ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಭ್ರಮಿಸಿದ ಮಕ್ಕಳು
Last Updated 26 ಡಿಸೆಂಬರ್ 2019, 9:48 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ವಿವಿಧೆಡೆ ಬುಧವಾರ ಸಂಭ್ರಮ ಸಡಗರದೊಂದಿಗೆ ಕ್ರಿಸ್‌ಮಸ್ ಆಚರಿಸಲಾಯಿತು.

ನಗರದ ಮಂಗಲಪೇಟೆಯ ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌, ನಾವದಗೇರಿಯ ಇಮ್ಯಾನುವೆಲ್‌ ಮೆಥೋಡಿಸ್ಟ್‌ ಚರ್ಚ್‌, ಕುಂಬಾರವಾಡ ರಸ್ತೆಯಲ್ಲಿರುವ ಚಿಯೋನ್‌ ಮೆಥೋಡಿಸ್ಟ್ ಚರ್ಚ್, ರೋಸ್‌ ಮೆಮೊರಿಯಲ್‌ ಚರ್ಚ್‌, ಶಹಾಪುರ ಗೇಟ್‌ನ ಸೇಂಟ್‌ ಜೋಸೆಫ್‌ ಚರ್ಚ್, ವಿದ್ಯಾನಗರದ ಸೇಂಟ್‌ ಪೌಲ್‌ ಮೆಥೋಡಿಸ್ಟ್ ಚರ್ಚ್, ಮಿರ್ಜಾಪುರದ ಗುಹೆಯಲ್ಲಿರುವ ಚರ್ಚ್‌, ಆಣದೂರಿನ ಸೇಂಟ್‌ ಪೌಲ್ ಮೆಥೋಡಿಸ್ಟ್‌ ಚರ್ಚ್‌ಗಳಲ್ಲಿ ಕ್ರೈಸ್ತರು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌ ಆವರಣದಲ್ಲಿ ಭಕ್ತರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಶಾಮಿಯಾನ ಹಾಕಿ, ಕುರ್ಚಿಗಳನ್ನು ಇಡಲಾಗಿತ್ತು. ಚರ್ಚ್‌ನಲ್ಲಿ ಜನ ಕಿಕ್ಕಿರಿದು ಸೇರಿದ ಕಾರಣ ಬಹಳಷ್ಟು ಮಂದಿ ಆವರಣದಲ್ಲಿ ಕುಳಿತು ಸುವಾರ್ತೆ ಆಲಿಸಿದರು.

ಬೆಂಗಳೂರಿನ ಬಿಷಪ್‌ ಎನ್‌.ಎಲ್‌.ಕರ್ಕರೆ ಅವರು ಕ್ರಿಸ್‌ಮಸ್‌ ದಿನದ ಮೇಣದ ಬತ್ತಿಯನ್ನು ಬೆಳಗಿಸಿ ಭಕ್ತರಿಗೆ ಯೇಸುವಿನ ಸಂದೇಶ ನೀಡಿದರು. ವಿಶೇಷ ಪ್ರಾರ್ಥನೆಯ ಬಳಿಕ ಕ್ರೈಸ್ತರು ಪರಸ್ಪರ ಶುಭಾಶಯ ಕೋರಿದರು.

ಮೆಥೋಡಿಸ್ಟ್‌ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಎಂ.ಪಿ.ಜೈಪಾಲ್‌ ಪ್ರವಚನ ನೀಡಿದರು. ಸಹ ಜಿಲ್ಲಾ ಮೇಲ್ವಿಚಾರಕ ದೇವದಾನ, ಕಮಲ ಕರ್ಕರೆ, ಸ್ಟಾಲಿನ್‌ ಡೇವಿಡ್‌, ಡಿಸೋಜಾ ಥಾಮಸ್‌ ಪ್ರಾರ್ಥನೆ ನೆರವೇರಿಸಿದರು.

ಆನಂದ ಭಾಸ್ಕರ್ ನೇತೃತ್ವದಲ್ಲಿ ಶಾರದಾ ಎಂ.ಪಿ. ಜೈಪಾಲ್, ರೂಪಾ ಮಚ್ಚೆ, ಕಾವ್ಯಾನಂದಿನಿ ಶಿಂಧೆ, ಅನಿತಾ ಡಿಸೋಜಾ, ವಿದ್ಯಾವತಿ, ಜನಿತಾ ಕ್ರಿಸ್ಟಿನಾ, ಸುರೇಖಾ ಫಿಲೋಮನ್, ಕ್ಯಾಥರಿನ್, ಜಯಮಣಿ, ಹನ್ನಮ್ಮ ರಾಜು, ಅಶ್ವಿನಿ ಅಶೋಕ, ದೀಪಕ ಸಾಮ್ಯುವೆಲ್, ಡಾರತಿ, ಯಶವಂತ ಪ್ರಾರ್ಥನಾ ಗೀತೆಗಳನ್ನು ಹಾಡಿದರು.

‘ಕ್ರಿಸ್‌ಮಸ್‌, ಮನುಕುಲದ ಕಲ್ಯಾಣಕ್ಕಾಗಿ ಯೇಸು ಅವತರಿಸಿದ ದಿನ. ಯೇಸು ಅವರು ಶಾಂತಿ ಹಾಗೂ ಸಹಬಾಳ್ವೆಯ ಸಂದೇಶ ನೀಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ಸಾಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದು ಬಿಷಪ್‌ ಕರ್ಕರೆ ಹೇಳಿದರು.

‘ಯೇಸು ಸನ್ಮಾರ್ಗ ತೋರಿದ್ದಾರೆ. ಕೆಲವರು ನೈತಿಕ ಮಾರ್ಗದಲ್ಲಿ ನಡೆಯುವುದನ್ನು ಮರೆತಿದ್ದಾರೆ. ಮುಂದೆ ಕೆಟ್ಟ ದಿನಗಳನ್ನು ಅನುಭವಿಸಲಿದ್ದಾರೆ’ ಎಂದು ಎಚ್ಚರಿಸಿದರು.

‘ದೇವರ ಸಂದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬಾಳುವಂತೆ ಮಾಡಬೇಕು’ ಎಂದರು.

ಶಾಸಕರಾದ ಬಂಡೆಪ್ಪ ಕಾಶೆಂಪುರ, ರಹೀಂ ಖಾನ್‌, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಮಾಜಿ ಸಂಸದ ನರಸಿಂಗರಾವ್‌ ಸೂರ್ಯವಂಶಿ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ನಗರಸಭೆ ಸದಸ್ಯೆ ಗ್ರೇಸ್ ಪದ್ಮಿನಿ, ಸುಂದರರಾಜ್ ಮೊದಲಾದವರು ಇದ್ದರು.

ಚರ್ಚ್‌ ಆವರಣಗಳಲ್ಲಿ ಗೋದಲಿ, ಯೇಸು, ಮೇರಿ, ಜೋಸೆಫ್ ಹಾಗೂ ಕುರಿಗಳ ಪ್ರತಿಕೃತಿಗಳನ್ನು ಇಡಲಾಗಿತ್ತು.

ಕ್ರಿಸ್‌ಮಸ್‌ ಪ್ರಯುಕ್ತ ಕ್ರೀಡಾಕೂಟ ನಡೆಯಿತು. ಚಿತ್ರಕಲೆ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT