ಹುಮನಾಬಾದ್: ಚಿಟಗುಪ್ಪ ಪಟ್ಟಣದ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಗುರುವಾರ ಜರುಗಿತು. ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ರೋಜಮ್ಮ ತಿಪ್ಪಣ್ಣ, ಉಪಾಧ್ಯಕ್ಷರಾಗಿ ಮುಜಾಫರ್ ಪಟೇಲ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿದರೆ ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿತು. ಪುರಸಭೆಯಲ್ಲಿ ಕಾಂಗ್ರೆಸ್‌ನ 13 ಸದಸ್ಯರು, ಬಿಜೆಪಿ ಸದಸ್ಯರು 6, ಜೆಡಿಎಸ್ 3 ಸದಸ್ಯರು ಹಾಗೂ ಬಿಎಸ್‌ಪಿ ಒಬ್ಬ ಸದಸ್ಯರಿದ್ದರು. ಕಳೆದ ವಾರ ಬಿಜೆಪಿಯ ಕ್ರಿಸ್ತದಾಸ್ ಮನೋಹರ (ವಾರ್ಡ್ 12) ಹಾಗೂ ವಾರ್ಡ್ 13ರ ಬಿಎಸ್‌ಪಿ ಸದಸ್ಯ ರಾಜದೀಪ್ ಜಾಬಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಒಟ್ಟು 23 ಸದಸ್ಯರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 16 ಮತಗಳನ್ನು ಪಡೆದರು. ವಾರ್ಡ್ 4ರ ಸದಸ್ಯ ಜೆಡಿಎಸ್‌ನ ಮಹಮ್ಮದ್ ನಿಸಾ ರೋದ್ದಿನ್ (ತಬರೇಜ್ )ಭಂಗಿ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡಿದರು. ಇನ್ನಿಬ್ಬರು ಜೆಡಿಎಸ್ ಸದಸ್ಯರು ಚುನಾವಣೆಯಿಂದ ದೂರ ಉಳಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರೋಜಮ್ಮ ತಿಪ್ಪಣ್ಣರ ಜಾತಿ ಪ್ರಮಾಣ ಪತ್ರದ ಕುರಿತು ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ಪಕ್ಷದ ಸದಸ್ಯರು ಚುನಾವಣೆ ಮಾಡದಿರುವಂತೆ ಆಕ್ಷೇಪಣೆ ಪತ್ರ ಸಲ್ಲಿಸಿದರು.
ಚುನಾವಣೆ ಸ್ಥಗಿತಗೊಳಿಸಲು ಚುನಾವಣಾ ಅಧಿಕಾರಿ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಮತದಾನದಲ್ಲಿ ಪಾಲ್ಗೊಳ್ಳದೇ ಹೊರ ನಡೆದರು. ಚುನಾವಣೆಗೆ ನಿಗದಿಪಡಿಸಿದ್ದ ನಿರ್ದಿಷ್ಟ ಸಮಯದ ಬಳಿಕ ಚುನಾವಣಾ ಅಧಿಕಾರಿಯಾದ ತಹಶೀಲ್ದಾರ್ ಮಂಜುನಾಥ್ ಪಾಂಚಾಳ್ ಅಧಿಕೃತವಾಗಿ ಅಧ್ಯಕ್ಷ ಉಪಾಧ್ಯಕ್ಷರ ಹೆಸರುಗಳನ್ನು ಘೋಷಿಸಿದರು.
ಮಾಜಿ ಸಚಿವ ರಾಜಶೇಖರ್ ಪಾಟೀಲ್, ಎಂಎಲ್‌ಸಿ ಭೀಮರಾವ್ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಿದರು. ಬಳಿಕ ಪಟ್ಟಣದಲ್ಲಿ ಜರುಗಿದ ವಿಜೇತ ಅಭ್ಯರ್ಥಿಗಳ ಮೆರವಣಿಗೆಯಲ್ಲಿ ಸಂಸದ ಸಾಗರ ಖಂಡ್ರೆ ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.