ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತ ಶಕ್ತಿಪೀಠ ಮಹಾಲಕ್ಷ್ಮಿ ದೇವಸ್ಥಾನ

ಬಟಗೇರಾ: ನಾಡಹಬ್ಬ ದಸರಾದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆ ಆಯೋಜನೆ
Last Updated 25 ಅಕ್ಟೋಬರ್ 2020, 8:00 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾದ ಮಹಾಲಕ್ಷ್ಮಿ ದೇವಸ್ಥಾನವು ಎತ್ತರದ ಗುಡ್ಡದ ಮೇಲಿರುವ ಕಾರಣ ಸೊಬಗಿನ ತಾಣವಾಗಿದೆ. ಜತೆಗೆ ಜಾಗೃತ ಶಕ್ತಿಪೀಠವೂ ಆಗಿದ್ದರಿಂದ ವಿವಿಧೆಡೆಯ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.

ಇಲ್ಲಿ ನಾಡಹಬ್ಬ ದಸರಾ ನಿಮಿತ್ತ ಬೆಳ್ಳಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸ ಲಾಗಿದ್ದು, ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಹೀಗಾಗಿ ರಾತ್ರಿಯಲ್ಲಿ ದೂರದವರೆಗೂ ದೇವಸ್ಥಾನದ ಬೆಳಕು ಕಾಣಿಸುತ್ತದೆ. ಘಟಸ್ಥಾಪನೆಯ ದಿನದಿಂದ ಒಂಭತ್ತು ದಿನಗಳವರೆಗೆ ಪುರಾಣ, ಪ್ರವಚನ, ಉಡಿ ತುಂಬುವುದು, ಕುಂಕುಮಾರ್ಚನೆ, ಭಜನೆ, ಜಾಗರಣೆ ನಡೆದಿದ್ದು ವಿಜಯದಶಮಿಯ ದಿನ ಸಾಮೂಹಿಕ ಬನ್ನಿ ವಿತರಣೆ ಹಾಗೂ ಮರುದಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಕೋವಿಡ್ ನಿಯಮಗಳ ಪ್ರಕಾರವೇ ಎಲ್ಲ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಅನೇಕ ಭಕ್ತರು ಹಾಗೂ ಹರಕೆ ಹೊತ್ತವರು ದೇವಸ್ಥಾನಕ್ಕೆ ಭೇಟಿನೀಡಿ ದರ್ಶನ ಪಡೆಯುತ್ತಿದ್ದಾರೆ.

ಈ ಸ್ಥಳ ಈ ಭಾಗದ ಪ್ರಸಿದ್ಧ ಹಾಗೂ ಪುರಾತನ ದೇವಸ್ಥಾನವಾಗಿದೆ. ಆದ್ದರಿಂದ ಅಪಾರ ಭಕ್ತರ ಶ್ರದ್ಧಾಸ್ಥಾನವಾಗಿದೆ. ಗ್ರಾಮವು ಕೆಲ ಶತಕಗಳ ಹಿಂದೆ ಒಂದು ಕಿ.ಮೀ. ಅಂತರದಲ್ಲಿನ ಇಟಗೇರಿ ಎಂಬಲ್ಲಿತ್ತು. ಈಗಲೂ ಈ ಜಾಗದಲ್ಲಿ ಮನೆಗಳ ಅವಶೇಷಗಳು ಕಾಣಸಿಗುತ್ತವೆ. ಕೆಲ ದೇವಸ್ಥಾನಗಳು ಹಳೆಯ ಊರಿನ ಕತೆ ಹೇಳುತ್ತವೆ. ಕೊರೊನಾದಂಥ ಭಯಂಕರ ರೋಗವೊಂದು ಹರಡಿ ಜನರು ಸಾವಿನ ದವಡೆಗೆ ಸಿಲುಕಿಕೊಂಡು ಮನೆ ಮನೆಯೂ ಸ್ಮಶಾನದ ರೂಪ ಪಡೆದುಕೊಂಡಾಗ ಉಳಿದವರು ಜೀವದ ರಕ್ಷಣೆಗಾಗಿ ಈಗ ಗ್ರಾಮವಿರುವ ಸ್ಥಳಕ್ಕೆ ಧಾವಿಸಿ ಗುಡಿಸಲುಗಳನ್ನು ಹಾಕಿಕೊಂಡು ವಾಸಿಸಲು ಆರಂಭಿಸಿದರು. ಇಲ್ಲಿಯೇ ಕಾಯಂ ಮನೆ ಕಟ್ಟಿಕೊಂಡರು. ಅದುವೇ ಮುಂದೆ ಬಟಗೇರಿ ನಂತರ ಬಟಗೇರಾ ಊರಾಗಿ ಪರಿವರ್ತನೆಗೊಂಡಿತು. ಊರು ಯಾವಾಗ ಸ್ಥಳಾಂತರಗೊಂಡಿತು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಆದರೆ, ಭಜನಾ ಪದ, ಹಿರಿಯರ ಹೇಳಿಕೆ, ಭುಲಾಯಿ ಪದಗಳಲ್ಲಿ ಈಗಲೂ ಇಟಗೇರಿಯು ಬಟಗೇರಿಯಾದ ಕಥೆ ಜೀವಂತವಾಗುಳಿದಿದೆ.

ರೋಗದ ಹರಡುವಿಕೆಯಿಂದ ಮೊದಲೇ ಭಯಭೀತಗೊಂಡಿದ್ದ ಗ್ರಾಮಸ್ಥರು ದೇವಿ, ದೇವತೆಗಳ ಆರಾಧಕರಾಗುತ್ತಾರೆ. ಗುಡ್ಡದ ಮೇಲೆ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಿ ನಿತ್ಯವೂ ಪೂಜೆಗೈಯುತ್ತಾರೆ. ಮುಂದೆ ಮೂರು ವರ್ಷಕ್ಕೊಮ್ಮೆ ಜಾತ್ರೆ (ಕೈರಿ) ಆಯೋಜಿಸುತ್ತಾರೆ. ದಸರಾ ಹಬ್ಬ ಕೂಡ ಸಂಭ್ರಮದಿಂದ ಹಮ್ಮಿಕೊಳ್ಳುವ ಸಂಪ್ರದಾಯ ಆರಂಭಿಸುತ್ತಾರೆ. ಅಂದಿನಿಂದ ಇಲ್ಲಿನ ಭಕ್ತರ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ.

ದೇವಸ್ಥಾನದವರೆಗೆ ಗುಡ್ಡ ಏರಿ ಹೋಗಲು 125 ಮೆಟ್ಟಿಲುಗಳಿವೆ. ಗುಡಿಯ ಸುತ್ತಲಿನಲ್ಲಿ ಆವರಣಗೋಡೆ ಕಟ್ಟಲಾಗಿದೆ. ಭವ್ಯ ಗೋಪುರ, ಸಭಾಂಗಣ ನಿರ್ಮಿಸಲಾಗಿದೆ. ಎದುರಿಗೆ ದೀಪದ ಕಂಬಗಳಿವೆ. ಅಮಾವಾಸ್ಯೆಗೆ ದಾಸೋಹ ವ್ಯವಸ್ಥೆಯೂ ಇರುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಇದ್ದು ಹುಣ್ಣಿಮೆ, ಮಂಗಳವಾರ, ಶುಕ್ರವಾರದಂದು ಭಕ್ತರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ.

‘ದಾಸೋಹ ಭವನ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಕಲ್ಯಾಣ ಮಂಟಪ ಹಾಗೂ ಇತರೆ ವ್ಯವಸ್ಥೆ ಕೈಗೊಳ್ಳುವ ಯೋಜನೆಯಿದೆ’ ಎಂದು ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT