ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಹಂತದಲ್ಲಿ ಮುಗ್ಗರಿಸಿದ ಕಾಂಗ್ರೆಸ್

ಔರಾದ್ ವಿಧಾನಸಭೆ ಕ್ಷೇತ್ರ ವಿಶ್ಲೇಷಣೆ
Last Updated 27 ಮೇ 2019, 12:18 IST
ಅಕ್ಷರ ಗಾತ್ರ

ಔರಾದ್: ಬರೋಬ್ಬರಿ ಒಂದು ವರ್ಷದ ಹಿಂದೆ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಭಾರಿ ಪೈಪೋಟಿ ನೀಡಿತ್ತು.

ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಬಿಜೆಪಿಯ ಪ್ರಭು ಚವಾಣ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳೆ ನಿದ್ದೆಗೆಡಿಸಿದ್ದರು. ಲೋಕಸಭೆಯಲ್ಲಿ ಎಲ್ಲವೂ ಉಲ್ಟಾ ಆಗಿದೆ. ಕಾಂಗ್ರೆಸ್‌ ಚೇತರಿಕೆಯ ಹಂತದಲ್ಲೇ ಮುಗ್ಗರಿಸಿದೆ.

ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್ ವಿರುದ್ಧ ಬಿಜೆಪಿಯ ಭಗವಂತ ಖೂಬಾ ಈ ಕ್ಷೇತ್ರದಲ್ಲಿ 20,009 ಹೆಚ್ಚುವರಿ ಮತಗಳು ಪಡೆದಿದ್ದರು. ಈಚೆಗೆ ನಡೆದ ಚುನಾವಣೆಯಲ್ಲಿ ಖೂಬಾ ಈಶ್ವರ ಖಂಡ್ರೆ ಅವರಿಗಿಂತ 32,852 ಹೆಚ್ಚುವರಿ ಮತಗಳನ್ನು ಪಡೆದಿದ್ದಾರೆ.

2016ರಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್ ಚೇತರಿಸಿಕೊಂಡಿತ್ತು. ಎರಡು ದಶಕದ ನಂತರ ತಾಲ್ಲೂಕು ಪಂಚಾಯಿತಿ ತನ್ನ ಅಧೀನದಲ್ಲಿ ಪಡೆಯಿತು. ಜಿಲ್ಲಾ ಪಂಚಾಯಿತಿಯ ಮೂರು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, ಈಗ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ನಿರಾಶೆ ಮೂಡಿದೆ.

‘ಮೋದಿ ಅಲೆ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಿರುವುದು ನಿಜ. ಅದಕ್ಕಿಂತ ಮುಖ್ಯವಾಗಿ ಈ ಚುನಾವಣೆಯಲ್ಲಿ ನನಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿಲ್ಲ. ಕೇವಲ ಒಂದು ಹೋಬಳಿ ಜವಾಬ್ದಾರಿ ಮಾತ್ರ ಕೊಟ್ಟಿದ್ದರು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದರೆ ಇನ್ನು ಹೆಚ್ಚಿನ ಮತಗಳು ಪಡೆಯಬಹುದಿತ್ತು’ ಎಂದು ವಿಧಾನಸಭೆ ಔರಾದ್‌ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಿಜಯಕುಮಾರ ಕೌಡಾಳೆ ಹೇಳುತ್ತಾರೆ.

‘ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್‌ಗೆ ಶರಣಾದ ಪರಿಣಾಮ ನನ್ನ ಲೀಡ್ ಕಡಿಮೆಯಾಯಿತು. ಸಿದ್ಧರಾಮಯ್ಯ ಅವರ ಜಾತಿ ರಾಜಕಾರಣದಿಂದ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತಗಳು ಒಟ್ಟು ಗೂಡಿದವು. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಜಾತಿ ಧರ್ಮ ಬದಿಗಿಟ್ಟು ಮೋದಿ ಅವರನ್ನು ಬೆಂಬಲಿಸಿದರು. ಈ ಕಾರಣ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಔರಾದ್ ಕ್ಷೇತ್ರದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚುವರಿ ಮತ ಪಡೆದು ವಿಜಯಿಯಾದರು’ ಎಂದು ಶಾಸಕ ಪ್ರಭು ಚವಾಣ್ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT