ಮಂಗಳವಾರ, ಮೇ 17, 2022
29 °C
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಉದ್ಘಾಟನೆ

ಚಾಂಬೋಳ ಈಗ ‘ಸ್ಮಾರ್ಟ್ ಗ್ರಾಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್ ತಾಲ್ಲೂಕಿನ ಚಾಂಬೋಳ ಈಗ ಜಿಲ್ಲೆಯ ಮೊದಲ ಸ್ಮಾರ್ಟ್ ಗ್ರಾಮ ಆಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಗ್ರಾಮವನ್ನು ಉದ್ಘಾಟಿಸಿದರು.

ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದ್ದಲ್ಲಿ ಗ್ರಾಮಗಳು ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಅವರು ಹೇಳಿದರು.

ಗ್ರಾಮವನ್ನು ಬಹಿರ್ದೆಸೆ ಮುಕ್ತಗೊಳಿಸಲು ಸಮುದಾಯ ಶೌಚಾಲಯ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸೌರಶಕ್ತಿ ದೀಪಗಳನ್ನು ಅಳವಡಿಸಿ ಗ್ರಾಮವನ್ನು ಕತ್ತಲೆ ಮುಕ್ತಗೊಳಿಸಲಾಗಿದೆ. ಪಂಚಾಯಿತಿ ಕಾರ್ಯಗಳಿಗೂ ಸೌರಶಕ್ತಿ ದೀಪಗಳನ್ನು ಬಳಸುವ ಮೂಲಕ ವಿದ್ಯುತ್ ಮೇಲಿನ ಅವಲಂಬನೆ ತಪ್ಪಿಸಲಾಗಿದೆ. ವಿದ್ಯುತ್ ಬಿಲ್ ಸಾಲದಿಂದಲೂ ಮುಕ್ತಗೊಳಿಸಲಾಗಿದೆ ಎಂದು ಪಿಡಿಒ ಮಂಗಲಾ ಕಾಂಬಳೆ ತಿಳಿಸಿದರು.

ಪಂಚಾಯಿತಿ ಕಚೇರಿಯಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ವಿವಿಧ ಕಾರ್ಯಗಳ ನೇರ ಪ್ರಸಾರ ಆಯೋಜಿಸಿ ಪಾರದರ್ಶಕ ಆಡಳಿತ ಕೊಡಲಾಗುತ್ತಿದೆ. ಸಾರ್ವಜನಿಕರ ಕುಂದು ಕೊರತೆ ನಿವಾರಿಸಲಾಗಿದೆ ಎಂದು ತಿಳಿಸಿದರು.

ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಲಾಗಿದೆ. ಗ್ರಾಮದಲ್ಲಿ ರಸ್ತೆ, ಚರಂಡಿ, ಸ್ವಯಂ ಚಾಲಿತ ಶುದ್ಧ ಕುಡಿಯುವ ನೀರು ವ್ಯವಸ್ಥೆ ಒದಗಿಸಲಾಗಿದೆ ಎಂದು ಹೇಳಿದರು.

ಮಕ್ಕಳು ಹಾಗೂ ಯುವಕರ ಜ್ಞಾನಾರ್ಜನೆಗೆ ಗ್ರಂಥಾಲಯ ಆರಂಭಿಸಲಾಗಿದೆ. ಶಾಲಾ ಕಟ್ಟಡ ದುರಸ್ತಿಪಡಿಸಲಾಗಿದೆ. ಆಟದ ಮೈದಾನ ಅಭಿವೃದ್ಧಿಪಡಿಸಲಾಗಿದೆ. ಮಕ್ಕಳ ಸುರಕ್ಷತೆಗಾಗಿ ಮಕ್ಕಳ ಕಲ್ಯಾಣ ಸಮಿತಿ ರಚಿಸಲಾಗಿದೆ. ಬಾಲ್ಯ ವಿವಾಹ ತಡೆಗಟ್ಟಲಾಗಿದೆ ಎಂದು ವಿವರಿಸಿದರು.

ಗ್ರಾಮೀಣ ಪ್ರದೇಶದ ಜನರಿಗೆ ನಗರದ ಹೈಟೆಕ್ ಸೌಲಭ್ಯಗಳು ದೊರಕು ವಂತೆ ಮಾಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ, ಡಾ. ಗೌತಮ ಅರಳಿ ಇದ್ದರು.

‘ಕತ್ತಲೆ ಮುಕ್ತ ಗ್ರಾಮ’
ಚಾಂಬೋಳ ಗ್ರಾಮವನ್ನು ಗುಡಿಸಲು, ಕತ್ತಲೆ, ತ್ಯಾಜ್ಯ ಹಾಗೂ ವ್ಯಾಜ್ಯಮುಕ್ತಗೊಳಿಸಲಾಗಿದೆ. ನೈರ್ಮಲ್ಯ, ಸುರಕ್ಷತೆ, ಪಾರದರ್ಶಕತೆ, ಶಿಕ್ಷಣ, ಕೃಷಿ, ಮಹಿಳೆಯರು, ಮಕ್ಕಳು, ಅಂಗವಿಕಲರ ಅಭಿವೃದ್ಧಿ, ಉತ್ತಮ ಆರೋಗ್ಯ ಸೇವೆ ಮೂಲಕ ಸ್ಮಾರ್ಟ್ ಗ್ರಾಮ ಗುರಿ ತಲುಪಲಾಗಿದೆ ಎಂದು ಪಿಡಿಒ ಮಂಗಲಾ ಕಾಂಬಳೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.