ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯಕ್ಕೊಳಗಾದ ಮಕ್ಕಳ ಗುರುತು ಬಹಿರಂಗ ಸಲ್ಲ

ಮಕ್ಕಳ ಹಕ್ಕುಗಳ ತರಬೇತಿ ಕಾರ್ಯಕ್ರಮ
Last Updated 30 ಅಕ್ಟೋಬರ್ 2018, 12:51 IST
ಅಕ್ಷರ ಗಾತ್ರ

ಬೀದರ್‌: ‘ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ಗುರುತನ್ನು ಎಲ್ಲಿಯೂ ಬಹಿರಂಗಪಡಿಸಬಾರದು. ಅವರಿಗೆ ಎಲ್ಲ ರೀತಿಯಿಂದ ರಕ್ಷಣೆ ಕೊಡುವುದು ಕಾನೂನಿನ ಉದ್ದೇಶವಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್. ರಾಘವೇಂದ್ರ ಹೇಳಿದರು.

ನಗರದ ಸಪ್ನಾ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಮಂಗಳವಾರ ಬೆಂಗಳೂರಿನ ಚೈಲ್ಡ್ ರೈಟ್ ಟ್ರಸ್ಟ್ ಹಾಗೂ ಸಮೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕುರಿತ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಕಷ್ಟದಲ್ಲಿರುವ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಿದ್ಧವಿದೆ’ ಎಂದು ತಿಳಿಸಿದರು.

‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೂಡ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳ ಕುರಿತು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರತಿಯೊಬ್ಬರು ಇದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಬೆಂಗಳೂರಿನ ಚೈಲ್ಡ್ ರೈಟ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ ಎನ್.ವಿ. ಮಾತನಾಡಿ, ‘1989 ನವೆಂಬರ್ 20 ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆ ಆಗಿದೆ. ಇದಕ್ಕೆ ಭಾರತವು 1992 ರ ಡಿಸೆಂಬರ್ 11 ರಂದು ಸಹಿ ಹಾಕಿದೆ. ಇದರಲ್ಲಿ 54 ಪರಿಚ್ಛೇದಗಳು ಇವೆ’ ಎಂದು ತಿಳಿಸಿದರು.

‘ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಹೆಚ್ಚಿನ ಪ್ರಚಾರ ದೊರಯಲಿಲ್ಲ. 2013ರಲ್ಲಿ ರಾಷ್ಟ್ರೀಯ ಮಕ್ಕಳ ನೀತಿ ರೂಪಿಸಿದ ನಂತರ ಮಕ್ಕಳ ಹಕ್ಕುಗಳ ಒಡಂಬಡಿಕೆ ಚರ್ಚೆಗೆ ಬಂದಿತು’ ಎಂದು ಹೇಳಿದರು.

‘ಸಮಗ್ರ ಮಕ್ಕಳ ರಕ್ಷಣೆ ಯೋಜನೆ ಅಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ, ಬಾಲ ಮಂದಿರ, ಮಕ್ಕಳ ಸಹಾಯವಾಣಿ ಕಾರ್ಯನಿರ್ವಹಿಸುತ್ತಿವೆ. ಇವು ಮಕ್ಕಳ ರಕ್ಷಣೆ, ಪೋಷಣೆ ಮತ್ತು ಪುನರ್ ವಸತಿ ಕಾರ್ಯದಲ್ಲಿ ತೊಡಗಿಸಿಕೊಂಡಿವೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ‘ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗಳೇ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಅವರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ’ ಎಂದು ತಿಳಿಸಿದರು.

ಚೈಲ್ಡ್ ರೈಟ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಇದ್ದರು. ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುನೀತ್ ಸಾಳೆ ಸ್ವಾಗತಿಸಿದರು. ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪೂರೆ ನಿರೂಪಿಸಿದರು. ಅಂಬಾದಾಸ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT