ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಉತ್ತರಪ್ರದೇಶದ ಲಿಖಿಂಪುರದಲ್ಲಿ ರೈತರ ಹತ್ಯೆ ಯತ್ನಕ್ಕೆ ಖಂಡನೆ
Last Updated 8 ಅಕ್ಟೋಬರ್ 2021, 12:16 IST
ಅಕ್ಷರ ಗಾತ್ರ

ಬೀದರ್‌: ಉತ್ತರಪ್ರದೇಶದ ಲಿಖಿಂಪುರದಲ್ಲಿ ನಡೆದ ರೈತರ ಕೊಲೆ ಯತ್ನ ಹಾಗೂ ಸಂತ್ರಸ್ತ ರೈತರ ಕುಟುಂಬಗಳನ್ನು ಭೇಟಿ ಮಾಡಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಬಂಧನ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿಯ ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಜಾರಿ ಮಾಡಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಲಿಖಿಂಪುರದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ವಾಹನ ಹಾಯಿಸಿ ಕೊಲೆಗೆ ಯತ್ನಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದೆ. ಅಗತ್ಯ ವಸ್ತಗಳ ಬೆಲೆ ಹೆಚ್ಚಳದಿಂದ ಜನ ಸಾಮಾನ್ಯರು ಅಷ್ಟೇ ಅಲ್ಲ; ಕೃಷಿಕರೂ ಕಂಗಾಲಾಗಿದ್ದಾರೆ. ರೈತರು 10 ತಿಂಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಹೇಯ ಕೃತ್ಯ ಎಸೆಗಲಾಗಿದೆ ಎಂದು ಆರೋಪಿಸಿದರು.

ರೈತ ಚಳವಳಿಗೆ ದೇಶದೆಲ್ಲಡೆ ಬೆಂಬಲ ವ್ಯಕ್ತವಾಗುತ್ತಿದೆ. ಪ್ರತಿಭಟನೆ ಇನ್ನಷ್ಟು ಉಗ್ರ ಸ್ವರೂಪ ಪಡೆಯಲಿದೆ. ಬರುವ ಚುನಾವಣೆಯಲ್ಲಿ ದೇಶದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಸಚಿವರ ಪುತ್ರ ಆಶಿಶ್‌ ಹಾಗೂ ಅವರ ಬೆಂಬಲಿಗರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

ಯೋಗಿ ಆದಿತ್ಯನಾಥ ಅವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು. ಘಟನೆ ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ನಂತರ ಪ್ರತಿಭಟನಾಕಾರರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಅಂಬೇಡ್ಕರ್‌ ವೃತ್ತದಿಂದ ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಮಖಂಡರಾದ ಮನ್ನಾನ್‌ ಸೇಠ್, ಚಂದ್ರಕಾಂತ ಹಿಪ್ಪಳಗಾಂವ್‌, ಪರ್ವೇಜ್‌ ಕಮಲ, ವೆಂಟಕರಾವ್‌ ಶಿಂಧೆ, ಸಂಜುಕುಮಾರ ಡಿ.ಕೆ, ಗೋವರ್ಧನ್‌ ರಾಠೋಡ್‌, ಸುನೀಲ್‌ ಬಚ್ಚನ್‌, ಲಿಯಾಕತ್‌ ಉಲ್ಲಾ ಖಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT