ಈಗಲೇ ಚಳಿ, ಜನವರಿಯಲ್ಲಿ ಇನ್ನೂ ಚಳಿ

7
ನವೆಂಬರ್‌ನಲ್ಲೇ ದಾಖಲಾದ ಕನಿಷ್ಠ ತಾಪಮಾನ

ಈಗಲೇ ಚಳಿ, ಜನವರಿಯಲ್ಲಿ ಇನ್ನೂ ಚಳಿ

Published:
Updated:
Deccan Herald

ಬೀದರ್‌: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಆದರೆ ಚಳಿ ಮಾತ್ರ ನವೆಂಬರ್‌ ಆರಂಭದಿಂದಲೇ ಶುರುವಾಗಿದೆ. ನವೆಂಬರ್ 13ರಂದು ಕನಿಷ್ಠ ತಾಪಮಾನ ದಿಢೀರ್‌ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದು ಎಲ್ಲರೂ ಅಚ್ಚರಿ ಪಡುವಂತಾಗಿತ್ತು. ಒಂದೂ ತಿಂಗಳಿಂದ ಕನಿಷ್ಠ ತಾಪಮಾನ ಸರಾಸರಿ 11 ರಿಂದ 14 ಡಿಗ್ರಿ ಸೆಲ್ಸಿಯಸ್‌ ಇದೆ. ಜನವರಿ ಎರಡನೇ ವಾರದಲ್ಲಿ ಒಂದಂಕಿಗೆ ಇಳಿದು ಚಳಿ ಹೆಚ್ಚಾಗುವ ಸಾಧ್ಯತೆ ಇದೆ.

ನವೆಂಬರ್‌ 14 ಹಾಗೂ 15ರಂದು 11.6 ಡಿಗ್ರಿ ಸೆಲ್ಸಿಯಸ್‌ ಇದ್ದ ತಾಪಮಾನ ಡಿಸೆಂಬರ್ 1ರಂದು 11.8ಕ್ಕೆ ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಎರಡು ಮೂರು ದಿನಗಳಿಂದ 12ರಿಂದ 14 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇದೆ. ಸಂಜೆ 5 ಗಂಟೆಗೆ ನಿಧಾನ ಚಳಿ ಶುರುವಾಗುತ್ತಿದೆ. ಬೆಳಿಗ್ಗೆ 9 ಗಂಟೆಯಾದರೂ ನಡುಕ ಕಡಿಮೆಯಾಗುತ್ತಿಲ್ಲ.

ವಿದ್ಯಾರ್ಥಿಗಳು ಶ್ವೇಟರ್‌, ಕೈಗವಸು ಹಾಗೂ ತಲೆಗೆ ಟೊಪ್ಪಿಗೆ ಹಾಕಿಕೊಂಡು ಶಾಲೆ, ಕಾಲೇಜುಗಳಿಗೆ ಹೋಗುತ್ತಿದ್ದಾರೆ. ರೈತರು ಮನೆಯಿಂದ ತಡವಾಗಿ ಹೊರ ಬಂದು ಹೊಲ ಗದ್ದೆಗಳಿಗೆ ತೆರಳುತ್ತಿದ್ದಾರೆ. ಹಳ್ಳಿಗಳಲ್ಲಿ ಗ್ರಾಮಸ್ಥರು ಒಣ ಕಸ ಗುಡ್ಡೆ ಹಾಕಿ ಮೈ ಕಾಯಿಸಿಕೊಳ್ಳುತ್ತಿದ್ದಾರೆ.

‘1901ರ ಜನವರಿ 5ರಂದು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕನಿಷ್ಠ 2.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. 2015ರ ಜನವರಿ 10 ರಂದು 5.8 ಡಿಗ್ರಿ ಸೆಲ್ಸಿಯಸ್‌, 2017ರ ನವೆಂಬರ್‌ 13ರಂದು ಹಲಬರ್ಗಾದಲ್ಲಿ ಕನಿಷ್ಠ ಉಷ್ಠಾಂಶ 7.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ಹೇಳುತ್ತಾರೆ.

‘ಜಿಲ್ಲೆಯಲ್ಲಿ 2016ರ ಡಿಸೆಂಬರ್ 19ರಂದು 8.6 ಡಿಗ್ರಿ ಸೆಲ್ಸಿಯಸ್‌, 20ರಂದು 7 ಹಾಗೂ 22ರಂದು 9.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. 2018ರ ನವೆಂಬರ್ 13ರಂದು 10 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಜನವರಿ 10ರ ನಂತರ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಲಿದೆ’ ಎಂದು ವಿವರಿಸುತ್ತಾರೆ.

‘ಹದಿನೈದು ದಿನಗಳಿಂದ ಚಳಿ ಇದೆ. ಮನೆಯಿಂದ ಸುಲಭವಾಗಿ ಹೊರಗೆ ಬರಲು ಮನಸ್ಸು ಒಪ್ಪುತ್ತಿಲ್ಲ. ಚಳಿಗೆ ಕೊಟ್ಟಿಗೆಯಲ್ಲಿ ಜಾನುವಾರುಗಳೂ ಮುದುಡಿಕೊಂಡು ಕುಳಿತುಕೊಳ್ಳುತ್ತಿವೆ’ ಎಂದು ಬೀದರ್ ತಾಲ್ಲೂಕಿನ ಚಿಲ್ಲರ್ಗಿಯ ಹಿರಿಯರಾದ ಭೀಮರೆಡ್ಡಿ ಸುಧಾ ಹೇಳುತ್ತಾರೆ.

‘ಬೀದರ್‌ ಜಿಲ್ಲೆ ಅರೆ ಮಲೆನಾಡು ಪ್ರದೇಶವಾಗಿರುವ ಕಾರಣ ಸಹಜವಾಗಿಯೇ ಜನವರಿವರೆಗೂ ಚಳಿ ಇರಲಿದೆ. ಜಲಾಶಯ ಹಾಗೂ ನದಿ ತಟದ ಗ್ರಾಮಗಳಲ್ಲಿ ಹೆಚ್ಚು ಚಳಿ ಕಾಣಿಸಿಕೊಳ್ಳಲಿದೆ’ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿ ಯೋಜನಾ ವಿಜ್ಞಾನಿ ಗಂಗಾಧರ ಮಠ ತಿಳಿಸುತ್ತಾರೆ.

‘ಈಗಾಗಲೇ ಚಳಿ ಶುರುವಾಗಿದೆ. ಅಸ್ತಮಾ ಹಾಗೂ ಕೀಲು ನೋವು ಇರುವವರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಆರೋಗ್ಯ ಕಾಯ್ದುಕೊಳ್ಳಬೇಕು. ಬೆಚ್ಚಗಿನ ಬಟ್ಟೆ ಧರಿಸುವ ಮೂಲಕ ನಿಗದಿತ ಪ್ರಮಾಣದಲ್ಲಿ ದೇಹದಲ್ಲಿ ಉಷ್ಣಾಂಶ ಇರುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !