ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ಭಾರತದಲ್ಲಿ ಭಾಷಾ ಬಾಂಧವ್ಯ ಬೆಸೆದ ಶತಮಾನದ ಶಾಲೆಗಳು

Last Updated 14 ಆಗಸ್ಟ್ 2022, 13:28 IST
ಅಕ್ಷರ ಗಾತ್ರ

ಬೀದರ್‌: ಭಾರತ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದರೆ, ಗಡಿಯಲ್ಲಿ ಅಕ್ಷರ ಜ್ಞಾನ ಬಿತ್ತಿ, ಭಾಷಾ ಬಾಂಧವ್ಯ ಬೆಸೆದು, ಸಹಿಷ್ಣುತೆ ಹಾಗೂ ನೆಲದ ಸಂಸ್ಕೃತಿಯನ್ನು ಗಟ್ಟಿಗೊಳಿಸಿರುವ ಬೀದರ್‌ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳು ಶತಮಾನೋತ್ಸವದ ಸಂಭ್ರಮದಲ್ಲಿವೆ.

ನಿಜಾಮರ ಆಡಳಿತದಲ್ಲೇ ಅಸ್ತಿತ್ವಕ್ಕೆ ಬಂದ ಇಂದಿನ ಕಮಲನಗರ ತಾಲ್ಲೂಕಿನ ಹೊಕ್ರಾಣಾ, ಬೆಳಕುಣಿ, ಹೊಳಸಮುದ್ರದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬೀದರ್‌ನ ಸರ್ಕಾರಿ ಪ್ರೌಢ ಶಾಲೆ ಇಂದಿಗೂ ಗತಕಾಲದ ವೈಭವ ಮೆರೆಯುತ್ತಿವೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಶತಮಾನದ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನ ಬಿತ್ತಿ, ಶಾಂತಿ, ಸೌಹಾರ್ದದಿಂದ ಬಾಳುವಂತೆ ಮಾಡಿದ ಕಾರ್ಯದ ಶ್ರೇಯಸ್ಸಿಗೆ ಪಾತ್ರವಾಗಿವೆ.


ಸರ್ಕಾರಿ ಬಾಲಕರ ಪ್ರೌಢ ಶಾಲೆ

ಬೀದರ್‌ನ ಓಲ್ಡ್‌ಸಿಟಿಯಲ್ಲಿ ಹೈದರಾಬಾದ್ ನಿಜಾಮನ ಆಡಳಿತದಲ್ಲಿ ರಾಣಿವಾಸಕ್ಕೆ ಅತಿಥಿಗೃಹ ಇಂದಿಗೂ ಸುಸ್ಥಿತಿಯಲ್ಲಿದೆ. ಇಲ್ಲಿ ಈಗ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ನಡೆಯುತ್ತಿದೆ. ಇದರ ಪಕ್ಕದಲ್ಲಿಯೇ ಇರುವ ಘೋಡಾ ಖಾನಾದಲ್ಲಿ ಸರ್ಕಾರಿ ಬಾಲಕರ ಪ್ರೌಢ ಶಾಲೆ ನಡೆಯುತ್ತಿದೆ.

ಘೋಡಾ ಖಾನಾದಲ್ಲಿ 1916ರಲ್ಲಿ ಮೊದಲು ಉರ್ದು ಶಾಲೆ ಆರಂಭವಾಯಿತು. ನಂತರ ಇದೇ ಶಾಲೆಯಲ್ಲಿ ಮರಾಠಿ ಹಾಗೂ ಕನ್ನಡ ಶಾಲೆಗೂ ಅನುಮತಿ ನೀಡಲಾಯಿತು. ಪ್ರಸ್ತುತ ಇಂಗ್ಲಿಷ್‌ ಮಾಧ್ಯಮವನ್ನೂ ಆರಂಭಿಸಲಾಗಿದೆ. ಇದೇ ಶಾಲಾ ಆವರಣದಲ್ಲಿ ನಾಲ್ಕು ಭಾಷಾ ಮಾಧ್ಯಮದ ಶಾಲೆಗಳು ನಡೆಯುತ್ತಿವೆ.

ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದ ಕಾರಣ ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕ ಇತ್ತು. 8ನೇ ತರಗತಿಗೆ ಕೆ1, ಕೆ2, ಕೆ3, ಕೆ4, ಕೆ5 ಹೀಗೆ ಐದು ವಿಭಾಗಗಳು ಇದ್ದವು. ಈ ಶಾಲೆಯ ಅಧೀನದಲ್ಲಿ ಜನವಾಡ ರಸ್ತೆಯಲ್ಲಿರುವ ಕಟ್ಟಡದಲ್ಲೂ ತರಗತಿಗಳು ನಡೆಯುತ್ತಿದ್ದವು. ಸ್ವಾತಂತ್ರ್ಯದ ನಂತರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಡಿಯಲ್ಲಿ ಪ್ರೌಢ ಶಾಲೆ ನಡೆಯ ತೊಡಗಿತ್ತು. 2000ರಲ್ಲಿ ಪದವಿ ಪೂರ್ಣ ಶಿಕ್ಷಣ ಇಲಾಖೆಯಿಂದ ಮತ್ತೆ ಪ್ರತ್ಯೇಕಗೊಳಿಸಲಾಯಿತು. ಪ್ರಸ್ತುತ ಶಾಲೆಯಲ್ಲಿ 73 ಬಾಲಕಿಯರು ಹಾಗೂ 121 ಬಾಲಕರು ಸೇರಿ ಒಟ್ಟು 194 ವಿದ್ಯಾರ್ಥಿಗಳು ಓದುತ್ತಿದ್ದಾರೆ.

‘ಮಾಜಿ ಸಚಿವರಾದ ಭೀಮಣ್ಣ ಖಂಡ್ರೆ, ವೀರಶೆಟ್ಟಿ ಕುಶನೂರು, ತೆಲಂಗಾಣದ ಜಹೀರಾಬಾದ್‌ ಮಾಜಿ ಶಾಸಕ ಬಾಗಾ ರೆಡ್ಡಿ, ಬೀದರ್‌ನ ಮಾಜಿ ಶಾಸಕರಾದ ಮಹಮ್ಮದ್‌ ಲೈಕೋದ್ದಿನ್, ಮೊಹಸಿನ್‌ ಕಮಲ್, ರಮೇಶ ಪಾಂಡೆ ಇದೇ ಶಾಲೆಯಲ್ಲಿ ಓದಿದ್ದಾರೆ’ ಎಂದು ಮುಖ್ಯಶಿಕ್ಷಕಿ ಜಗದೇವಿ ಭೋಸಲೆ ಹೇಳುತ್ತಾರೆ.

‘ಶಾಲೆ ಶತಮಾನ ಪೂರೈಸಿರುವ ಕಾರಣ ಶಿಕ್ಷಣ ಇಲಾಖೆ ಕಟ್ಟಡದ ದುರಸ್ತಿ ಕಾರ್ಯ ಆರಂಭಿಸಿದೆ. ಕಿಟಕಿಗಳಿಗೆ ಗ್ರಿಲ್‌ ಅಳವಡಿಸುವ ಹಾಗೂ ಹಳೆಯ ಗೋಡೆಗೆ ಪ್ಲಾಸ್ಟರ್‌ ಮಾಡುವ ಕಾರ್ಯ ಭರದಿಂದ ಸಾಗಿದೆ’ ಎಂದು ತಿಳಿಸುತ್ತಾರೆ.



ಜಿಲ್ಲೆಯ ನಾಲ್ಕು ಶತಮಾನದ ಶಾಲೆಗಳಿಗೆ ₹ 58 ಲಕ್ಷ ಅನುದಾನ

ಬೀದರ್‌: 2021–2022ರಲ್ಲಿ ಶತಮಾನ ಪೂರೈಸಿದ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಜುಲೈನಿಂದ ಜಿಲ್ಲೆಯ ನಾಲ್ಕು ಶಾಲೆಗಳ ದುರಸ್ತಿ ಕಾರ್ಯ ಆರಂಭಿಸಿದೆ.

‘ಕಮಲನಗರ ತಾಲ್ಲೂಕಿನ ಹೊಕ್ರಾಣ ಹಾಗೂ ಹೊಳಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ ₹ 15 ಲಕ್ಷ ಅನುದಾನ ಒದಗಿಸಿದೆ. ಬೆಳಕುಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹ 16 ಲಕ್ಷ ಹಾಗೂ ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಸರ್ಕಾರಿ ಪ್ರೌಢ (ಬಾಲಕರ) ಶಾಲೆಗೆ ₹ 12 ಲಕ್ಷ ಬಿಡಗಡೆ ಮಾಡಿದೆ. ಪಂಚಾಯತ್‌ ರಾಜ್ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ದುರಸ್ತಿ ಕಾರ್ಯ ಆರಂಭವಾಗಿದೆ’ ಎಂದು ಡಿಡಿಪಿಐ ಗಣಪತಿ ಬಾರಾಟಕ್ಕೆ ಹೇಳುತ್ತಾರೆ.


‘ಜಿಲ್ಲೆಯ ಕಮಲನಗರ ತಾಲ್ಲೂಕಿನ ಮೂರು ಸರ್ಕಾರಿ ಪ್ರಾಥಮಿಕ ಶಾಲೆ, ಬೀದರ್‌ನ ಸರ್ಕಾರಿ ಪ್ರೌಢ ಶಾಲೆ ಹಾಗೂ ನಾರ್ಮಾ ಫೆಂಡ್ರಿಚ್‌ ಮಿಷನರಿ ಶಾಲೆಗಳು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರವೂ ಉತ್ತಮ ಕಾರ್ಯನಿರ್ವಹಿಸಿವೆ. ಸರ್ಕಾರಿ ದಾಖಲೆಗಳೇ ಇದಕ್ಕೆ ನಿದರ್ಶನವಾಗಿವೆ’ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಟಿ.ಆರ್‌.ದೊಡ್ಡೆ ವಿವರಿಸುತ್ತಾರೆ.

* * *

ಕನ್ನಡ ಹೋಗಿ ಮರಾಠಿಯಾದ ಶತಮಾನದ ಶಾಲೆ


ಮನ್ಮಥ ಸ್ವಾಮಿ

ಔರಾದ್: ಶತಮಾನ ಪೂರೈಸಿದ ಶಾಲೆಗಳ ಪೈಕಿ ಕಮಲನಗರ ತಾಲ್ಲೂಕಿನ ಹೊಕ್ರಾಣ ಸರ್ಕಾರಿ ಪ್ರಾಥಮಿಕ ಶಾಲೆಯೂ ಒಂದು. ಮಹಾರಾಷ್ಟ್ರ ಗಡಿ ಅಂಚಿನಲ್ಲಿರುವ ಈ ಶಾಲೆ ಶತಮಾನ ಪೂರೈಸಿರುವುದು ಹೆಮ್ಮೆಯ ಸಂಗತಿಯೂ ಆಗಿದೆ. 1920ರಲ್ಲೇ ಇಲ್ಲಿ ಕನ್ನಡ ಮಾಧ್ಯಮ ಶಾಲೆ ತೆರೆಯಲಾಗಿದೆ.

‘ಬಹಳ ವರ್ಷಗಳ ಕಾಲ ಇಲ್ಲಿ ನಾಲ್ಕನೇ ತರಗತಿ ವರೆಗೆ ಕನ್ನಡ ಮಾಧ್ಯಮ ಶಾಲೆ ಇತ್ತು. ಆದರೆ ಮುಂದಿನ ತರಗತಿ ಓದಲು ವ್ಯವಸ್ಥೆ ಇಲ್ಲದ ಕಾರಣ ಇದು ಮರಾಠಿ ಮಾಧ್ಯಮವಾಗಿ ಪರಿವರ್ತನೆಯಾಗಿದೆ’ ಎಂದು ಹೊಕ್ರಾಣದ 85 ವರ್ಷದ ಹಣಮಂತಪ್ಪ ಮಳಗೆ ಹೇಳುತ್ತಾರೆ.
‘ನನ್ನ ಮಗ ಮಹಾದೇವ ಮಳಗೆ ಹಾಗೂ ಆತನ ಗೆಳೆಯರೆಲ್ಲರೂ 4ನೇ ತರಗತಿ ವರೆಗೆ ಇದೇ ಶಾಲೆಯಲ್ಲಿ ಕನ್ನಡ ಓದಿದ್ದಾರೆ. ಮುಂದೆ ಇಲ್ಲಿ ಓದಲು ಅವಕಾಶವಿಲ್ಲದ ಕಾರಣ ಮಹಾರಾಷ್ಟ್ರದ ಉದಗಿರಗೆ ಹೋಗಿ ಓದು ಮುಂದುವರೆಸಿದ್ದಾರೆ. ಈಗ ಅವರೆಲ್ಲ ವೈದ್ಯ, ಎಂಜಿನಿಯರ್ ಸೇರಿದಂತೆ ಅನೇಕ ದೊಡ್ಡ ಹುದ್ದೆಯಲ್ಲಿದ್ದಾರೆ’ ಎಂದು ಅವರು ವಿವರಿಸುತ್ತಾರೆ.
‘1920ರಲ್ಲೇ ಹೊಕ್ರಾಣದಲ್ಲಿ ಶಾಲೆ ಆರಂಭವಾಗಿರುವ ಕುರಿತು ದಾಖಲೆ ಇದೆ. ಆದರೆ ಅದು ಮೋಡಿ ಭಾಷೆಯಲ್ಲಿದೆ. ಆರಂಭದ 10-15 ವರ್ಷ ಖಾಸಗಿ ಮನೆ ಹಾಗೂ ಮಂದಿರದಲ್ಲಿ ಶಾಲೆ ನಡೆಸಲಾಗಿದೆ. 1970ರ ದಶಕದಲ್ಲಿ ಸರ್ಕಾರ ಹೊಸ ಕಟ್ಟಡ ಕಟ್ಟಿಸಿತು. ನಾಲ್ಕು ವರ್ಷದ ಹಿಂದೆ ಮತ್ತೆ ಹೊಸ ಕೊಠಡಿಗಳನ್ನು ನಿರ್ಮಿಸಿದೆ’ ಎಂದು ಮುಖ್ಯ ಶಿಕ್ಷಕ ರಾಜಕುಮಾರ ಹೇಳುತ್ತಾರೆ.
‘ಮೊದಲಿನಿಂದಲೂ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಇಲ್ಲ. 1ರಿಂದ 7ನೇ ತರಗತಿ ವರೆಗೆ ಈಗಲೂ 320 ವಿದ್ಯಾರ್ಥಿಗಳಿದ್ದಾರೆ. ಆದರೆ ಹಲವು ವರ್ಷಗಳಿಂದ ಕನ್ನಡ ಶಿಕ್ಷಕ ಸೇರಿದಂತೆ ಮೂರು ಶಿಕ್ಷಕರ ಹುದ್ದೆಗಳು ಖಾಲಿ ಇವೆ’ ಎನ್ನುತ್ತಾರೆ.

* * * *

117 ವರ್ಷ ದಾಟಿದ ಮೂರು ಶಾಲೆಗಳು

ಮನೋಜಕುಮಾರ ಹಿರೇಮಠ

ಕಮಲನಗರ: ನಿಜಾಮರ ಆಡಳಿತದ ಮೀರ್ ಉಸ್ಮಾನ್‌ ಅಲಿ ಹಾಗೂ ಉಸ್ಮಾನ್ ಪಾಶಾನ ಕಾಲದಲ್ಲಿ ಉದಯಗೊಂಡ ಕಮಲನಗರ ತಾಲ್ಲೂಕಿನ ಬೆಳಕುಣಿ(ಎಂ), ಹೊಳಸಮುದ್ರ ಗ್ರಾಮದ ನಮ್ಮೂರು ಸರ್ಕಾರಿ ಮರಾಠಿ, ಕನ್ನಡ ಮಾದರಿ ಶಾಲೆ 117 ವರ್ಷ ದಾಟಿದ ಸಂಭ್ರಮದಲ್ಲಿವೆ.
‘1905ರಲ್ಲಿ ಪ್ರಾರಂಭವಾದ ಈ ಶಾಲೆಗೆ ಅಧಿಕೃತ ಮುದ್ರೆ ಬಿದ್ದಿದ್ದು 1919ರಲ್ಲಿ. ಉರ್ದು ಭಾಷೆಯಲ್ಲಿ ಇರುವ ದಾಖಲೆಗಳು ಶಾಲೆಯ ಇತಿಹಾಸ ಸಾರುತ್ತಿವೆ. ಹರಿನಾಥ ಮಹಾರಾಜ ಮಠದಲ್ಲಿ ಮೊದಲ ತರಗತಿ ಆರಂಭವಾಗಿತ್ತು ಎಂದು ನಮ್ಮ ಅಜ್ಜ ಹೇಳುತ್ತಿದ್ದರು. ನನ್ನ ತಂದೆ ಇದೇ ಶಾಲೆಯಲ್ಲಿ ಕಲಿತಿದ್ದಾರೆ. ನಾನೂ ಇದೇ ಶಾಲೆಯಲ್ಲಿ ಉರ್ದು, ಮರಾಠಿ ಕಲಿತ್ತಿದ್ದೇನೆ’ ಎಂದು 90 ವರ್ಷದ ಶಿವಾಜಿ ಯಾದವರಾವ್ ಕಾಳೆ ಹೇಳುತ್ತಾರೆ.

ತರಗತಿಗಳು ಗುಡಿ ಗುಂಡಾರಗಳಲ್ಲಿ ನಡೆಯುತ್ತಿದ್ದವು. ಒಂದು ಗುಡಿಯಲ್ಲಿ 40 ಮಕ್ಕಳು ಇರುತ್ತಿದ್ದರು. ಹೆಚ್ಚುವರಿ ಮಕ್ಕಳಿಗೆ ಗ್ರಾಮದ ಬಸವಣ್ಣನ ಗುಡಿ, ಮಹಾದೇವ ಮಂದಿರ, ಹನುಮಾನ ದೇವಾಲಯದ ಆವರಣದಲ್ಲಿ ಪಾಠ ಮಾಡಲಾಗುತ್ತಿತ್ತು. ಮುಖ್ಯ ಶಿಕ್ಷಕರೇ ಉರ್ದುವಿನಲ್ಲಿ ಶಾಲಾ ದಾಖಲಾತಿ ಬರೆಯುತ್ತಿದ್ದರು. 1964ರ ವರೆಗೆ ಕನ್ನಡವೇ ಇರಲಿಲ್ಲ. ಉರ್ದು ಹಾಗೂ ಮರಾಠಿ ಪ್ರಭಾವ ಅಧಿಕ ಇತ್ತು. ಹೊಕ್ರಾಣದಲ್ಲಿ 1959ರಲ್ಲಿ ಅಂಚೆ ಕಚೇರಿ ತೆರೆದುಕೊಂಡ ನಂತರ ಬಸಪ್ಪ ಎನ್ನುವವರನ್ನು ಕನ್ನಡ ಶಿಕ್ಷಕರನ್ನಾಗಿ ನಿಯೋಜಿಸಲಾಗಿತ್ತು. ಕಾಲರಾ ಕಾಣಿಸಿಕೊಂಡ ನಂತರ ಮಕ್ಕಳ ಸಂಖ್ಯೆ ಕಡಿಮೆ ಆಯಿತು. ಉರ್ದು ಶಾಲೆಯನ್ನು ಕಮಲನಗರಕ್ಕೆ ಸ್ಥಳಾಂತರಿಸಲಾಯಿತು ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ.

‘ಮಹಾರಾಷ್ಟ್ರದ ಉದಗಿರ ತಾಲ್ಲೂಕಿನಲ್ಲಿ ನಮ್ಮ ಗ್ರಾಮ ಇತ್ತು. ಈಗಿನ ಕಮಲನಗರ ತಾಲ್ಲೂಕಿನ ಶಾಲೆಗಳು ಸ್ವಾತಂತ್ರ ಪೂರ್ವ ಬಸವಕಲ್ಯಾಣ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುತ್ತಿದ್ದವು. ದಾಖಲೆಗಳು ಉದಗಿರಿನಲ್ಲಿ ಇರುತ್ತಿದ್ದವು. 7ನೇ ತರಗತಿ ಅಹಮ್ಮದಪುರ ಹಾಗೂ 10ನೇ ತರಗತಿ ಪರೀಕ್ಷೆಗೆ ಹೈದರಾಬಾದ್‌ಗೆ ತೆರಳಬೇಕಾದ ಸ್ಥಿತಿ ಇತ್ತು. ಹೀಗಾಗಿ ಸಿರಿವಂತರು ಮಾತ್ರ 10ನೇ ತರಗತಿ ವರೆಗೆ ಓದಲು ಸಾಧ್ಯವಾಯಿತು’ ಎಂದು ವಿವರಿಸುತ್ತಾರೆ.

ಅನಿಲಕುಮಾರ ಕುಲಕರ್ಣಿ ಆರ್.ಎಸ್.ಎಸ್ ನಾಯಕರಾಗಿ ಹಾಗೂ ಪ್ರಕಾಶ ಸೂರ್ಯವಂಶಿ ಲೋಕಾಯುಕ್ತದಲ್ಲಿ ಹಿರಿಯ ಹುದ್ದೆಗೆ ನೇಮಕಗೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಶಿಕ್ಷಣ, ವೈದ್ಯಕೀಯ, ಕೃಷಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ಇದೀಗ ಹೊಳಸಮುದ್ರ ಶಾಲೆಯಲ್ಲಿ 188 ಹಾಗೂ ಡೋಣಗಾಂವ್(ಎಂ)ದಲ್ಲಿ 269 ಮಕ್ಕಳು ಓದುತ್ತಿದ್ದಾರೆ.

ಮಾಣಿಕರಾವ್ ಪಾಟೀಲ ಸಚಿವರಾಗಿದ್ದ ಸಂದರ್ಭದಲ್ಲಿ 1970ರ ಆಗಸ್ಟ್ 25ರಂದು ಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ಶಾಲೆ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT