ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ತಡೆಗೆ ಸಹಕರಿಸಿ: ಬೀದರ್‌ ಜಿಲ್ಲಾಧಿಕಾರಿ ಮನವಿ

ಗಾಂಧಿಗಂಜ್ ಮಾರುಕಟ್ಟೆಯಲ್ಲಿ ಜಾಗೃತಿ ಕಾರ್ಯಕ್ರಮ
Last Updated 7 ಜುಲೈ 2020, 15:15 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅವರು ಇಲ್ಲಿಯ ಗಾಂಧಿಗಂಜ್‍ನಲ್ಲಿ ವರ್ತಕರು, ರೈತರು, ಹಮಾಲರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರಲ್ಲಿ ಕೋವಿಡ್ 19 ಜಾಗೃತಿ ಮೂಡಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಚಂದ್ರನ್‌ ಆರ್ ಅವರು ‘ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಕೋವಿಡ್ ವೈರಾಣು ದಿನೇ ದಿನೇ ವೇಗವಾಗಿ ಹರಡುತ್ತಿದೆ. ಸೋಂಕಿತರ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ ಕೋವಿಡ್‌ ಸೋಂಕು ತಡೆಗೆ ಪ್ರತಿಯೊಬ್ಬರು ಜಿಲ್ಲಾಡಳಿತದ ಜತೆ ಕೈಜೋಡಿಸಬೇಕು' ಎಂದು ಹೇಳಿದರು.

"ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಮಾಸ್ಕ್‌ ಧರಿಸುವಂತೆ ಇತರರಿಗೂ ತಿಳಿ ಹೇಳಬೇಕು. ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳು ಕಂಡು ಬಂದರೆ ಕೂಡಲೇ ಕೋವಿಡ್‌ 19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಜನರ ಸಹಕಾರ ಇಲ್ಲದೆ ಕೋವಿಡ್‌ ವೈರಾಣು ನಿಯಂತ್ರಣ ಸಾಧ್ಯವಿಲ್ಲ' ಎಂದು ತಿಳಿಸಿದರು.

ಮಾಸ್ಕ್‌ ಧರಿಸದಿದ್ದರೆ ದಂಡ:


ಮಾಸ್ಕ್‌ ಧರಿಸದೆ ಇರುವವರಿಗೆ ದಂಡ ವಿಧಿಸಿ ಜನಜಾಗೃತಿ ಮೂಡಿಸುವ ಕಾರ್ಯಾಚರಣೆ ಈಗಾಗಲೇ ಜಿಲ್ಲಾದ್ಯಂತ ನಡೆಸಲಾಗುತ್ತಿದೆ. ಆದರೂ ಕೆಲವರು ಮಾಸ್ಕ ಧರಿಸದೆ ಇರುವುದು ಕಂಡು ಬರುತ್ತಿದೆ. ಇನ್ನು ಕೋವಿಡ್ 19 ನಿಯಂತ್ರಣ ಪ್ರಯುಕ್ತ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌ ವೈರಾಣು ಹರಡುವಿಕೆಯು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಕೋವಿಡ್‌ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಈಗಾಗಲೇ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಪ್ರತಿಯೊಬ್ಬರು ಮಾಸ್ಕ್‌ ಧರಿಸಬೇಕು. ಮಾಸ್ಕ್‌ ಧರಿಸದೆ ಬರುವವರಿಗೆ ಅಂಗಡಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡಬಾರದು ಎಂದು ಹೇಳಿದರು.

ಗಾಂಧಿಗಂಜ್‌ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್‌ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರು ಮಾತನಾಡಿ, ಎಪಿಎಂಸಿ ಮಾರುಕಟ್ಟೆ ವ್ಯಾಪ್ತಿಯ ಎಲ್ಲ ಕಾರ್ಮಿಕರಿಗೆ ಮಾಸ್ಕ್ ಉಚಿತವಾಗಿ ವಿತರಿಸಲಾಗುವುದು ಎಂದು ಪ್ರಕಟಿಸಿದರು.

ನಗರಸಭೆ ಆಯುಕ್ತ ಬಸಪ್ಪ ಮಾತನಾಡಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಅನಿಲಕುಮಾರ ಪನ್ನಾಳೆ, ಕಾರ್ಯದರ್ಶಿ ಶಿವಶರಣಪ್ಪ ಮಜ್ಜಗೆ ಉಪಸ್ಥಿತರಿದ್ದರು. ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ತುಳಸಿರಾಮ ಎಂ.ಲಾಖೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT