ಕಾಂಗ್ರೆಸ್‌, ಬಿಜೆಪಿಯ ಮಹಿಳಾ ಕಾರ್ಯಕರ್ತರು ಮತಗಟ್ಟೆಯ ಮುಂಭಾಗವೇ ಕುಳಿತು ತಮ್ಮವರು ಮತ ಚಲಾಯಿಸಲು ಬರುತ್ತಿದ್ದಂತೆ, ಹೂವಿಗೆ–ಹಸ್ತಕ್ಕೆ ಎಂದು ಮೊರೆಯಿಡುತ್ತಿದ್ದ ಚಿತ್ರಣ ಗೋಚರಿಸಿತು.

**
ನಿತ್ಯ ನಡೆಯುತ್ತಿದ್ದ ವಹಿವಾಟಿ ಗಿಂತ ಹಲವು ಪಟ್ಟು ಹೆಚ್ಚಿನ ವ್ಯಾಪಾರ ಶನಿವಾರ ಮಧ್ಯಾಹ್ನದೊಳಗೆ ನಡೆದಿದೆ. ಮುಂಗಡವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಮಾಲು ತಂದಿಟ್ಟಿದ್ದೆ
– ಗುಂಡು ಪಾಟೀಲ, ಉಪ್ಪಲದಿನ್ನಿಯ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT