ಗುರುವಾರ , ಆಗಸ್ಟ್ 22, 2019
25 °C
ಮುಂದುವರಿದ ಮೋಡ ಕವಿದ ವಾತಾವರಣ

ಜಿಟಿ ಜಿಟಿ ಮಳೆಗೆ ಜನ ಜೀವನ ಅಸ್ತವ್ಯಸ್ತ

Published:
Updated:
Prajavani

ಬೀದರ್‌: ಜಿಲ್ಲೆಯಲ್ಲಿ ಮೂರು ದಿನಗಳಿಂದ ಜಿಟಿ ಜಿಟಿ ಮಳೆಯಾಗುತ್ತಿದೆ. ಸೂರ್ಯ ಮರೆಯಾಗಿದ್ದು, ಕಪ್ಪು ಮೋಡ ಆವರಿಸಿದೆ. ಶುಕ್ರವಾರ ಸಂಜೆಯಿಂದ ಬಿಟ್ಟು ಬಿಡದಂತೆ ಸುರಿದ ಜಿಟಿ ಜಿಟಿ ಮಳೆಗೆ ಜನ ಅಸ್ತವ್ಯಸ್ತಗೊಂಡಿದೆ.

ಬೀದರ್, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಚಿಟಗುಪ್ಪ, ಔರಾದ್‌ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಮಳೆಯಾಗಿದೆ. ಜಿಟಿ ಜಿಟಿ ಮಳೆಯಿಂದಾಗಿ ರೈತರು ಕೃಷಿ ಕಾರ್ಯಗಳಿಗೂ ಹೋಗುವುದು ಕಷ್ಟವಾಯಿತು.

ಆಕಾಶದಲ್ಲಿ ದಟ್ಟ ಮೋಡಗಳು ಆವರಿಸಿಕೊಂಡಿದ್ದರೂ ಹಳ್ಳ,ಕೊಳ್ಳಗಳು ಉಕ್ಕಿ ಹರಿಯುವಷ್ಟು ಮಳೆ ಸುರಿದಿಲ್ಲ. ರಸ್ತೆಗಳಲ್ಲಿ ಅಲ್ಲಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡು ಸಂಚಾರಕ್ಕೆ ತೊಂದರೆಯಾಯಿತು.

ನಗರದ ಅಶೋಕ ಹೋಟೆಲ್‌ ಸಮೀಪ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತುಕೊಂಡು ಕೆಲ ಹೊತ್ತು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ಬೊಮ್ಮಗೊಂಡೇಶ್ವರ ವೃತ್ತದಿಂದ ಚಿದ್ರಿ ರಸ್ತೆ, ಮೈಲೂರು ಕ್ರಾಸ್, ಜನವಾಡ ರಸ್ತೆಯ ಬಸ್‌ ನಿಲ್ದಾಣ, ಶಿವನಗರ, ಆರ್‌ಟಿಒ ಕಚೇರಿ ಸಮೀಪ ರಸ್ತೆ ಮೇಲೆ ನಿಂತುಕೊಂಡ ನೀರಿನಲ್ಲೇ ವಾಹನಗಳು ಸಾಗಿದವು.

ಬೊಮ್ಮಗೊಂಡೇಶ್ವರ ವೃತ್ತದಿಂದ ಚಿದ್ರಿ ವರೆಗಿನ ರಸ್ತೆಯಲ್ಲಿ ಬಿದ್ದಿರುವ ತಗ್ಗಿನಲ್ಲಿ ಅಪಾರ ನೀರು ನಿಂತು ವಾಹನ ಚಾಲಕರು ತೊಂದರೆ ಅನುಭವಿಸಬೇಕಾಯಿತು. ವೇಗದಿಂದ ಬರುತ್ತಿದ್ದ ವಾಹನಗಳಿಂದಾಗಿ ಕೆಸರು ನೀರು ಮೇಲಕ್ಕೆ ಚಿಮ್ಮುತ್ತಿದ್ದರಿಂದ ಪಾದಚಾರಿಗಳು ಹಿಂಸೆ ಅನುಭವಿಸಬೇಕಾಯಿತು.

ಹಳೆಯ ಮನೆಗಳ ಮಾಹಿತಿ ಕೊಡಿ: ಬೀದರ್‌: ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿರುವ ಕಾರಣ ಹಳೆಯ ಮನೆಗಳ ಮೇಲೆ ನೀರು ಜಿನುಗಿ ಕುಸಿದು ಬೀಳುವ ಸಾಧ್ಯತೆ ಇದೆ. ಹಳೆಯ ಮನೆಗಳಲ್ಲಿ ವಾಸವಾಗಿರುವ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್‌.ಆರ್‌. ಮಹಾದೇವ ಮನವಿ ಮಾಡಿದ್ದಾರೆ.

ಹಳೆಯ ಮನೆಯ ಛಾವಣಿ ಸೋರುತ್ತಿದ್ದರೆ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಬೇಕು. ಅಂತಹ ಕುಟುಂಬಗಳಿಗೆ ಜಿಲ್ಲಾ ಆಡಳಿತ ಪರ್ಯಾಯ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದ್ದಾರೆ.

Post Comments (+)