ಜೂನ್‌ ಒಳಗೆ ಸಾಲ ಮನ್ನಾ ಹಣ ಪಾವತಿ: ಸಿಎಂ ಎಚ್‌.ಡಿ.ಕುಮಾರಸ್ವಾಮಿ

7

ಜೂನ್‌ ಒಳಗೆ ಸಾಲ ಮನ್ನಾ ಹಣ ಪಾವತಿ: ಸಿಎಂ ಎಚ್‌.ಡಿ.ಕುಮಾರಸ್ವಾಮಿ

Published:
Updated:
Deccan Herald

ಬೀದರ್: ‘ ರೈತರ ಸಾಲ ಮನ್ನಾ ಹಣವನ್ನು 2019ರ ಜೂನ್‌ ಒಳಗೆ ಸಹಕಾರ ಬ್ಯಾಂಕ್‌ಗಳಿಗೆ ಪಾವತಿಸಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಹಕಾರ ಬ್ಯಾಂಕ್‌ಗಳಿಗೆ ಅಕ್ಟೋಬರ್‌ ವರೆಗೆ ₹ 1,300 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ತಿಂಗಳಿಂದ ಹಂತ ಹಂತವಾಗಿ ಒಟ್ಟು ₹9,458 ಕೋಟಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

‘ಐಎಎಸ್‌ ಅಧಿಕಾರಿ ನೇತೃತ್ವದಲ್ಲಿ ವಿಶೇಷ ಘಟಕ ರಚಿಸಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ ರೈತರು ಪಡೆದ ಸಾಲದ ಮಾಹಿತಿ ಸಂಗ್ರಹಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ನಿಂದ ರೈತರು ಪಡೆದ ಸಾಲ ಮನ್ನಾ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅದಕ್ಕಾಗಿ ಬಜೆಟ್‌ನಲ್ಲಿ ₹ 6,500 ಕೋಟಿ ಕಾಯ್ದಿರಿಸಲಾಗಿದೆ. ರೈತರ ಸಾಲಮನ್ನಾ ಮಾಡಲು ಹಣಕಾಸಿನ ಕೊರತೆ ಇಲ್ಲ. ರೈತರು ಆತಂಕ ಪಡಬೇಕಾಗಿಲ್ಲ’ ಎಂದು ಅಭಯ ನೀಡಿದರು.

‘ಸಿದ್ದರಾಮಯ್ಯನವರ ಅವಧಿಯಲ್ಲಿನ ಸಾಲಮನ್ನಾದ  ₹ 3,300 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇದರ ಸರಿಯಾದ ಮಾಹಿತಿ ಇಲ್ಲ. ಸಾಲಮನ್ನಾ ವಿಷಯದಲ್ಲಿ ಜನರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರ ಈವರೆಗೆ ಹೆಚ್ಚವರಿ ಹಣ ಬಿಡುಗಡೆ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿತ್ತನೆ ಮಾಡಿದ ಬೆಳೆ ಬರದಿಂದಾಗಿ ನಾಶವಾಗಿ ₹ 16 ಸಾವಿರ ಕೋಟಿ ನಷ್ಟವಾಗಿದೆ. ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ನವೆಂಬರ್‌ 17 ರಂದು ಕೇಂದ್ರದ ತಂಡ ರಾಜ್ಯದ ಬರಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಕೇಂದ್ರ ಹೆಚ್ಚಿನ ಪರಿಹಾರ ಕೊಡುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

‘ಸೇಡಿನ ರಾಜಕೀಯ ಮಾಡಿಲ್ಲ’

‘ನಾನು ಸೇಡಿನ ರಾಜಕೀಯ ಮಾಡುತ್ತಿದ್ದೇನೆಂದು ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ. ಅಂತಹ ವ್ಯಕ್ತಿಯ ಪ್ರಶ್ನೆಗೆ ಉತ್ತರ ಕೊಡಲಾರೆ. ನಾನು ಎಂದಿಗೂ ಸೇಡಿನ ರಾಜಕೀಯ ಮಾಡಿಲ್ಲ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ತನಿಖಾ ಅಧಿಕಾರಿಗಳಿಗೆ ಪರಮಾಧಿಕಾರ ನೀಡಲಾಗಿದೆ. ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತಪ್ಪು ಮಾಡಿದ ಯಾವ ಅಧಿಕಾರಿಗೂ ರಕ್ಷಣೆ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಆ್ಯಂಬಿಡೆಂಟ್‌ ವಂಚನೆ ಪ್ರಕರಣದಲ್ಲಿ ₹ 600 ಕೋಟಿ ವಂಚನೆ ಮಾಡಲಾಗಿದೆ ಎಂದು ವಂಚನೆಗೊಳಗಾದ ಜನರು ಎಚ್.ಡಿ.ದೇವೇಗೌಡರಿಗೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ₹ 18 ಕೋಟಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿರುವುದಾಗಿ ಅಫಿಡವಿಟ್‌ ಬರೆದುಕೊಟ್ಟು ಈಗ ಹಣ ಮರಳಿಸುವುದಾಗಿ ಹೇಳುತ್ತಿದ್ದಾರೆ. ಕಳ್ಳತನ ಮಾಡಿದವರೆಲ್ಲ ಅಫಿಡವಿಟ್‌ ಸಲ್ಲಿಸಿದರೆ ಅವರಿಗೆ ರಕ್ಷಣೆ ಒದಗಿಸಲು ಸಾಧ್ಯವೆ’ ಎಂದು ಪ್ರಶ್ನಿಸಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !