ಮಂಗಳವಾರ, ಜನವರಿ 26, 2021
19 °C

ಪ್ರಧಾನಿಯಿಂದ ಮೋದಿ ಅವರಿಂದ ಅನುಭವ ಮಂಟಪ ಉದ್ಘಾಟನೆ: ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ (ಬೀದರ್): ‘ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಬುಧವಾರ ₹ 500 ಕೋಟಿ ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣ, ಸಂಗೀತ ಕಾರಂಜಿಯನ್ನು ಒಳಗೊಂಡ ಮಕ್ಕಳ ಉದ್ಯಾನ, ಕಲ್ಯಾಣ ಮಂಟಪ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ನಾಡಿನ ಬಸವ ಭಕ್ತರ ಬಹು ವರ್ಷಗಳ ಬೇಡಿಕೆಗೆ ಈಗ ಕಾಲ ಕೂಡಿ ಬಂದಿದೆ. ಇಡೀ ದೇಶದ ಗಮನ ಸೆಳೆಯುವ ನಿಟ್ಟಿನಲ್ಲಿ ಅನುಭವ ಮಂಟಪ ಕಟ್ಟಡದ ರೂಪುರೇಷೆ ಸಿದ್ಧಪಡಿಸಲಾಗಿದೆ. ಈಗಾಗಲೇ ₹100 ಕೋಟಿ ಬಿಡುಗಡೆ ಮಾಡಲಾಗಿದೆ. ವಾರದಲ್ಲಿ ಮತ್ತೆ ₹ 100 ಕೋಟಿ ಕೊಟ್ಟು ಟೆಂಡರ್ ಕರೆದು ಕಾಮಗಾರಿ ಶುರು ಮಾಡಲಾಗುವುದು’ ಎಂದು ತಿಳಿಸಿದರು.

‘ಇಂತಹ ಪುಣ್ಯ ಕಾರ್ಯಕ್ಕೆ ಹಣಕಾಸಿನ ಕೊರತೆಯಾಗದು. ಹಿರಿಯರಾದ ಗೋ.ರು. ಚೆನ್ನಬಸಪ್ಪ, ಅರವಿಂದ ಜತ್ತಿ, ಬಸವರಾಜ ಪಾಟೀಲ ಸೇಡಂ ಹಾಗೂ ಮಠಾಧೀಶರ ಸಲಹೆ ಪಡೆದು ಅನುಭವ ಮಂಟಪಕ್ಕೆ ಸಂಬಂಧಿಸಿದಂತೆ ಏನೇನು ಕೆಲಸ ಆಗಬೇಕು ಅದನ್ನೆಲ್ಲ ಮಾಡಲು ಸರ್ಕಾರ ಸಿದ್ಧವಿದೆ. ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ₹ 100 ಕೋಟಿ ಅನುದಾನ ಕೊಡಲಾಗುವುದು. ನಾಡಿನ ಬಸವ ಭಕ್ತರು ಹಾಗೂ ಮಠಾಧೀಶರ ಆಶಯದಂತೆ ನಿಗದಿತ ಅವಧಿಯಲ್ಲಿ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಲಾಗುವುದು' ಎಂದರು.

'ಬಸವಾದಿ ಶರಣರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಗೌರವ ಇದೆ. ಸಂಸತ್ ಭವನದ ಭೂಮಿ ಪೂಜೆ ಸೇರಿದಂತೆ ಅನೇಕ ಬಾರಿ ಕಲ್ಯಾಣ ನಾಡಿನ ಹೆಸರು ಪ್ರಸ್ತಾಪಿಸಿದ್ದಾರೆ. ಇಂತಹ ಪುಣ್ಯ ಭೂಮಿ ಬಹಳ ಎತ್ತರಕ್ಕೆ ಬೆಳೆಯಬೇಕು’ ಎಂದು ತಿಳಿಸಿದರು.

‘ಶರಣರ ಸಮಾನತೆ ವಿಚಾರ ಹಾಗೂ ಮಾನವೀಯ ಮೌಲ್ಯ ಜಗತ್ತಿನಾದ್ಯಂತ ಪ್ರಚಾರವಾಗಬೇಕು. ಈ ನಿಟ್ಟಿನಲ್ಲಿ ಇಲ್ಲಿ ಪ್ರತಿ ವರ್ಷ ಬಸವ ಉತ್ಸವ ಆಚರಣೆ ಆಗಬೇಕು. ಶರಣರ ಜೀವನ ಕುರಿತು ಹೆಚ್ಚಿನ ಚಿಂತನ –ಮಂಥನ ಆಗಬೇಕಿದೆ. ಈ ನಿಟ್ಟಿನಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕೆಂದು ಬಸವ ಭಕ್ತರು ಮನವಿ ಮಾಡಿದ್ದಾರೆ. ಹಿರಿಯರ ಸಲಹೆ ಪಡೆದು ಎಲ್ಲವನ್ನೂ ಮಾಡಲು ಸಿದ್ಧ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು