ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ‘ಈದ್‌ ಉಲ್‌ ಅದಾ’ ಸರಳ ಆಚರಣೆ

ಮಸೀದಿಗಳಲ್ಲಿ ಕೋವಿಡ್‌ ನಿಯಮದಂತೆ ಪಾಳಿಯ ಪ್ರಕಾರ ತಂಡಗಳಲ್ಲಿ ಪ್ರಾರ್ಥನೆ; ಹಬ್ಬ ಆಚರಣೆಗೆ ಅಡ್ಡಿಯಾದ ಜಿಟಿಜಿಟಿ ಮಳೆ
Last Updated 22 ಜುಲೈ 2021, 3:34 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್‌ ಕಾರಣ ಜಿಲ್ಲೆಯಲ್ಲಿ ಮುಸ್ಲಿಮರು ಬುಧವಾರ ಈದ್‌ ಉಲ್‌ ಅದಾ (ಬಕ್ರೀದ್‌) ಸರಳವಾಗಿ ಆಚರಣೆ ಮಾಡಿದರು.

ಸಾಮಾನ್ಯವಾಗಿ ಕೇಂದ್ರ ಬಸ್‌ ನಿಲ್ದಾಣ ಸಮೀಪ ಹಾಗೂ ಚಿದ್ರಿ ರಸ್ತೆಯಲ್ಲಿ ರುವ ಈದ್ಗಾ ಮೈದಾನ ದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗು ತ್ತಿತ್ತು. ಎರಡೂ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಕೇಂದ್ರ ಬಸ್‌ ನಿಲ್ದಾಣ ಸಮೀಪದ ಈದ್ಗಾ ಮೈದಾನ ಬಳಿ ಜಿಲ್ಲಾ ಸಶಸ್ತ್ರಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ದಿಸೆಯಲ್ಲಿ ಮುಸ್ಲಿಮರು ನಗರದ ಮಸೀದಿಗಳಲ್ಲೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಒಂದು ಮಸೀದಿಯಲ್ಲಿ ಒಂದು ಬಾರಿಗೆ 50 ಮಂದಿ ಮಾತ್ರ ಪ್ರಾರ್ಥನೆ ಸಲ್ಲಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದ ಕಾರಣ ಎರಡು ಹಾಗೂ ಮೂರು ತಂಡಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಬೇಕಾಯಿತು.

ಓಲ್ಡ್‌ಸಿಟಿಯ ಚೌಬಾರಾ ಬಳಿಯ ಜಾಮಿಯಾ ಮಸೀದಿ ಆವರಣದಲ್ಲಿ ಪೆಂಡಾಲ್‌ ಹಾಕಲಾಗಿತ್ತು. ಮುಸ್ಲಿಮರು ತಂಡಗಳಲ್ಲಿ ಬಂದು ಪ್ರಾರ್ಥನೆ ಮಾಡಿ ದರು. ಮಸೀದಿಗಳಲ್ಲಿ ಧರ್ಮಗುರುಗಳು ಒಂದೇ ಬಾರಿ ಉಪದೇಶ ನೀಡಬೇಕು ಎನ್ನುವ ಸಂಪ್ರದಾಯ ಇದೆ. ಹೀಗಾಗಿ ಮದರಸಾಗಳಲ್ಲಿನ ವಿದ್ಯಾರ್ಥಿಗಳು ಹಬ್ಬದ ಸಂದೇಶ ನೀಡಿದರು.

ರಂಜಾನ್‌ನಲ್ಲಿ ಮುಸ್ಲಿಮರು ಒಂದು ತಿಂಗಳು ಉಪವಾಸ ಆಚರಿಸಿ ಕೊನೆ ದಿನ ಈದ್-ಉಲ್-ಫಿತ್ರ ಹಬ್ಬ ಆಚರಿಸುತ್ತಾರೆ. ಆದರೆ, ಬಕ್ರೀದ್‌ ಸಂದರ್ಭದಲ್ಲಿ ಬೆಳಿಗ್ಗೆಯಿಂದ ಉಪವಾಸ ಇದ್ದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭ ಕೋರಿದರು.

ಪ್ರವಾದಿಗಳಲ್ಲೊಬ್ಬರಾದ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲ್‌ನನ್ನು ಸೃಷ್ಟಿಕರ್ತನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಎಂದು ಕರೆಯಲಾಗುತ್ತದೆ. ಪ್ರವಾದಿ ಇಬ್ರಾಹಿಂ ಮಗನ ಅನುಮತಿ ಪಡೆದು ಬಲಿಕೊಡಲು ಮುಂದಾದಾಗ ದೇವರು ತಡೆಯುತ್ತಾನೆ. ಆಗ ಕುರಿ ಯನ್ನು ಬಲಿಕೊಟ್ಟು ದೇವರ ಪ್ರತಿ ಶ್ರದ್ಧೆ ವ್ಯಕ್ತಪಡಿಸುತ್ತಾರೆ. ಇದನ್ನೇ ಹಬ್ಬವಾಗಿ ಆಚರಿಸಿಕೊಂಡು ಬರಲಾಗಿದೆ.

ದೇವರ ಬಗ್ಗೆ ಇರುವ ಸತ್ಯ, ನಿಷ್ಠೆಯ ಸಂಕೇತವಾಗಿ ಮುಸ್ಲಿಮರು ಬಕ್ರೀದ್ ಆಚರಿಸುತ್ತಿದ್ದಾರೆ. ಶಕ್ತ ಮುಸ್ಲಿಮರು ಕುರಿಯನ್ನು ತ್ಯಾಗ-ಬಲಿದಾನದ ಪ್ರತೀಕ ವಾಗಿ ಬಲಿ ಕೊಡುತ್ತಾರೆ. ಅದರ ಪಾಲನ್ನು ಬಂಧುಗಳು ಹಾಗೂ ನೆರೆಹೊರೆಯವರಿಗೆ ಸಮಾನ ವಾಗಿ ಹಂಚುವ ಸಂಪ್ರದಾಯ ಮುಂದುವ ರಿಸಿಕೊಂಡು ಬಂದಿದ್ದಾರೆ ಎಂದು ಜಮಾ ಅತೆ ಇಸ್ಲಾಂ ಹಿಂದ್‌ನ ಮಹಮ್ಮದ್‌ ನಿಜಾಮೋದ್ದಿನ್‌ ಹೇಳುತ್ತಾರೆ.

ಬಕ್ರೀದ್‌ ಪ್ರಯುಕ್ತ ಜಿಲ್ಲೆಯ ಎಲ್ಲ ಮಸೀದಿಗಳಿಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಓಲ್ಡ್‌ಸಿಟಿಯಲ್ಲಿ ಅನೇಕ ಮುಖಂಡರು ಹಬ್ಬದ ಶುಭಾಶಯ ಕೋರಿ ಅಲ್ಲಲ್ಲಿ ಬ್ಯಾನರ್‌ ಹಾಗೂ ಪೋಸ್ಟರ್‌ ಅಳವಡಿಸಿದ್ದರು. ಜಿಟಿ ಜಿಟಿಯಾಗಿ ಸುರಿಯುತ್ತಿದ್ದ ಮಳೆ ಹಬ್ಬದ ಸಂಭ್ರಮಕ್ಕೆ ತೊಡಕು ಉಂಟು ಮಾಡಿತ್ತು.

‘ತ್ಯಾಗ ಬಲಿದಾನದ ಸಂಕೇತವೇ ಬಕ್ರೀದ್’

ಕಮಲನಗರ: ಬಕ್ರೀದ್ ಹಬ್ಬವನ್ನು ಕಮಲನಗರ, ಠಾಣಾಕುಶನೂರು, ದಾಬಕಾ, ಸಂಗಮ ಖತಗಾಂವ್ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ಸರಳ, ಶಾಂತಿಯುತವಾಗಿ ಆಚರಿಸಲಾಯಿತು. ಬಡಾವಣೆಯಲ್ಲಿರುವ ಮಸೀದಿಗಳಲ್ಲಿ ಸಮಾಜದವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ಬಳಿಕ ಅಬ್ದುಲ್‌ ಸಮದ್ ಮೌಲಾನಾ ಮಾತನಾಡಿ, ‘ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಜೀವನದಲ್ಲಿ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಎಲ್ಲರೂ ಪ್ರೀತಿ, ಒಗ್ಗಟ್ಟಿನಿಂದ ಜೀವನ ಸಾಗಿಸಬೇಕು’ ಎಂದು ಸಲಹೆ ನೀಡಿದರು.

ಹುಸೇನ್‍ಸಾಬ್ ಮನಿಯಾರ್ ಮಾತನಾಡಿ, ತ್ಯಾಗ ಬಲಿದಾನದ ಸಂಕೇತವೇ ಬಕ್ರೀದ್ ಆಚರಣೆಯಾಗಿದೆ ಎಂದು ವಿವರಿಸಿದರು.

ರಸೀದ್‍ಮಿಯ್ಯಾ ಮನಿಯಾರ್, ಮನಸೂರ್ ಬಾಗವಾನ, ಅಜರ ಭಾಗವಾನ, ಆರೀಫ್ ಪಟೇಲ್, ಮೋಹಸೀನ ಬಾಗವಾನ, ಮಾಜೀದ್‍ಸಾಬ್ ಪಠಾಣ, ನಾಜೀಮ ಬಾಗವಾನ, ನಜೀರ ಖುರೇಶಿ, ಸಲ್ಮಾನ ಖುರೇಶಿ, ಆಸೀಫ ಮನಿಯಾರ, ಅಬೇದ ಶೇಖ, ಎಂ.ಡಿ ಜಾಫರ್, ಆಸೀಫ ಪಟೇಲ್, ಶಫಿ ಬಾಗವಾನ, ಶೇರು ಬಾಗವಾನ, ಹುಸೇನ್ ಸಾಬ್ ಖುರೇಶಿ, ಮೈನೋದ್ದೀನ್ ಖುರೇಶಿ, ಬಾಶಾ ಬಾಗವಾನ, ರಸೂಲ ಪಠಾಣ, ಚಾಂದ ಶೇಖ, ಶಮ್ಶೂ ಶೇಖ, ಬಾಬಾ ಬಾಗವಾನ ಇದ್ದರು.

ಮನೆಗಳಲ್ಲೇ ಪ್ರಾರ್ಥನೆ

ಖಟಕಚಿಂಚೋಳಿ: ಬಕ್ರೀದ್ ಹಬ್ಬವನ್ನು ಖಟಕಚಿಂಚೋಳಿ, ಸಿಂದಬಂದಗಿ ಸೇರಿ ವಿವಿಧ ಗ್ರಾಮ ಗಳಲ್ಲಿ ಸರಳವಾಗಿ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಹಿರಿಯರು, ಮಕ್ಕಳು ಮಸೀದಿಗಳಿಗೆ ಹೋಗಲಿಲ್ಲ. ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು.

‘ಬಕ್ರೀದ್ ಹಬ್ಬದ ಸಂಭ್ರಮ ಹಿಂದಿನ ವರ್ಷದಂತೆ ಇರಲಿಲ್ಲ. ಆದರೆ, ಸಂಪ್ರದಾಯಗಳು ಎಂದಿನಂತೆ ನೆರವೇರಿದವು’ ಎಂದು ರಫಿಕ್ ಚಿಟಗುಪ್ಪೆಕರ್ ತಿಳಿಸಿದರು.

ಕುಟುಂಬದವರ ಜೊತೆಗೆ ಆಚರಣೆ

ಹುಮನಾಬಾದ್: ನಿರಂತರ ಸುರಿಯುತ್ತಿರುವ ಮಳೆ ಹಾಗೂ ಕೋವಿಡ್ ನಿಮಿತ್ತ ಬಕ್ರೀದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.

ಕೋವಿಡ್ ನಿಯಮಗಳಂತೆ ಮಸೀದಿ ಹಾಗೂ ದರ್ಗಾಗಳಲ್ಲಿ ಪಾಳಿಯ ಪ್ರಕಾರ ಪ್ರಾರ್ಥನೆ ಸಲ್ಲಿಸಿರುವುದು ಪಟ್ಟಣದಲ್ಲಿ ಕಂಡುಬಂತು. ಅನೇಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಗಳಲ್ಲಿ ಪಾರ್ಥನೆ ಮಾಡಿದರು.

ಶ್ರದ್ಧಾಭಕ್ತಿಯ ಬಕ್ರೀದ್ ಆಚರಣೆ

ಚಿಟಗುಪ್ಪ: ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲಿಂ ಸಮಾಜದವರು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಪಟ್ಟಣದ ಕರಿಮುಲ್ಲಾ ಶಾ ದರ್ಗಾ ಸಮೀಪದ ಮಸೀದಿಯಲ್ಲಿ ಕೋವಿಡ್‌ ನಿಯಮ ಪಾಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಬೇಮಳಖೇಡಾ, ಮನ್ನಾಎಖ್ಖೇಳಿ, ತಾಳಮಡಗಿ, ಮಂಗಲಗಿ, ಚಾಂಗಲೇರಾ ಇತರ ಗ್ರಾಮಗಳಲ್ಲಿ ಬೆಳಿಗ್ಗೆಯಿಂದಲೇ ಶ್ವೇತವಸ್ತ್ರಧಾರಿಗಳಾಗಿ ತಮ್ಮ ಓಣಿಗಳಲ್ಲಿಯ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಮಾಡಿದರು. ಮಕ್ಕಳಿಗೆ ಸಿಹಿ ನೀಡಿ, ಹಬ್ಬದ ಸಂಭ್ರಮ ಹಂಚಿಕೊಂಡರು. ಬಡವರಿಗೆ ಮತ್ತು ನಿರ್ಗತಿಕರಿಗೆ ನೆರವು ನೀಡಿದರು.

ತಾಲ್ಲೂಕಿನೆಲ್ಲೆಡೆ ಸಮಾಜದವರ ಮನೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಮನೆ ಮಂದಿ ಎಲ್ಲರೂ ಹೊಸ ಬಟ್ಟೆ ಧರಿಸಿರುವುದು ಕಂಡುಬಂತು. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನೆಂಟರಿಷ್ಟರು, ಆತ್ಮೀಯರ ಮನೆಗೆ ತೆರಳಿ ಹಬ್ಬದ ಶುಭಾಶಯ ತಿಳಿಸಿದರು.

ತಾಲ್ಲೂಕಿನೆಲ್ಲೆಡೆ ಹಬ್ಬದ ಆಚರಣೆಗೆ ಶಾಂತಿ ಸುವ್ಯವಸ್ಥೆ ಕೈಗೊಂಡಿದ್ದಕ್ಕೆ ಸಿಪಿಐ ಅಮೂಲ ಕಾಳೆ ಅವರನ್ನು ಮುಸ್ಲಿಂ ಸಮುದಾಯದ ಗಣ್ಯರಾದ ಸೈಯದ್‌ ರಾಶಿದ್‌ ಪಟೇಲ್‌, ಅಸ್ಲಾಂಮಿಯ್ಯ ಇತರರು ಶಾಲು ಹೊದಿಸಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT