ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪನ್ನಗಳ ಮಾರಾಟಕ್ಕೆ ಸಹಕಾರ ಮಳಿಗೆ

ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿಕೆ
Last Updated 17 ಜನವರಿ 2019, 13:37 IST
ಅಕ್ಷರ ಗಾತ್ರ

ಬೀದರ್‌: ‘ಕಾಯಕ ಯೋಜನೆಯ ಫಲಾನುಭವಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಪ್ರಮುಖ ಸ್ಥಳಗಳಲ್ಲಿ ಸಹಕಾರ ಮಳಿಗೆಗಳನ್ನು ತೆರೆಯಲಾಗುವುದು’ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಗುರುವಾರ ಸಹಕಾರ ಇಲಾಖೆಯ ‘ಬಡವರ ಬಂಧು’ ಮತ್ತು ‘ಕಾಯಕ ಯೋಜನೆ’ ಫಲಾನುಭವಿಗಳಿಗೆ ಚೆಕ್ ಹಾಗೂ ಸಾಲ ಮಂಜೂರು ಆದೇಶಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರ ಸಂಘಗಳು ಉತ್ಪಾದಿಸುವ ಉತ್ಪನ್ನಗಳು ಸ್ಪರ್ಧಾತ್ಮಕವಾಗಿದ್ದರೆ ಅವುಗಳ ಮಾರಾಟಕ್ಕೆ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಹಾಗೂ ಏರ್‌ಪೋರ್ಟ್‌ಗಳಲ್ಲಿ ಸಹಕಾರ ಮಳಿಗೆ ತೆರೆಯಲಾಗುವುದು’ ಎಂದು ತಿಳಿಸಿದರು.

‘ಬಡವರ ಬಂಧು ಹಾಗೂ ಕಾಯಕ ಯೋಜನೆಯಡಿ ವ್ಯಾಪಾರಿಗಳಿಗೆ ಸರ್ಕಾರ ₹ 2 ಸಾವಿರದಿಂದ ₹10 ಸಾವಿರ ವರೆಗೆ ಬಡ್ಡಿ ರಹಿತ ಸಾಲ ವಿತರಿಸುತ್ತಿದೆ. ಒಂದೂವರೆ ತಿಂಗಳ ಹಿಂದೆ ಯೋಜನೆ ಆರಂಭವಾಗಿದೆ. ಈಗಾಗಲೇ ಕೆಲವು ಬ್ಯಾಂಕ್‌ಗಳಿಗೆ ಶೇಕಡ 45 ರಷ್ಟು ಸಾಲ ಮರುಪಾವತಿಯಾಗಿದೆ. ಬಡವರು ಹೊಟ್ಟೆಪಾಡಿಗೆ ದುಡಿಯುತ್ತಾರೆ. ಅವರು ಸಾಲ ಮುಳುಗಿಸುವುದಿಲ್ಲ. ಬ್ಯಾಂಕಿನ ಹಣ ಮುಳುಗಿಸುವವರು ವಿದೇಶಕ್ಕೆ ಹೋಗಿದ್ದಾರೆ’ ಎಂದರು.

‘ಅಧಿಕಾರಿಗಳು ದಾಖಲೆಗಳಿಗಾಗಿ ತೊಂದರೆ ಕೊಡಬಾರದು. ಬ್ಯಾಂಕ್‌ಗಳು ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು. ಮಾರುಕಟ್ಟೆಯಲ್ಲಿ ಬುಟ್ಟಿ ಇಟ್ಟುಕೊಂಡು ತರಕಾರಿ ಮಾರುತ್ತಿದ್ದರೆ ಮೊಬೈಲ್‌ನಲ್ಲೇ ಚಿತ್ರ ಕ್ಲಿಕ್ಕಿಸಿ ಬ್ಯಾಂಕ್‌ ಖಾತೆ ತೆರೆದು ಸಾಲ ಒದಗಿಸಬೇಕು’ ಎಂದು ಸೂಚಿಸಿದರು.

‘ರಾಜ್ಯ ಸರ್ಕಾರ ಕಳೆದ ಬಾರಿ ಜಿಲ್ಲೆಯ ರೈತರ ₹ 522 ಕೋಟಿ ಸಾಲ ಮನ್ನಾ ಮಾಡಿದೆ. ಈ ಬಾರಿ ಜಿಲ್ಲೆಯ ರೈತರಿಗೆ ಈಗಾಗಲೇ ₹ 6 ಕೋಟಿ ಬಂದಿದೆ. ರಾಷ್ಟ್ರಕ್ಕೆ ಮಾದರಿಯಾಗುವ ರೀತಿಯಲ್ಲಿ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್‌ ಮಾತನಾಡಿ, ‘ಸಮ್ಮಿಶ್ರ ಸರ್ಕಾರ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳನ್ನು ಮುಂದುವರಿಸಿದೆ. ಬಡವರ ಅನುಕೂಲಕ್ಕಾಗಿಯೇ ಹೊಸ ಯೋಜನೆಗಳನ್ನು ಸಹ ಜಾರಿಗೆ ತಂದಿದೆ’ ಎಂದರು.

‘ಮುಳುಗಿಸುವ ಪ್ರವೃತ್ತಿ ಉಳ್ಳವರು ಪೂರ್ಣ ಬ್ಯಾಂಕ್‌ ಅನ್ನೇ ಮುಳುಗಿಸುತ್ತಾರೆ. ಬಡವರಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಇದೆ. ಇವರು ಹಣ ಮಳುಗಿಸುವವವರು ಅವರಲ್ಲ. ಫಲಾನುಭವಿಗಳು ಸಕಾಲದಲ್ಲಿ ಸಾಲ ಮರು ಪಾವತಿಸಿ ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು. ಇನ್ನೂ ಹೆಚ್ಚಿನ ಸಾಲ ಪಡೆಯುವ ವಿಶ್ವಾಸಾರ್ಹತೆಯನ್ನು ಪಡೆಯಬೇಕು’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಮಾಂಜರಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಗಾಂಧಿಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಸಹಕಾರ ಸಂಘಗಳ ಜಂಟಿ ನಿಬಂಧಕ ಐ.ಎಸ್.ಗಿರಡ್ಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಮಹಾಜನ ಇದ್ದರು.

.....BOX1....

ಸರ್ಕಾರ ಅಲುಗಾಡಿಸಲಾಗದು: ಬಂಡೆಪ್ಪ
ಬೀದರ್‌: ‘ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಶಾಸಕರ ನಾಡಿ ಮಿಡಿತ ನಮಗೆ ಗೊತ್ತಿದೆ. ಯಾರಿಂದಲೂ ಸರ್ಕಾರ ಅಲುಗಾಡಿಸಲು ಸಾಧ್ಯವಾಗದು’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

‘ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಈಗ ಬೀಳುತ್ತದೆಯೋ, ಆಗ ಉರುಳುತ್ತದೆಯೋ ಎಂದು ಕಾದು ನೋಡುತ್ತಿದ್ದಾರೆ. ಅಷ್ಟೇ ಅಲ್ಲ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ, ಸರ್ಕಾರ ಸುಭದ್ರವಾಗಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ‘ವಿರೋಧ ಪಕ್ಷದವರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಮುಖಂಡರ ಪ್ರಯತ್ನ ಫಲ ನೀಡದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕೆಲ ಅದಕ್ಷ ಅಧಿಕಾರಿಗಳು ಇದ್ದಾರೆ. ಜಿಲ್ಲೆಯಲ್ಲಿ ಕೆಲಸ ಮಾಡದ ಅಧಿಕಾರಿಗಳ ವರ್ಗಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಬೇಕು’ ಎಂದು ಮನವಿ ಮಾಡಿದರು.

ಮಹಿಳೆಯರು, ಮಕ್ಕಳಿಗೆ ಮಾಝಾ
ಬೀದರ್‌: ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಎರಡೂವರೆ ತಾಸು ತಡವಾಗಿ ಆರಂಭವಾದ ಕಾರಣ ಮಹಿಳೆಯರು ಆಯಾಸಗೊಂಡಿದ್ದರು. ಕೆಲ ಮಕ್ಕಳು ಹಸಿವಿನಿಂದ ಅಳುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ತಕ್ಷಣ ಪಾನೀಯ ಹಾಗೂ ಬಿಸ್ಕತ್‌ ವ್ಯವಸ್ಥೆ ಮಾಡಿದರು.

ಬ್ಯಾಂಕಿನ ಸಿಬ್ಬಂದಿ ಮಾಝಾ, ಗುಡ್‌ಡೇ ಬಿಸ್ಕತ್‌ ಹಾಗೂ ಮ್ಯಾಂಗೊ ಮ್ಯಾಜಿಕ್ ಚಾಕೂಲೇಟ್‌ ಹಂಚಿ ಮಾನವೀಯತೆ ಮೆರೆದರು.
ಎರಡೂವರೆ ತಾಸು ತಡವಾಗಿ ಬಂದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಸಭಿಕರಲ್ಲಿ ಕ್ಷಮೆ ಯಾಚಿಸಿದರು. ‘ನಾನು ಯಾವತ್ತೂ ಕಾರ್ಯಕ್ರಮಕ್ಕೆ ತಡವಾಗಿ ಹೋಗಿಲ್ಲ. ಜನರನ್ನು ಕಾಯಿಸಿಲ್ಲ. ರೇಕುಳಗಿ ಶಂಭುಲಿಂಗೇಶ್ವರ ದೇವಸ್ಥಾನದ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಮೊದಲ ಬಾರಿಗೆ ತಡವಾಗಿದೆ’ ಎಂದು ಸಮಜಾಯಿಸಿ ನೀಡಿದರು.

ಹಾಸ್ಯ ಕಲಾವಿದ ನವಲಿಂಗ ಪಾಟೀಲ ಚುಟುಕು ಹಾಗೂ ಹಾಸ್ಯದ ಮೂಲಕ ಸಭಿಕರ ಮನ ರಂಜಿಸಿದರು. ಚಿಂಚೋಳಿ ತಾಲ್ಲೂಕಿನ ಐನೋಳಿಯ ಮಲ್ಲಿಕಾರ್ಜುನ ಸ್ವಾಮಿ ಜನಪದ, ಭಾವಗೀತೆಗಳನ್ನು ಹಾಡಿ ಜನರನ್ನು ಮಂತ್ರಮುಗ್ಧಗೊಳಿಸಿದರು. ಮಲ್ಲಿಕಾರ್ಜುನ ನಾಗಮಾರಪಳ್ಳಿ ತಬಲಾ ಸಾಥ್‌ ನೀಡಿದರು.

ಆಯೋಜಕರು ರಂಗ ಮಂದಿರದ ಹಿಂಭಾಗದಲ್ಲಿ ಊಟದ ವ್ಯವಸ್ಥೆ ಮಾಡಿದ್ದರಿಂದ ಮಹಿಳೆಯರು, ಮಕ್ಕಳು ಕಾರ್ಯಕ್ರಮ ಮುಗಿದ ನಂತರ ಊಟ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT