ಭಾನುವಾರ, ಜನವರಿ 19, 2020
28 °C
ಅದ್ಧೂರಿ ಕನಕ ಜಯಂತಿ : ಸಚಿವ ಚವಾಣ್ ಭರವಸೆ

₹1.5 ಕೋಟಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ :ಸಚಿವ ಚವಾಣ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ಪಟ್ಟಣದಲ್ಲಿ ₹1.5 ಕೋಟಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ ಮಾಡಲಾಗುವುದು’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೇಳಿದರು.

ಸಂಗೊಳ್ಳಿ ರಾಯಣ್ಣ ಯುವ ಒಕ್ಕೂಟ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನಕ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಸೂಕ್ತ ಸ್ಥಳಾವಕಾಶ ಕಲ್ಪಿಸಿದರೆ ಕಾಮಗಾರಿ ಆರಂಭಿಸುವುದಾಗಿ’ ತಿಳಿಸಿದರು.

‘ಕುರುಬ, ಗೊಂಡ ಸಮಾಜದವರ ಸಮಸ್ಯೆಗೆ ಸ್ಪಂದಿಸಲಾಗುವುದು. ಗೊಂಡ ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣಪತ್ರ ಕೊಡುವಲ್ಲಿ ವಿಳಂಬವಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

‘ಎಲ್ಲ ಸಮಾಜಗಳ ಅಭಿವೃದ್ಧಿ ಜತೆಗೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯಾಗಬೇಕು. ಬೀದರ್-ಔರಾದ್ ನಡುವಿನ ಹೆದ್ದಾರಿ ಕಾಮಗಾರಿ ಆರಂಭಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

ತಿಂಥಣಿ ಗುರುಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ದಾರಿ ತಪ್ಪುತ್ತಿರುವ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಕನಕದಾಸರ ಆದರ್ಶ ವಿಚಾರಗಳು ತಿಳಿಸುವಂತೆ ಮಾಡಬೇಕು. ಮಹಾತ್ಮರನ್ನು
ಒಂದು ಜಾತಿಗೆ ಸೀಮಿತ ಗೊಳಿಸುತ್ತಿರುವುದು ದೇಶದ ದುರಂತ. ಮಹಾತ್ಮರ ವಿಚಾರಗಳು ಜನರ ಬದುಕಿಗೆ ಸ್ಪೂರ್ತಿ ನೀಡುತ್ತವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ  ಮಾತನಾಡಿ, ‘ಜ್ಞಾನ ಇದ್ದರೆ ಎನನ್ನಾದರೂ ಸಾಧನೆ
ಮಾಡಬಹುದು.   ಗೊಂಡ, ಕುರುಬ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು’ ಎಂದು ಸಲಹೆ ನೀಡಿದರು.

ಮುಖಂಡರಾದ ದಯಾಸಾಗರ ಭಂಡೆ, ತಾನಾಜಿ ತೋರಣೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದಕ್ಕೂ ಮುನ್ನ ಪಟ್ಟಣದಲ್ಲಿ ಭಕ್ತ ಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.

ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರಬಾರೆ, ಗುಂಡಪ್ಪ ಮುದಾಳೆ, ಮಾದಪ್ಪ ಕೋಟೆ, ಬಂಡೆಪ್ಪ ಕೋಟೆ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ ಇದ್ದರು.

ರೋಹಿದಾಸ ಮೇತ್ರೆ ಸ್ವಾಗತಿಸಿದರು. ಬಿ.ಎಂ.ಅಮರವಾಡಿ ನಿರೂಪಿಸಿದರು.ವಿಧಾನಪರಿಷತ್
ಸದಸ್ಯ ವಿಜಯಸಿಂಗ್, ಮುಖಂಡ ಧೊಂಡಿಬಾ ನರೋಟೆ, ದತ್ತಾತ್ರಿ ಬಾಪುರೆ, ಪ್ರಭುಶೆಟ್ಟಿ ಸೈನಿಕಾರ  ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು