ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಕೈ ಕೈ ಮಿಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು

ಎಐಸಿಸಿ ಸದಸ್ಯ ಆನಂದ ದೇವಪ್ಪ ಅವರಿಗೆ ಗಾಯ
Last Updated 3 ಫೆಬ್ರುವರಿ 2023, 1:33 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದಲ್ಲಿ ಫೆಬ್ರುವರಿ 3ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ‘ಪ್ರಜಾಧ್ವನಿ’ ಯಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಗುರುವಾರ ಕ್ಷುಲ್ಲಕ ಕಾರಣಕ್ಕಾಗಿ ಕಾಂಗ್ರೆಸ್‌ ಟೆಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಹೊಡೆದಾಡಿದ್ದಾರೆ. ಘಟನೆಯಲ್ಲಿ ಎಐಸಿಸಿ ಸದಸ್ಯ ಆನಂದ ದೇವಪ್ಪಗೆ ಗಾಯವಾಗಿದೆ.

ಯಾತ್ರೆಯ ಸಂಯೋಜಕ ಪ್ರಕಾಶ ರಾಠೋಡ ನೇತೃತ್ವದಲ್ಲಿ ನಗರದ ಅತಿಥಿಗೃಹದಲ್ಲಿ ಸಭೆ ನಡೆದಿತ್ತು. ಬಸವಕಲ್ಯಾಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಹಾಗೂ ಇತರ ಮುಖಂಡರು ಸಭೆಯಲ್ಲಿ ಹಾಜರಿದ್ದರು. ಕಾರ್ಯಕ್ರಮದ ಲೆಕ್ಕಪತ್ರದ ವಿಷಯ ಪ್ರಸ್ತಾಪವಾದಾಗ

ಎಐಸಿಸಿ ಸದಸ್ಯ ಆನಂದ ದೇವಪ್ಪ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ವಿಜಯಸಿಂಗ್‌ ಬೆಂಬಲಿಗರ ಮಧ್ಯೆ ಜಗಳ ನಡೆಯಿತು.

ಪ್ರಕಾಶ ರಾಠೋಡ ಎದುರಲ್ಲೇ ಪರಿಸ್ಥಿತಿ ಕೈಮೀರಿ ಹೋಗಿ ಎರಡೂ ಕಡೆಯವರು ಹೊಡೆದಾಡಿದರು. ಈ ಸಂದರ್ಭದಲ್ಲಿ ಆನಂದ ದೇವಪ್ಪ ಅವರಿಗೆ ಪೆಟ್ಟಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕ್ಷುಲ್ಲಕ ಕಾರಣಕ್ಕೆ ಕೆಲವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ನಂತರ ಪೊಲೀಸರಿಗೆ ದೂರು ಕೊಡುತ್ತೇನೆ’ ಎಂದು ಆನಂದ ದೇವಪ್ಪ ತಿಳಿಸಿದರು. ಸ್ಥಳದಲ್ಲಿದ್ದ ಕಾಂಗ್ರೆಸ್ ಹಿರಿಯ ಮುಖಂಡರು ಸಂಧಾನ ನಡೆಸಿದ್ದರಿಂದ ಎರಡೂ ಗುಂಪಿನವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲು ಮುಂದೆ ಬರಲಿಲ್ಲ.

ಒಮ್ಮತದ ಆಯ್ಕೆಗೆ ಕಾಂಗ್ರೆಸ್‌ ಕಸರತ್ತು
ಬೆಂಗಳೂರು
: ‘ಗೆಲುವೊಂದೇ ಮಾನದಂಡ’ ಎಂಬ ಸೂತ್ರದಡಿ ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ನ ಚುನಾವಣಾ ಸಮಿತಿ ಸದಸ್ಯರು, ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ದೇವನಹಳ್ಳಿಯ ಕ್ಲಾರ್ಕ್ ಎಕ್ಷಾರ್ಟಿಕ ಹೋಟೆಲ್‌ನಲ್ಲಿ ಗುರುವಾರ ಸುಮಾರು ಮೂರು ತಾಸು ಸಮಾಲೋಚನೆ ನಡೆಸಿದರು.‌

ಗುರುವಾರದ ಸಭೆಗೂ ಮೊದಲೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಜೊತೆ ಬುಧವಾರ ತಡರಾತ್ರಿವರೆಗೆ ಸಮಾಲೋಚನೆ ನಡೆಸಿದ್ದ ಸುರ್ಜೇವಾಲಾ, ಚುನಾವಣಾ ಸಮಿತಿ ಸಭೆಯ ಬಳಿಕ ಮತ್ತೊಮ್ಮೆ ಇಬ್ಬರು ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಆ ಮೂಲಕ, ಇಬ್ಬರ ಜೊತೆ ಚರ್ಚಿಸಿ, ಸಹಮತ ಮೂಡಿಸಿ ಸಂಭವನೀಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಕಸರತ್ತು ನಡೆಸಿದರು.

‘ಪಕ್ಷದ ಹಾಲಿ ಶಾಸಕರು ಪ್ರತಿನಿಧಿಸುವ ಕ್ಷೇತ್ರವೂ ಸೇರಿ 120ರಿಂದ 130 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳನ್ನು ಪಟ್ಟಿಯನ್ನು ಅಂತಿಮಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಪಕ್ಷ ಮಾಜಿ ಶಾಸಕರ ಕ್ಷೇತ್ರಗಳು ಮತ್ತು ಕಗ್ಗಂಟಾಗಿರುವ ಕೆಲವು ಕ್ಷೇತ್ರಗಳಲ್ಲಿ ಏನು ಮಾಡಬೇಕೆಂಬ ಬಗ್ಗೆಯೂ ಗಂಭೀರ ಮಾತುಕತೆ ನಡೆಯಿತು’ ಎಂದು ಕಾಂಗ್ರೆಸ್‌ ಮೂಲಗಳು
ತಿಳಿಸಿವೆ.

‘ಸಮಿತಿಯ ಎಲ್ಲ ಸದಸ್ಯರಿಂದ ಟಿಕೆಟ್‌ ಆಕಾಂಕ್ಷಿಗಳ ಕುರಿತು ಸುರ್ಜೇವಾಲಾ ಅಭಿಪ್ರಾಯ ಪಡೆದರು. ಇನ್ನೂ ಆಕಾಂಕ್ಷಿಗಳಿದ್ದರೆ ಚೀಟಿಯಲ್ಲಿ ಅಭಿಪ್ರಾಯ ತಿಳಿಸುವಂತೆ ಕೂಡಾ ಸಲಹೆ ನೀಡಿದರು. ಇದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಎಲ್ಲವೂ ಮೊದಲೇ ತೀರ್ಮಾನ ಆದಂತಿದೆ. ಚೀಟಿ ಕೊಡುವುದಾದರೆ ಸಭೆಗೆ ಯಾಕೆ ಬರಬೇಕಿತ್ತು ಎಂದು ಕೆಲವರು ಆಕ್ಷೇಪಿಸಿದರು’ ಎಂದೂ ಮೂಲಗಳು ಹೇಳಿವೆ.

ಹಾಲಿ ಶಾಸಕರಿಗೆ ಟಿಕೆಟ್‌: ಸಭೆಯ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ನಮ್ಮ ಪಕ್ಷದ ಎಲ್ಲ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಸಹಕಾರ ನೀಡದಿದ್ದರೂ ನಮ್ಮ ಶಾಸಕರು ಜನರ ಮಧ್ಯೆ ನಿಂತು ಕೆಲಸ ಮಾಡಿದ್ದಾರೆ. ಹೀಗಾಗಿ, ಬಹುತೇಕ ಎಲ್ಲ
ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದೆ’ ಎಂದರು.

ಪಟ್ಟಿ ಪ್ರಕಟ ವಿಳಂಬ?
ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೆ. 10ರ ಒಳಗೆ ಘೋಷಿಸಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ಆದಷ್ಟು ಬೇಗ ಪಟ್ಟಿ ಘೋಷಿಸಬೇಕೆಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ, ‌ಕೇಂದ್ರ ಚುನಾವಣಾ ಸಮಿತಿ, ಸ್ಕ್ರೀನಿಂಗ್ ಸಮಿತಿ ಇನ್ನಷ್ಟೆ ರಚನೆ
ಆಗಬೇಕಿದೆ. ಈ ಸಮಿತಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಹೀಗಾಗಿ, ಈ ತಿಂಗಳ ಕೊನೆಯಲ್ಲಿ ಪಟ್ಟಿ ಪ್ರಕಟ ಆಗಬಹುದು ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.

‘ನಾನು ಚುನಾವಣಾ ಸಮಿತಿಯಲ್ಲಿದ್ದೇನೆ. ಒಂದು ಕ್ಷೇತ್ರದಿಂದ ಎರಡರಿಂದ ಮೂರು ಹೆಸರು ಕಳುಹಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿ ಹೆಸರು ಅಂತಿಮ ಗೊಳ್ಳುತ್ತದೆ, ಮೊದಲ ಹಂತದಲ್ಲಿ 100 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಫೆ. 15ರ ಒಳಗೆ ಪಟ್ಟಿ ಬಿಡುಗಡೆ ಶೇ 100ರಷ್ಟು ಖಚಿತ’ ಎಂದು ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ ಅವರು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT