ಶುಕ್ರವಾರ, ಫೆಬ್ರವರಿ 21, 2020
19 °C
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ

ಬಸವಸೇವಾ ಪ್ರತಿಷ್ಠಾನ ದಾಸೋಹ ಮಂಟಪಕ್ಕೆ ₹1 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಬಸವಸೇವಾ ಪ್ರತಿಷ್ಠಾನದ ದಾಸೋಹ ಮಂಟಪದ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ₹1 ಕೋಟಿ ಅನುದಾನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ’ ಮಾಡಿದರು.

ಇಲ್ಲಿಯ ಬಸವಗಿರಿಯಲ್ಲಿ ಶುಕ್ರವಾರ ವಚನ ವಿಜಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು,
ಬಸವಸೇವಾ ಪ್ರತಿಷ್ಠಾನದ ಬಸವತತ್ವ ಪ್ರಸಾರ ಮತ್ತು ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಬೀದರ್ ಶರಣರ ನಾಡು. ಇಲ್ಲಿ ನಡೆದ ಸಾಮಾಜಿಕ ಕ್ರಾಂತಿ ವಿಶ್ವದಲ್ಲೇ ಮಾದರಿಯಾಗಿದೆ. ವಚನ ವಿಜಯೋತ್ಸವದ ಮೂಲಕ ಶರಣರ ವಿಚಾರಧಾರೆ ಜನಮನಕ್ಕೆ ಮುಟ್ಟಿಸುತ್ತಿರುವುದು ಪವಿತ್ರ ಕಾರ್ಯವಾಗಿದೆ. ನೈತಿಕ ಮೌಲ್ಯ ಬೆಳೆಸಿಕೊಳ್ಳಲು, ಆದರ್ಶ ಕುಟುಂಬ ಮತ್ತು ಸಮಾಜ ನಿರ್ಮಾಣಕ್ಕೆ ವಚನಗಳು ಸಹಕಾರಿಯಾಗಿವೆ. ಆ ದಿಸೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ನಿತ್ಯ ವಚನಗಳು ಓದುವಂತೆ ಪ್ರೇರೆಪಿಸಬೇಕು’ ಎಂದು ಹೇಳಿದರು.

‘ ಶರಣರ ನಾಡು ಅಭಿವೃದ್ಧಿಪಡಿಸಿ ಇಲ್ಲಿಯ ಆದರ್ಶ ವಿಚಾರ ಜಗತ್ತಿಗೆ ಮುಟ್ಟಬೇಕು. ಈ ನಿಟ್ಟಿನಲ್ಲಿ ₹600 ಕೋಟಿ ವೆಚ್ಚದಲ್ಲಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸದ್ಯ ₹100 ಕೋಟಿ ಬಿಡುಗಡೆ ಮಾಡಿ ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

‘ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಬಹು ವರ್ಷಗಳ ಬೇಡಿಕೆಯಾದ ನಾಗರಿಕ ವಿಮಾನಯಾನ ಇಂದು ಆರಂಭಗೊಂಡಿದೆ. ಈ ಕಾರ್ಯಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ವಿಮಾನಯಾನ ಆರಂಭದಿಂದ ಇಲ್ಲಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ. ಬಂಡವಾಳ ಹರಿದು ಬಂದು ಯುವಕರಿಗೆ ಉದ್ಯೋಗಾವಕಾಶ ಹೆಚ್ಚಲಿವೆ’ ಎಂದು ತಿಳಿಸಿದರು.

ಬಸವಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ,‘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಭಾಗದ ಮೇಲೆ ತುಂಬಾ ಅಭಿಮಾನ ಇದೆ. ಅವರು ಮುಖ್ಯಮಂತ್ರಿಯಾಗುತ್ತಲೇ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರು. ಅನುಭವ ಮಂಟಪಕ್ಕೆ ₹100 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಬೀದರ್ ರಂಗಮಂದಿರಕ್ಕೆ ಚನ್ನಬಸವ ಪಟ್ಟದ್ದೇವರ ಹೆಸರು ನಾಮಕರಣ ಮಾಡಿದ್ದು ಎಲ್ಲರಿಗೂ ಸಂತಸ ತಂದಿದೆ’ ಎಂದು ಹೇಳಿದರು.

ಮುಂಡರಗಿಯ ತೋಂಟಾದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಕ್ಕ ಗಂಗಾಂಬಿಕೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ,ಶಾಸಕರಾದ ರಹೀಂಖಾನ್, ಬಿ. ನಾರಾಯಣರಾವ್, ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್,ಮುಖಂಡರಾದ ಡಿ.ಕೆ.ಸಿದ್ರಾಮ, ಬಾಬುವಾಲಿ, ಶೈಲೇಂದ್ರ ಬೆಲ್ದಾಳೆ, ಗುರುನಾಥ ಕೊಳ್ಳೂರ್, ಧನರಾಜ ತಾಳಂಪಳ್ಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು