ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ಆಕಾಂಕ್ಷಿಗಳಿಂದ ಮಾಹಿತಿ ಸಂಗ್ರಹ

ಕೆಪಿಸಿಸಿ ಟಿಕೆಟ್ ಆಯ್ಕೆ ಸಮಿತಿ ಮೊದಲ ಸಭೆ
Last Updated 28 ನವೆಂಬರ್ 2020, 15:47 IST
ಅಕ್ಷರ ಗಾತ್ರ

ಬೀದರ್‌: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ರಚಿಸಿರುವ ಆಯ್ಕೆ ಸಮಿತಿಯು ನಗರದ ಹೋಟೆಲ್‌ ಮಯೂರಾದಲ್ಲಿ ಶನಿವಾರ ಸಂಜೆ ಸಭೆ ನಡೆಸಿ ಟಿಕೆಟ್‌ ಆಕಾಂಕ್ಷಿಗಳಿಂದ ವಿವರವಾದ ಮಾಹಿತಿಯನ್ನು ಸಂಗ್ರಹಸಿತು.

ಟಿಕೆಟ್ ಆಕಾಂಕ್ಷಿಗಳಾದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಬಿಡಿಎ ಮಾಜಿ ಅಧ್ಯಕ್ಷ ಮುರಳಿಧರ ಎಕಲಾರಕರ್, ಎಐಸಿಸಿ ಸದಸ್ಯ ಆನಂದ ದೇವಪ್ಪ, ಹಿರಿಯ ಮುಖಂಡರಾದ ಬಸವರಾಜ ಬುಳ್ಳಾ, ಶಿವರಾಜ ನರಶೆಟ್ಟಿ, ಶಿವಶರಣ ಬಿರಾದಾರ, ಶಂಕರರಾವ್ ಜಮಾದಾರ, ಬಾಬು ಹೊನ್ನಾನಾಯಕ್, ಅರ್ಜುನ ಕನಕ, ಬಸವರಾಜ ಸ್ವಾಮಿ, ಸುಧಾಕರ ಗುರ್ಜರ್, ಶಾಂತಪ್ಪ ಪಾಟೀಲ, ಶಂಕರರಾವ್ ಜಮಾದಾರ, ಅಮೃತ ಚಿಮಕೋಡ್, ಗೌತಮ ನಾರಾಯಣರಾವ್, ಯಸ್ರಬ್ ಅಲಿ, ಏಜಾಜ್ ಲಾತೂರೆ ಸೇರಿದಂತೆ ಒಟ್ಟು 19 ಆಕಾಂಕ್ಷಿಗಳು ಆಯ್ಕೆ ಸಮಿತಿಗೆ ವಿವರವಾದ ಮಾಹಿತಿ ಒದಗಿಸಿದರು.

ಸಭೆ ಆರಂಭವಾಗುವ ಮುಂಚೆಯೇ ಏಳು ಅಭ್ಯರ್ಥಿಗಳು ಸ್ಥಳೀಯರಿಗೆ ಟಿಕೆಟ್‌ ಕೊಡುವಂತೆ ಆಯ್ಕೆ ಸಮಿತಿಗೆ ಮನವಿ ಮಾಡಿದರು. ಆದರೆ, ನಂತರದಲ್ಲಿ ಪಕ್ಷ ಸೂಚಿಸುವ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿ ಚುನಾವಣೆಯಲ್ಲಿ ಅವರನ್ನೇ ಗೆಲ್ಲಿಸುವ ವಾಗ್ದಾನ ಮಾಡಿದರು. ಬಸವರಾಜ ಸ್ವಾಮಿ ಅವರು ‘ಸ್ಥಳೀಯ ಅಭ್ಯರ್ಥಿಗೆ ಟಿಕೆಟ್‌ ಕೊಡುವುದಾದರೆ ನನ್ನ ಅರ್ಜಿಯನ್ನು ಹಿಂದಕ್ಕೆ ಪಡೆವೆ’ ಎಂದು ಹೇಳಿದರು.

ಬಸವಕಲ್ಯಾಣ ಕ್ಷೇತ್ರದ ಬಗ್ಗೆ ನಿಮಗೆ ಎಷ್ಟು ಗೊತ್ತಿದೆ. ತಾಲ್ಲೂಕು ಪಂಚಾಯಿತಿ ಎಷ್ಟು ಕ್ಷೇತ್ರಗಳನ್ನು ಒಳಗೊಂಡಿದೆ, ಗ್ರಾಮ ಪಂಚಾಯಿತಿ ವಾರ್ಡ್‌ಗಳು ಎಷ್ಟು, ಮತದಾರರ ಸಂಖ್ಯೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಸಮಿತಿ ಸದಸ್ಯರು ಕೇಳಿದರು. ಕೆಲವರು ಸಿದ್ಧತೆ ಮಾಡಿಕೊಂಡು ಬಂದಿದ್ದರು. ಕೆಲವರಿಗೆ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ಸಮಿತಿ ಸದಸ್ಯರು ಪ್ರತಿಯೊಂದನ್ನು ಸೂಕ್ಷ್ಮವಾಗಿ ದಾಖಲಿಸಿಕೊಂಡರು.

ಪ್ರತಿಪಕ್ಷಗಳು ಸಹಜವಾಗಿಯೇ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ. ಬಿಜೆಪಿ ಈಗಾಗಲೇ ಎರಡು ನಿಗಮಗಳ ಘೋಷಣೆ ಮಾಡಿದ್ದಾರೆ. ಅನುದಾನವನ್ನೂ ಘೋಷಿಸಿದೆ. ಈ ಪ್ರಯುಕ್ತ ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರಗಳನ್ನು ರೂಪಿಸುವ ಸಾಮರ್ಥ್ಯಗಳ ಬಗ್ಗೆಯೂ ಸಮಿತಿ ಸಮಾಲೋಚನೆ ನಡೆಸಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಸದ ನಾಸಿರ್‌ ಹುಸೇನ್, ಶಾಸಕರಾದ ಶಾಸಕ ರಾಜಶೇಖರ ಪಾಟೀಲ, ಶರಣಪ್ರಕಾಶ ಪಾಟೀಲ, ರಹೀಂ ಖಾನ್, ಮಾಜಿ ಸಂಸದ ನರಸಿಂಗ್‌ರಾವ್‌ ಸೂರ್ಯವಂಶಿ, ಮಾಜಿ ಶಾಸಕ ಬಿ.ಆರ್.ಪಾಟೀಲ, ಸಂತೋಷ ಲಾಡ್, ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಅವರನ್ನು ಒಳಗೊಂಡ ಸಮಿತಿ ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ನಡೆಸಿತು. ಸಮಿತಿಯ ಇನ್ನೊಬ್ಬ ಸದಸ್ಯ ಶಾಸಕ ಪ್ರಿಯಾಂಕ ಖರ್ಗೆ ಗೈರಾಗಿದ್ದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಹಾಗೂ ಹಿರಿಯ ಮುಖಂಡರು ಇದ್ದರು.

‘ಕಾಂಗ್ರೆಸ್‌ ಸಮಿತಿ ಟಿಕೆಟ್‌ ಆಕಾಂಕ್ಷಿಗಳ ಸಂದರ್ಶನ ನಡೆಸಿ ವಿವರವಾದ ಮಾಹಿತಿ ಸಂಗ್ರಹಿಸಿದೆ. ಸಮಿತಿಯಲ್ಲಿರುವ ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯ ದಾಖಲಿಸಿಕೊಂಡಿದ್ದಾರೆ. ಸದಸ್ಯರ ಕ್ರೋಡೀಕೃತ ವರದಿಯನ್ನು ಸಿದ್ಧಪಡಿಸಿ ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಾಗುವುದು. ಪಕ್ಷದ ಉನ್ನತ ಮಟ್ಟದ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT