ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಬಾರದ್ದಕ್ಕೆ ಸಚಿವರಿಂದ ನಗರ ಪ್ರದಕ್ಷಿಣೆ

ಕಳಪೆ ಕಾಮಗಾರಿ ತನಿಖೆಗೆ ರಚಿಸಿದ ಸಮಿತಿಯ ಪತ್ತೆ ಇಲ್ಲ
Last Updated 19 ಅಕ್ಟೋಬರ್ 2019, 14:32 IST
ಅಕ್ಷರ ಗಾತ್ರ

ಬೀದರ್‌: ಹದಿನೈದು ದಿನಗಳ ಹಿಂದೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಹಾಗೂ ಒಳಚರಂಡಿಯ ಕಳಪೆ ಕಾಮಗಾರಿಯ ತನಿಖೆ ನಡೆಸಿ 10 ದಿನಗಳ ಒಳಗೆ ವರದಿ ಒಪ್ಪಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರೂ ಅಧಿಕಾರಿಗಳು ಮೌನ ವಹಿಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಶನಿವಾರ ನಗರ ಪ್ರದಕ್ಷಿಣೆ ನಡೆಸಿ ಕಾಮಗಾರಿಯನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಅವರನ್ನು ತಮ್ಮ ಕಚೇರಿಗೆ ಕರೆಯಿಸಿ ವಿವರಣೆ ಕೇಳಿದ ಸಚಿವರು ‘ವರದಿ ಯಾವಾಗ ಒಪ್ಪಿಸುತ್ತೀರಿ’ ಎಂದು ಪ್ರಶ್ನಿಸಿದರು. ‘ಸಮಿತಿಗೆ ನನ್ನನ್ನು ನೇಮಕ ಮಾಡಿದರೂ ಜಿಲ್ಲಾಧಿಕಾರಿಯಿಂದ ಯಾವುದೇ ಲಿಖಿತ ಪತ್ರ ಬಂದಿಲ್ಲ’ ಎಂದು ಗಂಗ್ವಾರ್‌ ಅಸಹಾಯಕತೆ ವ್ಯಕ್ತಪಡಿಸಿದರು.

‘ಮೊದಲ ಸಭೆಯಲ್ಲೇ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಆದರೆ 15 ದಿನಗಳು ಕಳೆದರೂ ಕ್ರಮಕ್ಕೆ ಮುಂದಾಗದಿರುವುದು ಅಚ್ಚರಿ ಮೂಡಿಸಿದೆ. ಹಾಗೆ ಬಿಟ್ಟರೆ ಅವ್ಯವಹಾರಗಳು ಮುಂದುವರಿಯಲಿವೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸುವೆ’ ಎಂದು ಸಚಿವ ಚವಾಣ್‌ ತಿಳಿಸಿದರು.

ನಂತರ ನಗರದ ಕೆಲ ಕಚೇರಿ ಹಾಗೂ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ತಮ್ಮ ಕಚೇರಿಯಿಂದ ನೇರವಾಗಿ ನಗರಸಭೆಯ ಕಚೇರಿಗೆ ಬಂದು ಅಧಿಕಾರಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಜನನ, ಮರಣ, ಆಸ್ತಿದಾಖಲೆ ಕೊಡಲು ನಗರಸಭೆ ಸಿಬ್ಬಂದಿ ಹಣ ಪಡೆಯುತ್ತಿರುವ ದೂರುಗಳು ಬಂದವು. ‘ಯಾವುದೇ ಸಿಬ್ಬಂದಿ ಸಾರ್ವಜನಿಕರಿಂದ ಹಣ ಪಡೆದ ದೂರು ಬಂದರೆ ತಕ್ಷಣ ಅಮಾನತುಗೊಳಿಸಬೇಕು’ ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿದರು.

ನಗರ ನೈರ್ಮಲ್ಯ ವಿಭಾಗಕ್ಕೆ ತೆರಳುವಾಗ ಕಟ್ಟಡದ ಆವರಣದಲ್ಲಿ ಕಸ ಸಂಗ್ರಹಿಸುವ ತೊಟ್ಟಿಗಳನ್ನು ಕೂಡುಹಾಕಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂದಿರಾ ಕ್ಯಾಂಟಿನ್‌ನ ಬಚ್ಚಲು ಮನೆಯ ನೀರು ನಗರಸಭೆಯ ಆವರಣಕ್ಕೆ ಹರಿದು ಬಂದರೂ ನಗರಸಭೆ ಅಧಿಕಾರಿಗಳು ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ₹ 80 ಲಕ್ಷ ವೆಚ್ಚದಲ್ಲಿ ಖರೀದಿಸಿದ ಕಸಗುಡಿಸುವ ವಾಹನ ಬಳಸದೆ ಆವರಣದಲ್ಲಿ ನಿಲುಗಡೆ ಮಾಡದಿರುವುದನ್ನು ವೀಕ್ಷಿಸಿದರು. ವಾಹನದ ಮೇಲೆ ‘ಸ್ವಚ್ಛ ಭಾರತ’ ಎನ್ನುವ ಬರಹ ಬರೆದಿರುವುದನ್ನು ನೋಡಿ, ‘ಇಲ್ಲಿ ಸ್ಟಿಕ್ಕರ್‌ ಅಂಟಿಸಿದರೆ ಸಾಲದು, ನಗರಸಭೆಯ ವಾಹನಗಳನ್ನು ಸ್ವಚ್ಛವಾಗಿಡಲು ಕ್ರಮಕೈಗೊಳ್ಳಬೇಕು’ ಎಂದು ಆಯುಕ್ತರಿಗೆ ಸೂಚನೆ ನೀಡಿದರು.

ನಗರಸಭೆ ಕಚೇರಿ ಮುಂದಿನ ಬಸ್‌ ನಿಲ್ದಾಣಕ್ಕೆ ಬಂದು ಅಲ್ಲಿನ ಗಟಾರು ತುಂಬಿಕೊಂಡಿರುವುದನ್ನು ಪರಿಶೀಲಿಸಿ, ‘ಮೂರು ದಿನಗಳಲ್ಲಿ ಗಟಾರ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಲ್ಲಿಂದ ವಿದ್ಯಾನಗರ ಕಾಲೊನಿಗೆ ಹೋಗಿ ಕೆಸರು ತುಂಬಿದ ರಸ್ತೆಯನ್ನು ಕಂಡು ಬೇಸರ ವ್ಯಕ್ತಪಡಿಸಿದರು. ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಕರೆದು ವರ್ಷ ಕಳೆದರೂ ಗುತ್ತಿಗೆದಾರರು ಕಾಮಗಾರಿ ಆರಂಭಿಸಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭಿಸಬೇಕಾಗಿದೆ ಎಂದು ವಿದ್ಯಾನಗರದ ನಿವಾಸಿಗಳು ದೂರಿದರು.

‘ರಸ್ತೆ ಕಾಮಗಾರಿಯ ಆರಂಭಿಸದ ಗುತ್ತಿಗೆದಾರರ ಟೆಂಡರ್‌ ರದ್ದುಪಡಿಸಬೇಕು’ ಎಂದು ನಗರಸಭೆ ಆಯುಕ್ತರಿಗೆ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT