ಜೀಪ್‌ ಎಳೆದು ಪ್ರತಿಭಟಿಸಿದ ಕಾರ್ಯಕರ್ತರು

7
ತೈಲ ಬೆಲೆ ಏರಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ, ಸರ್ಕಾರಿ ಶಾಲೆಗಳಿಗೆ ರಜೆ ನೀಡಿದ ಜಿಲ್ಲಾಡಳಿತ

ಜೀಪ್‌ ಎಳೆದು ಪ್ರತಿಭಟಿಸಿದ ಕಾರ್ಯಕರ್ತರು

Published:
Updated:
Deccan Herald

ಬೀದರ್: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಕರೆ ನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಕಾಂಗ್ರೆಸ್‌ ನೇತೃತ್ವದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಕೆಲ ಶಾಲಾ ಕಾಲೇಜುಗಳು ರಜೆ ಘೋಷಿಸಿದ್ದವು. ಬಸವಕಲ್ಯಾಣ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಬಸ್‌ ಸಂಚಾರ ಸಾಮಾನ್ಯವಾಗಿತ್ತು.

ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದ ಆವರಣದಲ್ಲಿ ಸಿಪಿಐ, ಸಿಪಿಎಂ, ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು. ಹೀಗಾಗಿ ಕೆಲ ಹೊತ್ತು ಬಸ್‌ ಸಂಚಾರ ಸ್ಥಗಿತಗೊಂಡಿತ್ತು.

ಆಟೊ ಸಂಚಾರ, ವ್ಯಾಪಾರ ವಹಿವಾಟು ಸಹಜವಾಗಿತ್ತು. ಪೆಟ್ರೋಲ್‌ ಬಂಕ್‌, ಹೋಟೆಲ್‌, ಬ್ಯಾಂಕ್‌ ಹಾಗೂ ಚಿತ್ರಮಂದಿರಗಳು ಎಂದಿನಂತೆ ತೆರೆದುಕೊಂಡಿದ್ದವು.

ಪ್ರತಿಭಟನೆ:
ಕಾಂಗ್ರೆಸ್‌ ಕಾರ್ಯಕರ್ತರು ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಸಿದರು. ಕಾರ್ಯಕರ್ತರು ದೂರದ ವರೆಗೆ ಜೀಪ್‌ ಎಳೆದು ಒಯ್ಯುವ ಮೂಲಕ ತೈಲ ಬೆಲೆ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಪದೇ ಪದೇ ಹೆಚ್ಚಿಸುತ್ತಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದರೂ ಕೇಂದ್ರ ಸರ್ಕಾರ ಬೆಲೆ ಕಡಿಮೆ ಮಾಡುತ್ತಿಲ್ಲ. ತೈಲ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ ಹೊರತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ವಿದೇಶದ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಕಪ್ಪು ಹಣ ದೇಶಕ್ಕೆ ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಯಲ್ಲಿ ಹಣ ಜಮಾ ಮಾಡಲಾಗುವುದು. ತೈಲ ಬೆಲೆ ಇಳಿಕೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಚುನಾವಣೆ ಪೂರ್ವದಲ್ಲಿ ಬಿಜೆಪಿ ಮತದಾರರಿಗೆ ನೀಡಿದ್ದ ಭರವಸೆ ಹುಸಿಯಾಗಿದೆ ಎಂದರು.

ಅಡಿಗೆ ಅನಿಲ ಸಿಲಿಂಡರ್‌ ಬೆಲೆ ಸಹ ಗಗನಕ್ಕೆ ಏರಿದೆ. ಜನಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ವಿಧಾನ ಪರಿಷತ್‌ ಸದಸ್ಯರಾದ ವಿಜಯಸಿಂಗ್‌, ಅರವಿಂದ ಅರಳಿ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.

ನಗರಸಭೆ ಮಾಜಿ ಅಧ್ಯಕ್ಷೆ ಫಾತಿಮಾ, ಇರ್ಷಾದ್‌ ಪೈಲ್ವಾನ್‌, ಎಂ.ಎ.ಸಮಿ, ಚಂದ್ರಕಾಂತ ಹಿಪ್ಪಳಗಾಂವ, ದತ್ತಾತ್ರಿ ಮೂಲಗೆ, ಅಜಮತ್‌ ಪಟೇಲ್‌, ಪರ್ವೇಜ್‌ ಕಮಲ್, ಅಶೋಕ ಕೋಡಗೆ, ಸಂಜಯ ಜಾಗೀರದಾರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !