ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಮುಖ್ಯಮಂತ್ರಿ, ಗೃಹ ಸಚಿವರಿಗೆ ಚಾಂಬೋಳ ಪಿಡಿಒ ದೂರು

ಹಿರಿಯ ಅಧಿಕಾರಿಯಿಂದ ತನಿಖೆ ನಡೆಸಲು ಬೊಮ್ಮಾಯಿ ಆದೇಶ
Last Updated 27 ನವೆಂಬರ್ 2020, 13:58 IST
ಅಕ್ಷರ ಗಾತ್ರ

ಬೀದರ್: ‘ಭ್ರಷ್ಟಾಚಾರಕ್ಕೆ ಸಹಕರಿಸುವಂತೆ ನನ್ನ ಮೇಲೆ ಒತ್ತಡ ಹಾಕುತ್ತಿರುವ ಕೆಲ ಅಧಿಕಾರಿಗಳು ಗೂಂಡಾಗಳನ್ನು ಬಿಟ್ಟು ಹಲ್ಲೆ ನಡೆಸಿದರೂ ಜಿಲ್ಲೆಯ ಪೊಲೀಸರು ಕ್ರಮಕೈಗೊಳ್ಳದ ಕಾರಣ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದೇನೆ’ ಎಂದು ಬೀದರ್ ತಾಲ್ಲೂಕಿನ ಚಾಂಬೋಳದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಲಾ ಕಾಂಬಳೆ ತಿಳಿಸಿದ್ದಾರೆ.

‘ಮನೆ ಬಾಗಿಲಿಗೆ ತೂಗು ಹಾಕಿದ ಹಾಜರಿಪುಸ್ತಕದ ಮೇಲೆ ಪೊಲೀಸರು ಸಹಿ ಮಾಡಿ ಹೋದರೆ ರಕ್ಷಣೆ ಕೊಟ್ಟಂತೆ ಆಗುವುದಿಲ್ಲ. ರಕ್ಷಣೆಗೆ ಗನ್‌ಮ್ಯಾನ್‌ ಒದಗಿಸುವಂತೆ ಮನವಿ ಮಾಡಿದ್ದೇನೆ. ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಅವರಿಗೂ ಮನವಿ ಪತ್ರ ಕೊಟ್ಟಿದ್ದೇನೆ. ನನ್ನ ಮನವಿಯನ್ನು ಉಲ್ಲೇಖಿಸಿ ಅವರು ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೂ ಪೊಲೀಸರ ನನ್ನ ನೆರವಿಗೆ ಬರುತ್ತಿಲ್ಲ’ ಎಂದು ದೂರಿದ್ದಾರೆ.

‘ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಕ್ಕೆ ಪೊಲೀಸರು ಠಾಣೆಗೆ ಕರೆದೊಯ್ದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ ಗೂಂಡಾಗಳ ಮೂಲಕ ನನ್ನ ಕೊಲೆಗೆ ಯತ್ನಿಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಪರಿಚಯಸ್ಥರ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದೇನೆ. ನಾಲ್ಕು ದಿನಗಳ ಹಿಂದೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ರಕ್ಷಣೆ ಒದಗಿಸುವಂತೆ ಮನವಿ ಮಾಡಿಕೊಂಡಿದ್ದೇನೆ. ಗೃಹ ಸಚಿವರು ಉನ್ನತ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.

‘ಪೊಲೀಸ್‌ ಠಾಣೆಯಲ್ಲೇ ನನ್ನ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇನೆ. ಇಬ್ಬರು ಅಧಿಕಾರಿಗಳಿಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ. ಇದೀಗ ಅಧಿಕಾರಿಗಳು ಸೇರಿಕೊಂಡು ನನ್ನನ್ನು ಬೇರೆ ಇಲಾಖೆಗೆ ವರ್ಗಾಯಿಸುವ ಪ್ರಯತ್ನ ನಡೆಸಿದ್ದಾರೆ. ಆದೇಶ ಪತ್ರವನ್ನೂ ಕೊಟ್ಟಿದ್ದಾರೆ. ಆದರೆ, ನಾನು ಮಾತೃ ಇಲಾಖೆಯನ್ನು ಬಿಟ್ಟು ಹೋಗಲು ಒಪ್ಪಿಗೆ ಕೊಟ್ಟಿಲ್ಲ’ ಎಂದಿದ್ದಾರೆ.

‘ಹಿರಿಯ ಅಧಿಕಾರಿಗಳಾದ ಡಿ.ಕೆ.ರವಿ, ಅನುರಾಗ್ ತಿವಾರಿ ಹಾಗೂ ಬಳ್ಳಾರಿಯ ಮಹಿಳಾ ಪಿಡಿಒ ಸಾವುಗಳು ಕೊಲೆಯೇ ಆಗಿವೆ. ಪ್ರಾಮಾಣಿಕರು ಭ್ರಷ್ಟ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಸರ್ಕಾರವೇ ನೇರವಾಗಿ ನನ್ನ ಕೊಲೆ ಮಾಡಲಿ, ಇಲ್ಲವೆ ಭ್ರಷ್ಟರಿಗೆ ಶಿಕ್ಷೆ ಕೊಡಲಿ ಎಂದು ಮನವಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

ರಕ್ಷಣೆ ಒದಗಿಸಿದ್ದೇವೆ: ನಾಗೇಶ

‘ಚಾಂಬೋಳ ಪಿಡಿಒ ಮಂಗಲಾ ಕಾಂಬಳೆ ಪೊಲೀಸರ ಮೇಲೆ ಮಾಡಿರುವ ಆರೋಪದಲ್ಲಿ ಸತ್ಯಾಂಶ ಇಲ್ಲ. ಗುರುನಗರದಲ್ಲಿರುವ ಅವರ ಮನೆಗೆ ಪೊಲೀಸ್‌ ವಿಸಿಟಿಂಗ್ ಪಾಯಿಂಟ್‌ ಮಾಡಲಾಗಿದೆ. ಪೊಲೀಸ್‌ ಸಿಬ್ಬಂದಿ ನಿತ್ಯ ಅವರ ಮನೆಗೆ ಭೇಟಿ ಕೊಟ್ಟು ಪರಿಶೀಲಿಸುತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

‘ಯಾರೇ ದೂರು ಕೊಟ್ಟರೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಂಗಲಾ ನೀಡಿರುವ ದೂರನ್ನು ದಾಖಲಿಸಿಕೊಂಡು ನ್ಯೂಟೌನ್‌ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಪೊಲೀಸ್‌ ಠಾಣೆ, ಪೊಲೀಸ್‌ ಠಾಣಾ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಬೈಲ್‌ ಸಂಖ್ಯೆಯನ್ನು ಅವರಿಗೆ ಕೊಡಲಾಗಿದೆ. ಯಾವುದಾದರೂ ಸಮಸ್ಯೆ ಎದುರಾದ ತಕ್ಷಣ ಮೊಬೈಲ್‌ಗೆ ಕರೆ ಮಾಡುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯೆ ನೀಡದ ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಅವರ ಮೊಬೈಲ್‌ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿಲಿಲ್ಲ. ವಾಟ್ಸ್‌ಆ್ಯಪ್‌ ಸಂದೇಶಕ್ಕೆ ಅವರು ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT