ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ: ಬೆಂಗಳೂರಿನ ಸಭೆಯಲ್ಲಿ ಕಾಣಿಸಿಕೊಂಡ ಹೊಸ ಮುಖಗಳು
Last Updated 25 ನವೆಂಬರ್ 2022, 14:47 IST
ಅಕ್ಷರ ಗಾತ್ರ

ಬಸವಕಲ್ಯಾಣ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿ 9 ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಕೆಲ ಹೊಸ ಮುಖಗಳು ಕೂಡ ಆಕಾಂಕ್ಷಿಗಳಾಗಿರುವುದು ಗೊತ್ತಾಗಿದೆ.

ಟಿಕೆಟ್ ಬಯಸುವವರು ₹2 ಲಕ್ಷ ಶುಲ್ಕದ ಜತೆಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ರೂಪಿಸಿದ್ದರಿಂದ 9 ಜನರು ಅರ್ಜಿ ಸಲ್ಲಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತ ಭರಿಸಲಾಗದೇ ಪ್ರತಿ ಚುನಾವಣೆಯಲ್ಲಿ ಆಕಾಂಕ್ಷಿ ಆಗಿರುತ್ತಿದ್ದ ಕೆಲವರಿಗೆ ನಿರಾಶೆಯೂ ಆಗಿದೆ. ಈ ಕ್ಷೇತ್ರದ ಕೆಲ ಮುಖಂಡರು ಜಿಲ್ಲೆಯ ಇತರೆ ಹಾಗೂ ಕಲಬುರಗಿ ಜಿಲ್ಲೆಯ ಕ್ಷೇತ್ರಗಳ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವುದು ಕೂಡ ಗೊತ್ತಾಗಿದೆ.

ಆಕಾಂಕ್ಷಿಗಳ ಜತೆ ಚರ್ಚಿಸುವುದಕ್ಕಾಗಿ ಶುಕ್ರವಾರ ಬೆಂಗಳೂರಿನಲ್ಲಿ ಪಕ್ಷದ ವರಿಷ್ಠರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಅರ್ಜಿ ಸಲ್ಲಿಸಿದವರೆಲ್ಲರೂ ಹಾಜರಿದ್ದರು. ಹೀಗಾಗಿ ಅರ್ಜಿ ಸಲ್ಲಿಸಿರುವ ಕುರಿತು ಬಹಿರಂಗವಾಗಿ ತೋರಿಸಿಕೊಳ್ಳದಿರುವವರೂ ಇದ್ದರು. ಯಾರ‍್ಯಾರು ಆಕಾಂಕ್ಷಿಗಳಾಗಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿಯದಂತಾಗಿದೆ.

ಉದ್ಯಮಿ ಧನರಾಜ ತಾಳಂಪಳ್ಳಿ ಮತ್ತು ಕೋಲಿ ಸಮಾಜದ ಮುಖಂಡ ಸಂಜಯ ವಾಡಿಕರ್ ಅವರು ಅರ್ಜಿ ಸಲ್ಲಿಸಿದ ಹೊಸಬರು.

ಇವರನ್ನು ಹೊರತುಪಡಿಸಿದರೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಗಿದ್ದ ಮಾಲಾ ನಾರಾಯಣರಾವ್, ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಎಐಸಿಸಿ ಸದಸ್ಯ ಆನಂದ ದೇವಪ್ಪ, ಮುಖಂಡರಾದ ಶಿವರಾಜ ನರಶೆಟ್ಟಿ, ಶಾಂತಪ್ಪ ಪಾಟೀಲ, ಸುಧಾಕರ ಗುರ್ಜರ್ ಹಾಗೂ ಬಸವರಾಜಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಇಲ್ಲಿನ ಮುಖಂಡರಾದ ಅರ್ಜುನ ಕನಕ ಔರಾದ್ ಮೀಸಲು ಕ್ಷೇತ್ರ ಹಾಗೂ ಬಾಬು ಹೊನ್ನಾನಾಯಕ್ ಅವರು ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕಾಗಿ ಮತ್ತು ಉಪ ಚುನಾವಣೆಯಲ್ಲಿ ಇಲ್ಲಿನ ಆಕಾಂಕ್ಷಿ ಆಗಿದ್ದ ಬಸವರಾಜ ಬುಳ್ಳಾ ಅವರು ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಬಹಿರಂಗ ಆಗುತ್ತಿದ್ದಂತೆಯೇ ಇತರ ಪಕ್ಷಗಳಲ್ಲಿನ ರಾಜಕೀಯ ಚಟುವಟಿಕೆಗಳು ಕೂಡ ಚುರುಕುಗೊಂಡಿವೆ. ಕೆಲವರು ಪಕ್ಷ ಬದಲಾವಣೆಯ ದಾರಿಯಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT