ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕೆ ಧರ್ಮ ಬಳಸಲಾರೆ: ಈಶ್ವರ ಖಂಡ್ರೆ

Last Updated 30 ಏಪ್ರಿಲ್ 2019, 15:25 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಈಶ್ವರ ಖಂಡ್ರೆ ಮೂರನೇ ಬಾರಿಗೆ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು. ಸಿದ್ದರಾಮಯ್ಯ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದ ಈಶ್ವರ ಅವರು ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ.

ಲಿಂಗಾಯತ ಮತಗಳನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್‌ ಹೈಕಮಾಂಡ್ ಈಶ್ವರ ಖಂಡ್ರೆ ಅವರನ್ನು ಬೀದರ್‌ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸಿದೆ. ಬಿಜೆಪಿ ಅಭ್ಯರ್ಥಿ ಕೂಡ ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಒಂದೇ ಸಮುದಾಯದವರು ಪರಸ್ಪರ ಮುಖಾಮುಖಿಯಾಗಿರುವುದು ಮತದಾರರಲ್ಲಿ ಕುತೂಹಲ ಕೆರಳಿಸಿದೆ.

ಪುರುಸೊತ್ತಿಲ್ಲದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅವರು ಒಂದಿಷ್ಟು ಬಿಡುವು ಮಾಡಿಕೊಂಡು ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ್ದಾರೆ.

1. ಲಿಂಗಾಯತ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದ ನಿಮಗೆ ಲಿಂಗಾಯತರ ಬೆಂಬಲ ಸಿಗಬಹುದೆ?

ನನ್ನ ವಿಷಯದಲ್ಲಿ ಯಾವ ಲಿಂಗಾಯತರೂ ಮುನಿಸಿಕೊಂಡಿಲ್ಲ. ಬಿಜೆಪಿ ಕುತಂತ್ರದ ರಾಜಕಾರಣ ಮಾಡುತ್ತಿದೆ. ಸಮುದಾಯದ ಏಕತೆ, ಐಕ್ಯತೆ, ಸಮಗ್ರತೆ ಕಾಪಾಡಿಕೊಂಡು ಹೋಗುವಂತೆ ಮೊದಲಿನಿಂದಲೂ ಹೇಳುತ್ತಿದ್ದೇನೆ. ಲಿಂಗ ಪೂಜೆ ಮಾಡುವವರೆಲ್ಲರೂ ಲಿಂಗಾಯತರೇ. ನಾನು ಧಾರ್ಮಿಕ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ.

ಲಿಂಗಾಯತರನ್ನು ‘3ಬಿ’ಯಲ್ಲಿ ಸೇರಿಸಿ ಮೀಸಲಾತಿ ಕಲ್ಪಿಸಿದ್ದು ಭೀಮಣ್ಣ ಖಂಡ್ರೆ ಅವರು. ಲಿಂಗಾಯತರು ಮೀಸಲಾತಿ ಫಲವನ್ನೂ ಪಡೆದುಕೊಂಡಿದ್ದಾರೆ. ಬಸವಣ್ಣನ ಬಗ್ಗೆ ಅವಹೇಳನ ಮಾಡಿದಾಗ ಪ್ರತಿಭಟನೆ ಮಾಡಿದವರು, ಅನುಭವ ಮಂಟಪಕ್ಕೆ ಬುನಾದಿ ಹಾಕಿದವರು ಭೀಮಣ್ಣ ಖಂಡ್ರೆ ಬಿಜೆಪಿ ಧರ್ಮವನ್ನು ಸ್ವಾರ್ಥ ಹಾಗೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಹುಳುಕು ಹುಡುಕುವುದು ಬಿಜೆಪಿಯ ಚಾಳಿಯಾಗಿದೆ.

2. ಜಿಲ್ಲೆಯ ಕಾಂಗ್ರೆಸ್‌ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವ ದೂರುಗಳಿವೆಯಲ್ಲ?

ಜಿಲ್ಲೆಯಲ್ಲಿ ಶೇಕಡ 18ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಅಲ್ಪಸಂಖ್ಯಾತರ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿದ್ದೇ ಕಾಂಗ್ರೆಸ್. ಮುಸ್ಲಿಂರಿಗೆ ಟಿಕೆಟ್‌ ಕೊಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ರಹೀಂ ಖಾನ್‌ ಅವರಿಗೆ ಸಚಿವ ಸ್ಥಾನ ಕೊಡಲಾಗಿದೆ. ಇಕ್ಬಾಲ್‌ ಅಹಮ್ಮದ್‌ ಸರಡಗಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ.

ಬಿಜೆಪಿಯನ್ನು ಸೋಲಿಸಲು ನೀವು ನಿಲ್ಲಬೇಕು ಎಂದು ಹೈಕಮಾಂಡ್‌ ಪ್ರಸ್ತಾವ ಮಂಡಿಸಿತ್ತು. ಅದನ್ನು ಒಪ್ಪಿಕೊಂಡು ಲೋಕಸಭೆಗೆ ಸ್ಪರ್ಧಿಸಿದ್ದೇನೆ. ಮಸ್ಲಿಂರು ಈಗಾಗಲೇ ಕೋಮುವಾದಿ ಶಕ್ತಿಗಳಿಗೆ ಬೆಂಬಲ ನೀಡದಿರಲು ತೀರ್ಮಾನಿಸಿದ್ದಾರೆ. ಎಲ್ಲ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ.

3. ಬಿಜೆಪಿ ಮುಖಂಡರ ವಾಗ್ದಾಳಿಯನ್ನು ಹೇಗೆ ನಿಭಾಯಿಸುತ್ತೀರಿ?

ಬಿಜೆಪಿ ಮುಖಂಡರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕೇವಲ ಸುಳ್ಳು ಹೇಳಿ ಜನರ ಬಳಿ ಮತಯಾಚಿಸುತ್ತಿದ್ದಾರೆ. 40 ವರ್ಷಗಳ ಹಿಂದೆ ಏನು ಆಗಿದೆ ಎನ್ನುವುದು ಈಗಿನವರಿಗೆ ತಿಳಿಯದು. ನಾನು ವಿದ್ಯಾರ್ಥಿಯಾಗಿದ್ದಾಗ ಎಲ್ಲೋ ನಡೆದ ಘಟನೆಯೊಂದಿಗೆ ತಳಕು ಹಾಕಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯ ಮುಖಂಡರು ಅತ್ಯಂತ ಕೆಳಮಟ್ಟಕ್ಕೆ ಇಳಿಯುತ್ತಾರೆಂದು ಯಾವತ್ತೂ ನಿರೀಕ್ಷಿಸಿರಲಿಲ್ಲ.

4. ಕ್ಷೇತ್ರದ ಅಭಿವೃದ್ಧಿಗೆ ಯಾವ ರೂಪುರೇಷೆಗಳನ್ನು ಸಿದ್ಧ ಮಾಡಿಕೊಂಡಿದ್ದೀರಿ ?

ಹಾಲಿ ಸಂಸದರು ಜಿಲ್ಲೆಯ ಬೇಕು, ಬೇಡಿಕೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸಂಸತ್ತಿನಲ್ಲಿ ಸರಿಯಾಗಿ ಪ್ರಸ್ತಾಪ ಮಾಡದ ಕಾರಣ ಕ್ಷೇತ್ರದ ಜನ ಅನೇಕ ಯೋಜನೆಗಳಿಂದ ವಂಚಿತರಾಗಿದ್ದಾರೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಮೂರು ವರ್ಷಗಳಿಂದ ಕುಂಟುತ್ತ ಸಾಗಿವೆ. ಖಾನಾಪುರ ಪಿಟ್‌ಲೈನ್‌ ಅಪೂರ್ಣವಾಗಿದೆ. ಇದು ಪೂರ್ಣಗೊಂಡರೆ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ. ಜನ ದೂರದ ಊರುಗಳಿಗೆ ಹೋಗುವುದು ತಪ್ಪಲಿದೆ. ಭಾಷಣಗಳಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗದು. ಯುವಕರು ಹಾಗೂ ವಿಧವೆಯರನ್ನು ಗಮನದಲ್ಲಿ ಇಟ್ಟುಕೊಂಡು ಉದ್ಯೋಗ ತರಬೇತಿ ನೀಡಲಾಗುವುದು. ಐಟಿ,ಬಿಟಿ ಉದ್ಯಮಗಳಿಗೆ ಆಹ್ವಾನ ನೀಡಲಾಗುವುದು.

5. ಜನರು ನಿಮಗೇಕೆ ಮತ ಕೊಡಬೇಕು?

ಇಂದು ಎಲ್ಲ ಕ್ಷೇತ್ರಗಳು ಕಲುಷಿತಗೊಂಡಿವೆ. ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪಗಳು ಇದ್ದೇ ಇರುತ್ತವೆ. ಸುಧಾರಣೆಯತ್ತ ಹೆಜ್ಜೆ ಇಡುವುದು ಮಹತ್ವದ್ದಾಗಿದೆ. ಉತ್ತಮ ರೀತಿಯಲ್ಲಿ ಸೇವೆ, ಜನ ಕಲ್ಯಾಣ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಜನರು ಮತ ಕೊಡಲಿದ್ದಾರೆ. ಮೂರು ಬಾರಿ ಶಾಸಕನಾಗಿ ಹಾಗೂ ಸಚಿವನಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ. ಇದು ಲೋಕಸಭಾ ಚುನಾವಣೆಯಲ್ಲಿ ನೆರವಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT