ಬುಧವಾರ, ಜುಲೈ 28, 2021
21 °C
ವಿವಿಧ ವಸತಿ ಯೋಜನೆ: ಮನೆ ಹಂಚಿಕೆಯಲ್ಲಿ ಅವ್ಯವಹಾರ ಆರೋಪ

ಬೀದರ್ ಡಿಸಿ ವಿರುದ್ಧ ಸಿಎಂ, ವಿಧಾನಸಭಾಧ್ಯಕ್ಷರಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಯೋಜನೆಯ ಮನೆಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದ ವಿವಾದ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಸಂಸದ ಭಗವಂತ ಖೂಬಾ ಹಾಗೂ ಶಾಸಕ ಈಶ್ವರ ಖಂಡ್ರೆ ಅವರ ಮಧ್ಯೆ ನಡೆದಿದ್ದ ಗುದ್ದಾಟ ಇದೀಗ ಜಿಲ್ಲಾಧಿಕಾರಿಯನ್ನೂ ಸುತ್ತಿಕೊಂಡಿದೆ.

ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನೀಡಿರುವ ವರದಿ ಹಾಗೂ ಭಾಲ್ಕಿಯ ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಮಾಡಿರುವ ಆರೋಪವನ್ನು ಉಲ್ಲೇಖಿಸಿ ನೋಟಿಸ್ ಜಾರಿ ಮಾಡಿದ ನಂತರ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿ ವಿರುದ್ಧ ಮುಖ್ಯಮಂತ್ರಿ ಹಾಗೂ ವಿಧಾನಸಭಾ ಅಧ್ಯಕ್ಷರಿಗೆ ಮೇ 26 ರಂದು ಲಿಖಿತ ದೂರು ನೀಡಿದ್ದಾರೆ.

‘ಬೀದರ್ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮಹಾದೇವ ಅವರು ಸರ್ಕಾರದ ನಿಯಮಾವಳಿಯನ್ನು ಗಾಳಿಗೆ ತೂರಿ ಅನೇಕ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ. ಮೇ 18 ರಂದು ತಾಲ್ಲೂಕು ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫ್‌ರೆನ್ಸ್ ನಡೆಸಿದ ಸಂದರ್ಭದಲ್ಲಿ ಏಕವಚನದಲ್ಲಿ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಅದೇ ದಿನ ಈ ಕುರಿತು ಮುಖ್ಯ ಕಾರ್ಯದರ್ಶಿ ಅವರಿಗೂ ಮೌಖಿಕ ದೂರು ನೀಡಿದ್ದೇನೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಚ್.ಆರ್.ಮಹಾದೇವ ಅವರು ಶಾಸಕನಾದ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಮೂಲಕ ಹಕ್ಕಿಗೆ ಚ್ಯುತಿ ಎಸಗಿದ್ದಾರೆ. ವಿಡಿಯೊ ಕಾನ್ಫ್‌ರೆನ್ಸ್ ವಿಡಿಯೊವನ್ನು ಎನ್.ಐ.ಸಿ.ಯಿಂದ ತರಿಸಿಕೊಂಡು ಅವಲೋಕಿಸಿ ಶಾಸಕರ ಹಕ್ಕುಚ್ಯುತಿ ಮಾಡಿರುವ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನೀಡಿರುವ ವರದಿಯಲ್ಲಿ ಎಲ್ಲಿಯೂ ಶಾಸಕರ ಹೆಸರು ಉಲ್ಲೇಖಿಸಿಲ್ಲ. 2018ರ ಚುನಾವಣೆಯಲ್ಲಿ ನನ್ನ ವಿರುದ್ಧ ಸೋಲು ಅನುಭವಿಸಿದ ವ್ಯಕ್ತಿ ರಾಜಕೀಯ ದ್ವೇಷ ಸಾಧಿಸಲು ನೀಡಿದ ದೂರನ್ನು ಆಧಾರವಾಗಿಟ್ಟುಕೊಂಡು ಜಿಲ್ಲಾಧಿಕಾರಿ ನೋಟಿಸ್ ನೀಡಿ ನನಗೆ ತಲುಪುವ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ನನ್ನ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬೀದರ್‌ನಲ್ಲಿ ನೂರಾರು ಪಾರಂಪರಿಕ ಕಟ್ಟಡಗಳಿವೆ. ಇದರಲ್ಲಿ ಜಿಲ್ಲಾಧಿಕಾರಿ ಮನೆಯೂ ಒಂದು. ಐತಿಹಾಸಿಕ ಮಹತ್ವದ ಕಟ್ಟಡವನ್ನು ನೆಲಸಮಗೊಳಿಸಿ ₹ 1 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದಾರೆ. ಇದಕ್ಕೆ ಯಾವುದೇ ಪೂರ್ವಾನುಮತಿ ಹಾಗೂ ಅನುಮೋದನೆ ಪಡೆದಿಲ್ಲ ಎಂದು ದೂರಿದ್ದಾರೆ.

ನಿರ್ಮಿತಿ ಕೇಂದ್ರದ ಅಡಿಯಲ್ಲಿ ನಡೆದಿರುವ ಎಲ್ಲ ಕಾಮಗಾರಿಗಳಲ್ಲೂ ಅಕ್ರಮದ ವಾಸನೆ ಬಡಿಯುತ್ತಿದೆ. ಆದಾಯ ತೆರಿಗೆ ಇಲಾಖೆ ಈಗಾಗಲೇ ನಿರ್ಮಿತಿ ಕೇಂದ್ರದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೊಲು ಹಾಕಿಕೊಂಡಿದೆ. ಆದರೂ ನಿರ್ಮಿತಿ ಕೇಂದ್ರದಿಂದ ಹೊಸ ಖಾತೆ ತೆರೆದು ಹಣಕಾಸು ವ್ಯವಹಾರ ಮಾಡಲಾಗುತ್ತಿದೆ. ಈ ಬಗ್ಗೆ ಲೆಕ್ಕಪರಿಶೋಧನೆ ಮತ್ತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಿಂದ ಮನಸೋ ಇಚ್ಛೆ ಕೃಷಿ ಭೂಮಿಯನ್ನು ಕೃಷಿಯೇತರ ಆಗಿ ಪರಿವರ್ತಿಸಿದ ಆದೇಶಗಳು ಹೊರ ಬರುತ್ತಿವೆ. ಸರ್ಕಾರಿ ಭೂಮಿ, ವಕ್ಫ್ ಜಮೀನನ್ನೂ ಕೃಷಿಯೇತರ ಆಗಿ ಪರಿವರ್ತನೆ ಮಾಡಿದ ಉದಾಹರಣೆಗಳು ಇವೆ. ಮಹಾದೇವ ಅವರ ಕಾಲಾವಧಿಯಲ್ಲಿ ಆಗಿರುವ ಎಲ್ಲ ಭೂ ಪರಿವರ್ತನೆಗಳ ಕುರಿತಂತೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

2020-21ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೊರಾರ್ಜಿ ದೇಸಾಯಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ (ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ) ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಆಹಾರ ಧಾನ್ಯ ಪೂರೈಕೆ ಮಾಡಲು ತಮಗೆ ಆಪ್ತನಾದ ಗುತ್ತಿಗೆದಾರನಿಗೆ ಗುತ್ತಿಗೆ ನೀಡಲು ಎಲ್.1, ಎಲ್.2, ಎಲ್.3 ಬಿಟ್ಟು ನಿಯಮ ಮೀರಿ ಎಲ್.4ಗೆ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.