7
ನಗರದಲ್ಲಿ ಪ್ಲಾಸ್ಟಿಕ್‌ ವಿರುದ್ಧದ ಕಾರ್ಯಾಚರಣೆ ನಿರಂತರ

ಅರ್ಧದಷ್ಟು ಕಡಿಮೆಯಾದ ಪ್ಲಾಸ್ಟಿಕ್‌ ತ್ಯಾಜ್ಯ

Published:
Updated:
ಬೀದರ್‌ ನಗರಸಭೆಯ ಹಳೆಯ ಕಟ್ಟಡದಲ್ಲಿ ಸಂಗ್ರಹಿಸಿ ಇಡಲಾದ ಪ್ಲಾಸ್ಟಿಕ್‌

ಬೀದರ್‌: ನಗರದಲ್ಲಿ ಪ್ಲಾಸ್ಟಿಕ್‌ ಸಾಮಗ್ರಿ ನಿಷೇಧಿಸಿ 20 ದಿನಗಳು ಕಳೆದಿವೆ. ನಗರಸಭೆಯ ಸಿಬ್ಬಂದಿ ಈ ಅವಧಿಯಲ್ಲಿ ಒಟ್ಟು ₹ 25 ಲಕ್ಷ ಮೌಲ್ಯದ 10 ಟನ್‌ ನಿಷೇಧಿತ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪೊಟ್ಟಣ, ಗ್ಲಾಸ್‌ಗಳನ್ನು ವಶಪಡಿಸಿಕೊಂಡಿದ್ದು, ಪ್ಲಾಸ್ಟಿಕ್‌ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ನಗರಸಭೆಯ ಸಿಬ್ಬಂದಿ ಪ್ರತಿಯೊಂದು ಅಂಗಡಿಗೂ ಭೇಟಿ ಕೊಟ್ಟು ಪರಿಶೀಲಿಸುತ್ತಿರುವ ಕಾರಣ ಅಂಗಡಿಗಳ ಮಾಲೀಕರು ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದಾರೆ. ಅಧಿಕಾರಿಗಳು ಒಂದು ಕೆ.ಜಿ. ಪ್ಲಾಸ್ಟಿಕ್‌ ಸಾಮಗ್ರಿ ದೊರೆತರೂ ಮುಲಾಜಿಲ್ಲದೇ ದಂಡ ವಿಧಿಸುತ್ತಿದ್ದಾರೆ.

ನಗರದ ಕಿರಾಣಿ ಅಂಗಡಿಗಳಲ್ಲಿ ಬಟ್ಟೆ ಚೀಲಗಳು ಕಾಣಿಸಿಕೊಳ್ಳುತ್ತಿವೆ. ಕಾಗದದ ಪೊಟ್ಟಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಾಗದ ಪೊಟ್ಟಣ ತಯಾರಿಸುವವರು ಬಿಡುವಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಆದರೂ, ಕಾಗದ ಚೀಲಗಳ ದಾಸ್ತಾನು ಖಾಲಿಯಾಗಿರುವುದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರು ಮನೆಯಿಂದಲೇ ಕೈಚೀಲಗಳನ್ನು ತರುತ್ತಿದ್ದಾರೆ.

ಅಂಗಡಿ ಮಾಲೀಕರು ಬಟ್ಟೆ ಚೀಲಗಳಿಗೆ ₹ 3 ಪ್ರತ್ಯೇಕ ಪಡೆಯುತ್ತಿರುವುದರಿಂದ ಗ್ರಾಹಕರು ತಮ್ಮೊಂದಿಗೆ ತಂದ ಚೀಲಗಳಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ 20 ದಿನಗಳ ಅವಧಿಯಲ್ಲಿ ತ್ಯಾಜ್ಯದ ಪ್ರಮಾಣದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ.

ಸ್ವಸಹಾಯ ಗುಂಪುಗಳಲ್ಲಿ ಗುರುತಿಸಿಕೊಂಡಿರುವ ಸದಸ್ಯೆಯರು ನಗರದ ಪ್ರತಿಯೊಂದು ಅಂಗಡಿಗೆ ತೆರಳಿ ನಿತ್ಯ ಅಗತ್ಯವಿರುವ ಪೊಟ್ಟಣಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅವರಿಗೆ ಕಾಗದ ಹಾಗೂ ಬಟ್ಟೆ ಚೀಲಗಳು ಮಾರಾಟಕ್ಕೆ ಲಭ್ಯ ಇರುವ ಮಾಹಿತಿಯನ್ನೂ ನೀಡುತ್ತಿದ್ದಾರೆ. ಸ್ವಸಹಾಯ ಗುಂಪುಗಳ ಸದಸ್ಯೆಯರು ವಲಯವಾರು ಒಕ್ಕೂಟ ರಚನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಒಂದು ತಂಡದಲ್ಲಿ ಐವರು ಸದಸ್ಯೆಯರಿದ್ದು, ಒಟ್ಟು 200 ಮಹಿಳೆಯರು ನಗರ ನೈರ್ಮಲ್ಯ ಕಾರ್ಯಕ್ಕೆ ಪರೋಕ್ಷವಾಗಿ ಕೈಜೋಡಿಸಿದ್ದಾರೆ.

ಸಾರ್ವಜನಿಕರಿಗೆ ಸುಲಭವಾಗಿ ಪೇಪರ್‌ಬ್ಯಾಗ್‌ಗಳು ಲಭ್ಯವಾಗುವಂತೆ ನಗರಸಭೆ ₹ 4 ಲಕ್ಷ ವೆಚ್ಚದ ಪೇಪರ್‌ ಬ್ಯಾಗ್‌ ನಿರ್ಮಿಸುವ ಯಂತ್ರವನ್ನು ಖರೀದಿಸಿದ್ದು, ಶೀಘ್ರದಲ್ಲಿ ನಗರಕ್ಕೆ ಬರಲಿದೆ. ಬಟ್ಟೆ ಕೈಚೀಲ ತಯಾರಿಸಲು ಮೂರು ಹೊಸ ಎಲೆಕ್ಟ್ರಿಕಲ್‌ ಹೊಲಿಗೆ ಯಂತ್ರಗಳ ಖರೀದಿಗೂ ಆದೇಶ ನೀಡಲಾಗಿದೆ.

ಹೊಸ ಕಚೇರಿ:

‘ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್‌ಎಚ್‌ಜಿಗಳಿಗೆ ನಗರಸಭೆಯ ಹಳೆಯ ಕಟ್ಟಡವನ್ನು ಬಿಟ್ಟುಕೊಡಲಾಗಿದ್ದು, ಅವರ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ಕಾಗದ ಚೀಲ ತಯಾರಿಸುವ ಹೊಸ ಯಂತ್ರಗಳು ಬಂದರೆ ಪ್ಲಾಸ್ಟಿಕ್‌ ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಅನುಕೂಲವಾಗಲಿದೆ’ ಎಂದು ನಗರಸಭೆ ಆಯುಕ್ತ ಮನೋಹರ ಹೇಳುತ್ತಾರೆ.

‘ಪ್ಲಾಸ್ಟಿಕ್‌ ಚೀಲ, ನಾನ್‌ವೊವೆನ್‌ ಬ್ಯಾಗ್‌, ಪ್ಲಾಸ್ಟಿಕ್ ಲೋಟ, ತಟ್ಟೆ, ಚಮಚ, ಥರ್ಮೊಕಾಲ್, ಮೇಜಿನ ಮೇಲಿನ ಪ್ಲಾಸ್ಟಿಕ್‌ ಹಾಳೆ, ಪ್ಲಾಸ್ಟಿಕ್‌ ಫಾಯಿಲ್‌ ಕವರ್ ಬಳಕೆ ನಿಷೇಧಿಸಲಾಗಿದೆ. ಪರ್ಯಾಯವಾಗಿ ಅಡಿಕೆ ಬಟ್ಟಲು, ಬಾಳೆ ಎಲೆ, ಪೇಪರ್‌, ಮಡಿಕೆ, ಜೂಟ್‌, ಕಾಗದ ಅಥವಾ ಬಟ್ಟೆ ಚೀಲಗಳನ್ನು ಬಳಸಬೇಕು’ ಎನ್ನುತ್ತಾರೆ.

ಎಚ್ಚರಿಕೆ:

‘ಸ್ಟೀಲ್‌ ಬಣ್ಣದ ಪಾಕೇಟ್‌ಗಳ ಬಳಕೆಯನ್ನೂ ನಿಷೇಧಿಸಲಾಗಿದೆ. ಕೆಲವು ಸಗಟು ವ್ಯಾಪಾರಿಗಳು ಕಿರಾಣಿ ಹಾಗೂ ಹೋಟೆಲ್‌ ಮಾಲೀಕರ ದಾರಿ ತಪ್ಪಿಸುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳು ಎಚ್ಚರಿಕೆ ವಹಿಸಬೇಕು. ತಪ್ಪಿದರೆ ಭಾರಿ ದಂಡ ತೆರಬೇಕಾಗಲಿದೆ’ ಎಂದು ನಗರಸಭೆ ಆಯುಕ್ತ ಎಚ್ಚರಿಕೆ ನೀಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !