ಶನಿವಾರ, ಜೂನ್ 6, 2020
27 °C

ಚಿಟಗುಪ್ಪ: ಆರೋಗ್ಯ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸಿಬ್ಬಂದಿ ಕೊರತೆ

ವೀರೇಶ್.ಎನ್.ಮಠಪತಿ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವು ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ದಿನದ 24 ಗಂಟೆಯೂ ರೋಗಿಗಳಿಗೆ ಉತ್ತಮ ಸೇವೆ ನೀಡುವ ಮೂಲಕ ಜನರಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಒಳ್ಳೆಯ ಭಾವನೆ ಮೂಡುವಂತೆ ಮಾಡಿದೆ.

ಮೂವತ್ತು ವರ್ಷಗಳ ಹಿಂದೆ ಸರ್ಕಾರವು ಜರ್ಮನ್ ತಂತ್ರಜ್ಞಾನದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿದ್ದರೂ ಸೌಲಭ್ಯಗಳು ಮಾತ್ರ ಸುಧಾರಣೆ ಕಂಡಿಲ್ಲ.

ಇರುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಲಭ್ಯವಿದ್ದ ಅನುದಾನದಲ್ಲಿಯೇ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಇಲ್ಲಿನ ವೈದ್ಯಾಧಿಕಾರಿ ಡಾ.ವೀರನಾಥ ಕನಕ ಅವರ ಶ್ರಮ ಮೆಚ್ಚುವಂತದ್ದು.

‘ಆಸ್ಪತ್ರೆಯ ಶುಚಿತ್ವದ ಕಾಳಜಿ ಬಗ್ಗೆ ಸಾರ್ವಜನಿಕರು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ನಿತ್ಯ 300 ಹೊರರೋಗಿಗಳು ಹಾಗೂ 30 ಒಳರೋಗಿಗಳು ಬರುತ್ತಾರೆ. ಕೊರೊನಾ ಭಯದಿಂದ ದಿನಕ್ಕೆ ಕನಿಷ್ಟ 20 ಹೊರ ರೋಗಿಗಳು ಬರುತ್ತಿಲ್ಲ‘ ಎಂದು ವೈದ್ಯಾಧಿಕಾರಿ ಡಾ.ವೀರನಾಥ ಕನಕ ಹೇಳುತ್ತಾರೆ.

ಕೊರೊನಾ ಸೋಂಕು ಶಂಕಿತರ ಚಿಕಿತ್ಸೆಗೆ ಒಂದು ವಾರ್ಡ್ ಸಿದ್ಧಪಡಿಸಿದ್ದು, ಇದುವರೆಗೆ 150ಕ್ಕೂ ಹೆಚ್ಚಿ ಶಂಕಿತರಿಗೆ ಪರೀಕ್ಷೆ ಮಾಡಲಾಗಿದೆ. ನಾಗರಿಕರಲ್ಲಿ ಕೊರೊನಾ ಭಯ ಇರುವುದರಿಂದ ಥರ್ಮಲ್ ಸ್ಕ್ಯಾನಿಂಗ್, ಎನ್-95 ಮಾಸ್ಕ್, ಪಿಪಿಇ ಕಿಟ್‌ಗಳ ಅವಶ್ಯಕತೆ ಇದೆ. ಆಂಬುಲೆನ್ಸ್‌ಗೆ ಒಬ್ಬ ಚಾಲಕ ಇದ್ದಾರೆ. ಮತ್ತೊಬ್ಬ ಚಾಲಕನ ಅಗತ್ಯವಿದೆ ಎನ್ನುತ್ತಾರೆ ಅವರು.

ನೂತನ ತಾಲ್ಲೂಕು ಕೇಂದ್ರವಾಗಿ ಎರಡು ವರ್ಷ ಕಳೆದಿದೆ. ಇಷ್ಟೊತ್ತಿಗೆ ಈ ಆಸ್ಪತ್ರೆ ತಾಲ್ಲೂಕು ಆಸ್ಪತ್ರೆ ಆಗಬೇಕಾಗಿತ್ತು. ಆದರೆ ಇನ್ನೂ ಸಮುದಾಯ ಆರೋಗ್ಯ ಕೇಂದ್ರವಾಗಿಯೇ ಇರುವುದರಿಂದ ಇಲ್ಲಿ ಐಸೋಲೇಷನ್ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ಜಿಲ್ಲಾ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಆರು ಜನ ವೈದ್ಯರು, ನಾಲ್ಕು ಮಂದಿ ದಾದಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರು ಆಸ್ಪತ್ರೆ ಆವರಣದ ವಸತಿಗೃಹದಲ್ಲಿಯೇ ಇರುತ್ತಾರೆ. ಇದರಿಂದಾಗಿ ರಾತ್ರಿ ಸಮಯದಲ್ಲಿಯೂ ರೋಗಿಗಳಿಗೆ ಚಿಕಿತ್ಸೆ ದೊರಕುತ್ತಿದೆ.

ರೋಗಿಗಳಿಗೆ ಕುಡಿಯಲು ಶುದ್ಧವಾದ ನೀರು ಪೂರೈಸಲು ಆರ್‌ಒ ಘಟಕ ನಿರ್ಮಿಸಲಾಗಿದೆ. ಹೆರಿಗೆ ಕೋಣೆಗೆ ಹೈಜೆನಿಕ್ ಹೈಟೆಕ್ ಸ್ಪರ್ಶ ನೀಡಲಾಗಿದೆ.

ಆಸ್ಪತ್ರೆ ಆವರಣದಲ್ಲಿ ವೈದ್ಯರ, ವೈದ್ಯಕೀಯ ಸಿಬ್ಬಂದಿ ವಸತಿ ಗೃಹಗಳು ನಿರ್ಮಾಣ ಆಗಬೇಕು ಎಂದು ವೈದ್ಯ ಸುಶೀಲ್ ಕುಮಾರ್ ಮನವಿ ಮಾಡುತ್ತಾರೆ.

ಆಸ್ಪತ್ರೆ ಆವರಣದಲ್ಲಿಯೇ ಜನೌಷಧಿ ಮಳಿಗೆ ಇದ್ದು, ರೋಗಿಗಳಿಗೆ ಕಡಿಮೆ ಹಣದಲ್ಲಿ ಗುಣಮಟ್ಟದ ಔಷಧಿ ಲಭ್ಯವಾಗುತ್ತಿವೆ. ಆಸ್ಪತ್ರೆ ಆವರಣ ಶುಚಿಯಾಗಿದೆ. ₹ 11 ಲಕ್ಷ ವೆಚ್ಚದಲ್ಲಿ ಬಾಣಂತಿಯರ ಆರೈಕೆಯ ವಿಶೇಷ ವಾರ್ಡ್ ನಿರ್ಮಾಣವಾಗಿದೆ.  ಆಸ್ಪತ್ರೆಗೆ ನಿತ್ಯ ಬರುವ ರೋಗಿಗಳಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು