ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಮಂಜೂರು

ಹಿರಿಯ ನಾಗರಿಕರಿಗೆ ದೊರೆಯಲಿದೆ ಊಟ, ಉಪಾಹಾರ
Last Updated 12 ಆಗಸ್ಟ್ 2021, 4:41 IST
ಅಕ್ಷರ ಗಾತ್ರ

ಬೀದರ್‌: ಸೇವೆಯಿಂದ ನಿವೃತ್ತಿ ಹೊಂದಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹಾಗೂ ಮನೆಯಲ್ಲೇ ಕುಳಿತು ಬೇಸರಗೊಂಡಿರುವ ವೃದ್ಧರಿಗೊಂದು ಸಂತಸದ ಸುದ್ದಿ. ವಯೋವೃದ್ಧರು ಹಾಗೂ ನಿವೃತ್ತರು ಖುಷಿಯಿಂದ ದಿನಗಳನ್ನು ಕಳೆಯಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಬೀದರ್‌ಗೆ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಮಂಜೂರು ಮಾಡಿದೆ.

ಕೇಂದ್ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ಕಾರ್ಯನಿರ್ವಹಿಸಲಿದೆ. ಪುಳಿಯೊಗರೆ, ಪಲಾವ್‌, ಅವಲಕ್ಕಿ, ಉಪ್ಪಿಟ್ಟು, ಚಿತ್ರಾನ್ನ, ಕೇಸರಿಬಾತ್‌, ಉಪ್ಪಿಟ್ಟು, ಟೀ ಹಾಗೂ ರಾಗಿ ಮಾಲ್ಟ್‌ ಇಲ್ಲಿ ದೊರೆಯಲಿದೆ. ಕೇಂದ್ರದ ಸಿಬ್ಬಂದಿ ಮೆನು ತಯಾರಿಸಿ ಫಲಕದಲ್ಲಿ ಹಾಕಲಿದ್ದಾರೆ. ನಗರದಲ್ಲಿರುವ 60 ವರ್ಷ ಮೇಲ್ಪಟ್ಟವರು ಇಲ್ಲಿಗೆ ಬರಬಹುದು. ವಯಸ್ಸನ್ನು ಬಿಟ್ಟರೆ, ಪ್ರವೇಶಕ್ಕೆ ಬೇರೆ ಮಾನದಂಡಗಳು ಇರುವುದಿಲ್ಲ.

ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಹಿರಿಯ ನಾಗರಿಕರು ಸದಸ್ಯತ್ವ ನೋಂದಣಿ ಮಾಡಿಕೊಂಡರೆ ಅಚ್ಚುಕಟ್ಟಾಗಿ ಸೌಲಭ್ಯ ಕೊಡಲು ಸಾಧ್ಯವಾಗಲಿದೆ. ಕೇಂದ್ರಕ್ಕೆ ಭೇಟಿ ಕೊಡುವ ಎಲ್ಲ ಹಿರಿಯ ನಾಗರಿಕರ ವಿಳಾಸ ಹಾಗೂ ಸಹಿಯನ್ನು ಪಡೆಯಲಾಗುವುದು. ಗ್ರಂಥಾಲಯದಲ್ಲಿರುವಂತೆ ಸಂದರ್ಶಕರ ಭೇಟಿ ಪುಸ್ತಕವನ್ನೂ ಇಡಲಾಗುವುದು ಎಂದು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಇಲಾಖೆಯ ಜಿಲ್ಲಾ ಅಧಿಕಾರಿ ಜಗದೀಶ ಕೆ. ತಿಳಿಸಿದರು.

ಮೊದಲ ಹಂತದಲ್ಲಿ ಗ್ರಂಥಾಲಯ ಪ್ರಾರಂಭಿಸಲಾಗುವುದು. ನಂತರ ಹಿರಿಯ ನಾಗರಿಕರು ಲವಲವಿಕೆಯಿಂದಿರಲು ಚೆಸ್‌, ಕೇರಂ ಬೋರ್ಡ್‌ ಆಟದ ಸೌಲಭ್ಯವನ್ನೂ ಕಲ್ಪಿಸಲಾಗುವುದು. ಅವರು ನಿತ್ಯ ಸ್ವಲ್ಪ ಹರಟೆ, ಆಟ - ಪಾಠಗಳಲ್ಲಿ ಮಿಂದು ಸಂಜೆಯ ವೇಳೆಗೆ ಮನೆಗೆ ಹೋಗುವ ವ್ಯವಸ್ಥೆ ಮಾಡಲಾಗುವುದು. ಕೇಂದ್ರ ಸರ್ಕಾರದಿಂದ ಗರಿಷ್ಠ ₹ 6 ಲಕ್ಷ ಅನುದಾನ ಬರಲಿದ್ದು, ಎನ್‌ಜಿಒ ನೇತೃತ್ವದಲ್ಲಿ ಕೇಂದ್ರ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.

ನೌಬಾದ್‌ನ ಚೌಳಿ ಗೇಟ್ ಸಮೀಪವಿರುವ ಸಾಮಾಜಿಕ ಸಂಸ್ಥೆಯಾದ ಹರಿ ಓಂ ಸಂಸ್ಥೆ ಹಗಲು ಯೋಗಕ್ಷೇಮ ಕೇಂದ್ರ ವನ್ನು ನಿರ್ವಹಿಸಲಿದೆ. ಸಂಸ್ಥೆಯ ಆವರಣದಲ್ಲಿ ಚಿಕ್ಕದಾದ ಉದ್ಯಾನವೂ ಇದೆ. ಹಿರಿಯರು ದಿನವೀಡಿ ಕಾಲ ಕಳೆಯಲು ಅನುಕೂಲವಾಗಲಿದೆ.

ಹಗಲು ಯೋಗಕ್ಷೇಮ ಕೇಂದ್ರ ಆರಂಭವಾದರೆ ಹಿರಿಯರಿಗೆ ಅನುಕೂಲವಾಗಲಿದೆ. ಮನೆಯಲ್ಲೇ ಕಳಿತು ಬೇಸರಗೊಳ್ಳುವ ಹರಿಯರು ಒಂದಿಷ್ಟು ಸಮಯವನ್ನು ಆನಂದದಿಂದ ಕಳೆಯಲು ಸಾಧ್ಯವಾಗಲಿದೆ. ಅವರ ಯೋಗ ಕ್ಷೇಮವನ್ನು ವಿಚಾರಿಸಿ ಕಷ್ಟಗಳಿಗೂ ಹೆಗಲು ಕೊಡಲು ಸಾಧ್ಯವಾಗಲಿದೆ ಎಂದು ಹಿರಿಯ ನಾಗರಿಕ ಶಾಂತಲಿಂಗ ಸಾವಳಗಿ ಹೇಳಿದರು.

‘ನಗರದಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಆರಂಭವಾಗಲಿರುವ ವಿಷಯ ತಿಳಿದು ಸಂತಸವಾಗಿದೆ. ಕೋವಿಡ್‌ ಕಾರಣ ಮನೆಯಲ್ಲೇ ಇದ್ದೇನೆ. ಕೋವಿಡ್‌ ಲಸಿಕೆಯನ್ನೂ ಪಡೆದಿದ್ದೇವೆ. ಕೇಂದ್ರದಲ್ಲಿ ಗ್ರಂಥಾಲಯವೂ ಇರುವುದರಿಂದ ಇನ್ನಷ್ಟು ಉತ್ತಮ ಕೃತಿಗಳನ್ನು ಓದಲು ಅನುಕೂಲವಾಗಲಿದೆ’ ಎಂದು ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ 75 ವರ್ಷದ ಎಂ.ಜಿ.ಗಂಗನಪಳ್ಳಿ ಸಂತಸ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ 50 ರಿಂದ 150 ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿಕೊಡಲು ಅವಕಾಶವಿದೆ,
– ಜಗದೀಶ ಕೆ., ಅಂಗವಿಕಲರ ಮತ್ತು ಹಿರಿಯ ನಾಗರಿಕರ ಇಲಾಖೆಯ ಜಿಲ್ಲಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT